James Anderson: ಬರೋಬ್ಬರಿ 7 ವಿಕೆಟ್: ನಿವೃತ್ತಿ ಅಂಚಿನಲ್ಲೂ ಅ್ಯಂಡರ್ಸನ್ ಮಿಂಚಿಂಗ್
James Anderson: ಇಂಗ್ಲೆಂಡ್ ಪರ 187 ಟೆಸ್ಟ್ ಪಂದ್ಯಗಳನ್ನಾಡಿರುವ ಜೇಮ್ಸ್ ಅ್ಯಂಡರ್ಸನ್ ಒಟ್ಟು 700 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್ ಇತಿಹಾಸದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ವೇಗಿ ಹಾಗೂ ವಿಶ್ವದ ಮೂರನೇ ಬೌಲರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದೀಗ ನಿವೃತ್ತಿ ಅಂಚಿನಲ್ಲಿರುವ ಅ್ಯಂಡರ್ಸನ್ ಜುಲೈ 10 ರಿಂದ ಶುರುವಾಗಲಿರುವ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್ಶಿಪ್ ಟೂರ್ನಿಯಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸುವ ಮೂಲಕ ಜೇಮ್ಸ್ ಅ್ಯಂಡರ್ಸನ್ (James Anderson) ಸಂಚಲನ ಸೃಷ್ಟಿಸಿದ್ದಾರೆ. ಅದು ಕೂಡ 7 ವಿಕೆಟ್ಗಳನ್ನು ಕಬಳಿಸುವ ಮೂಲಕ ಎಂಬುದು ವಿಶೇಷ. ಅಂದರೆ ನಿವೃತ್ತಿ ಅಂಚಿನಲ್ಲಿರುವ ಅ್ಯಂಡರ್ಸನ್ ತಮ್ಮ ಕೊನೆಯ ಟೆಸ್ಟ್ ಪಂದ್ಯಕ್ಕೂ ಮುನ್ನ ಕರಾರುವಾಕ್ ಬೌಲಿಂಗ್ ದಾಳಿ ನಡೆಸಿ ಇದೀಗ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಸೌತ್ ಪೋರ್ಟ್ನ ಟ್ರಾಫಲ್ಗರ್ ರೋಡ್ ಗ್ರೌಂಡ್ನಲ್ಲಿ ನಡೆದ ಈ ಲಂಕಾಶೈರ್ ಮತ್ತು ನಾಟಿಂಗ್‌ಹ್ಯಾಮ್‌ಶೈರ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಟಿಂಗ್‌ಹ್ಯಾಮ್‌ಶೈರ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಂಕಾಶೈರ್ ತಂಡದ ಪರ ನಾಯಕ ಕೀಟನ್ ಜೆನ್ನಿಂಗ್ಸ್ ಅಜೇಯ 187 ರನ್ ಬಾರಿಸಿದ್ದರು. ಈ ಭರ್ಜರಿ ಶತಕದ ನೆರವಿನಿಂದ ಲಂಕಾಶೈರ್ ತಂಡವು ಮೊದಲ ಇನಿಂಗ್ಸ್ನಲ್ಲಿ 9 ವಿಕೆಟ್ ನಷ್ಟಕ್ಕೆ 353 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿತು.
ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ನಾಟಿಂಗ್‌ಹ್ಯಾಮ್‌ಶೈರ್ ತಂಡಕ್ಕೆ ಜೇಮ್ಸ್ ಅ್ಯಂಡರ್ಸನ್ ಆರಂಭಿಕ ಆಘಾತ ನೀಡಿದರು. ಆರಂಭಿಕ ಆಟಗಾರ ಹಸೀಬ್ ಹಮೀದ್ (6) ರನ್ನು ಕ್ಲೀನ್ ಬೌಲ್ಡ್ ಮಾಡಿದ ಶುಭಾರಂಭ ಮಾಡಿದ ಅ್ಯಂಡರ್ಸನ್ ಕರಾರುವಾಕ್ ದಾಳಿ ಸಂಘಟಿಸಿದರು.
ಇದನ್ನೂ ಓದಿ: James Anderson: ವಿಶ್ವ ದಾಖಲೆ ಬರೆದ ಜೇಮ್ಸ್ ಅ್ಯಂಡರ್ಸನ್
ಪರಿಣಾಮ 34 ರನ್ಗಳಿಸುವಷ್ಟರಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ತಂಡದ 5 ವಿಕೆಟ್ ಪತನಗೊಂಡಿತು. ಈ ಐದು ವಿಕೆಟ್ಗಳಲ್ಲಿ ನಾಲ್ಕು ವಿಕೆಟ್ಗಳನ್ನು ಜೇಮ್ಸ್ ಅ್ಯಂಡರ್ಸನ್ ಉರುಳಿಸಿದ್ದರು ಎಂಬುದು ವಿಶೇಷ. ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿ ಲಂಕಾಶೈರ್ ಬೌಲರ್ಗಳು ಅಂತಿಮವಾಗಿ ನಾಟಿಂಗ್‌ಹ್ಯಾಮ್‌ಶೈರ್ ತಂಡವನ್ನು ಕೇವಲ 126 ರನ್ಗಳಿಗೆ ಆಲೌಟ್ ಮಾಡಿದರು.
41ನೇ ವಯಸ್ಸಿನಲ್ಲಿ ಅದ್ಭುತ ದಾಳಿ ಸಂಘಟಿಸಿದ ಜೇಮ್ಸ್ ಅ್ಯಂಡರ್ಸನ್ 16 ಓವರ್ಗಳಲ್ಲಿ 35 ರನ್ ನೀಡಿ 7 ವಿಕೆಟ್ ಕಬಳಿಸಿದರು. ಈ ಮೂಲಕ ಪ್ರಥಮ ಇನಿಂಗ್ಸ್ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ತಂಡವು ಅಲ್ಪ ಮೊತ್ತಕ್ಕೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.
ಜೇಮ್ಸ್ ಅ್ಯಂಡರ್ಸನ್ ಬೌಲಿಂಗ್ ವಿಡಿಯೋ:
Six wickets in James Anderson’s first spell in four months.
He’s pretty good, isn’t he? pic.twitter.com/ok4Q0X8KCu
— Vitality County Championship (@CountyChamp) July 2, 2024
ನಿವೃತ್ತಿಗೆ ದಿನಗಣನೆ:
ಜೇಮ್ಸ್ ಅ್ಯಂಡರ್ಸನ್ ಈಗಾಗಲೇ ತಮ್ಮ ನಿವೃತ್ತಿ ದಿನಾಂಕವನ್ನು ಘೋಷಿಸಿದ್ದಾರೆ. ಜುಲೈ 10 ರಿಂದ ಶುರುವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದೊಂದಿಗೆ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಲು ಅ್ಯಂಡರ್ಸನ್ ನಿರ್ಧರಿಸಿದ್ದಾರೆ. ಈ ಟೆಸ್ಟ್ ಪಂದ್ಯದ ಸಿದ್ಧತೆಗಾಗಿ ಇದೀಗ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಕಣಕ್ಕಿಳಿದಿದ್ದು, ಈ ವೇಳೆಯು ಮಿಂಚಿನ ದಾಳಿ ಮೂಲಕ ಮಿಂಚುವಲ್ಲಿ ಅ್ಯಂಡರ್ಸನ್ ಯಶಸ್ವಿಯಾಗಿರುವುದು ವಿಶೇಷ.