ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮರು ಆಯ್ಕೆ; ಬಿಸಿಸಿಐ ಮಹತ್ವದ ನಿರ್ಧಾರ

Rahul Dravid : 2023ರ ವಿಶ್ವಕಪ್ ಸೋಲಿನ ನಂತರ ಟೀಂ ಇಂಡಿಯಾದ ಮುಖ್ಯ ಕೋಚ್ ಬದಲಾಗುತ್ತಾರೋ ಇಲ್ಲವೋ ಎಂಬ ಪ್ರಶ್ನೆಗೆ ಬಿಸಿಸಿಐ ಇದೀಗ ಉತ್ತರ ನೀಡಿದೆ. ಬುಧವಾರ ಮಹತ್ವದ ಘೋಷಣೆ ಮಾಡಿರುವ ಬಿಸಿಸಿಐ, ರಾಹುಲ್ ದ್ರಾವಿಡ್ ಅವರನ್ನು ಮುಖ್ಯ ಕೋಚ್ ಆಗಿ ಉಳಿಸಿಕೊಂಡಿದೆ.

ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮರು ಆಯ್ಕೆ; ಬಿಸಿಸಿಐ ಮಹತ್ವದ ನಿರ್ಧಾರ
ಟೀಂ ಇಂಡಿಯಾ

Updated on: Nov 29, 2023 | 2:13 PM

2023ರ ವಿಶ್ವಕಪ್ (ICC World Cup 2023) ಸೋಲಿನ ನಂತರ ಟೀಂ ಇಂಡಿಯಾದ ಮುಖ್ಯ ಕೋಚ್ ಬದಲಾಗುತ್ತಾರೋ, ಇಲ್ಲವೋ ಎಂಬ ಪ್ರಶ್ನೆಗೆ ಬಿಸಿಸಿಐ (BCCI) ಇದೀಗ ಉತ್ತರ ನೀಡಿದೆ. ಬುಧವಾರ ಮಹತ್ವದ ಘೋಷಣೆ ಮಾಡಿರುವ ಬಿಸಿಸಿಐ, ರಾಹುಲ್ ದ್ರಾವಿಡ್ (Rahul Dravid) ಅವರನ್ನು ಮುಖ್ಯ ಕೋಚ್ ಆಗಿ ಮರು ಆಯ್ಕೆ ಮಾಡಿದೆ. ವಾಸ್ತವವಾಗಿ ವಿಶ್ವಕಪ್ ಫೈನಲ್ ನಂತರ ರಾಹುಲ್ ದ್ರಾವಿಡ್ ಅವರ ಒಪ್ಪಂದವು ಕೊನೆಗೊಂಡಿತ್ತು. ಅಂದಿನಿಂದ ರಾಹುಲ್ ದ್ರಾವಿಡ್ ಬದಲಿಗೆ ವಿವಿಎಸ್ ಲಕ್ಷ್ಮಣ್ ಅವರನ್ನು ಟೀಂ ಇಂಡಿಯಾದ (Team India) ಮುಖ್ಯ ಕೋಚ್ ಆಗಿ ನೇಮಿಸಲಾಗುತ್ತದೆ ಎಂಬ ಊಹಾಪೋಹಗಳು ಸೃಷ್ಟಿಯಾಗಿದ್ದವು. ಆದರೆ ಆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಬಿಸಿಸಿಐ, ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರನ್ನು ಮುಂದುವರೆಸಿದೆ. ಮತ್ತೊಮ್ಮೆ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದಿರುವ ಗುರು ದ್ರಾವಿಡ್, ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಲಿದ್ದಾರೆ.

ವದಂತಿಗಳು ಏನಿದ್ದವು?

ವಾಸ್ತವವಾಗಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಮುಗಿಯುವುದರೊಂದಿಗೆ ಟೀಂ ಇಂಡಿಯಾದಲ್ಲಿ ರಾಹುಲ್ ದ್ರಾವಿಡ್ ಅವರ ಮುಖ್ಯ ಕೋಚ್ ಹುದ್ದೆಯ ಅವಧಿಯೂ ಮುಕ್ತಾಯಗೊಂಡಿತ್ತು. ಆ ಬಳಿಕ ಬಂದ ವರದಿಗಳ ಪ್ರಕಾರ, ರಾಹುಲ್ ದ್ರಾವಿಡ್ ಮತ್ತೊಮ್ಮೆ ಈ ಜವಬ್ದಾರಿಯನ್ನು ವಹಿಸಿಕೊಳ್ಳಲು ನಿರಾಕರಿಸಿದ್ದಾರೆ. ಅಲ್ಲದೆ ತಂಡದೊಂದಿಗಿನ ಅಧಿಕ ಪ್ರಯಾಣ ರಾಹುಲ್ ಅವರ ಈ ನಿರ್ಧಾರಕ್ಕೆ ಕಾರಣ ಎಂದು ವರದಿಯಾಗಿತ್ತು. ಹಾಗೆಯೇ ಕುಟುಂಬಕ್ಕೆ ಹೆಚ್ಚು ಸಮಯ ನೀಡುವ ಉದ್ದೇಶದಿಂದ ರಾಹುಲ್ ಮತ್ತೊಮ್ಮೆ ಮುಖ್ಯ ಕೋಚ್ ಹುದ್ದೆಗೇರುವುದನ್ನು ನಿರಾಕರಿಸಿದ್ದು, ಅವರ ಜಾಗಕ್ಕೆ ಮತ್ತೊಬ್ಬ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಬರಲಿದ್ದಾರೆ ಎಂದು ವರದಿಯಾಗಿತ್ತು.

ಸಂತಸ ವ್ಯಕ್ತಪಡಿಸಿದ ರಾಹುಲ್

ಇನ್ನು ಮತ್ತೊಮ್ಮೆ ಈ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ರಾಹುಲ್ ದ್ರಾವಿಡ್, ‘ತನ್ನ ಮೇಲೆ ನಂಬಿಕೆ ಇಟ್ಟಿರುವ ಬಿಸಿಸಿಐಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಿಸಿಸಿಐ ಯಾವಾಗಲೂ ತನ್ನ ಯೋಜನೆ ಮತ್ತು ದೂರದೃಷ್ಟಿಯನ್ನು ಬೆಂಬಲಿಸುತ್ತದೆ. ತನಗಾಗಿ ಸಾಕಷ್ಟು ತ್ಯಾಗ ಮಾಡಿದ ಕುಟುಂಬಕ್ಕೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ವಿಶ್ವಕಪ್ ಬಳಿಕ ನನ್ನ ಮುಂದೆ ಹೊಸ ಸವಾಲುಗಳಿದ್ದು, ಅವುಗಳನ್ನು ಎದುರಿಸಲು ಸಿದ್ಧ’ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

Rahul Dravid: ಮತ್ತೆ ಐಪಿಎಲ್ ಅಖಾಡಕ್ಕೆ ‘ದಿ ವಾಲ್’? ಯಾವ ತಂಡ ಸೇರ್ತಾರೆ ಗುರು ದ್ರಾವಿಡ್?

ದ್ರಾವಿಡ್‌ಗೆ ಮತ್ತೆ ಮುಖ್ಯ ಕೋಚ್‌ನ ಜವಾಬ್ದಾರಿ ಏಕೆ?

ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ಜಯ್ ಶಾ ಕೂಡ ರಾಹುಲ್ ದ್ರಾವಿಡ್ ಮತ್ತೊಮ್ಮೆ ಈ ಹುದ್ದೆಯನ್ನು ಅಲಂಕರಿಸಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ದ್ರಾವಿಡ್ ಅವರ ಅವಧಿ ಅದ್ಭುತವಾಗಿದೆ ಎಂದಿರುವ ಜಯ್ ಶಾ, ‘ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸತತ 10 ಪಂದ್ಯಗಳನ್ನು ಗೆಲ್ಲುವ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಮತ್ತು ಇದರಲ್ಲಿ ರಾಹುಲ್ ದ್ರಾವಿಡ್ ಪಾತ್ರ ದೊಡ್ಡದಾಗಿದೆ. ಈ ಪ್ರದರ್ಶನದಿಂದಾಗಿ ರಾಹುಲ್ ದ್ರಾವಿಡ್ ಮತ್ತೆ ಮುಖ್ಯ ಕೋಚ್ ಆಗಲು ಅರ್ಹರಾಗಿದ್ದಾರೆ ಎಂದಿದ್ದಾರೆ. ಹಾಗೆಯೇ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಕೂಡ ರಾಹುಲ್ ದ್ರಾವಿಡ್‌ಗೆ ಎಲ್ಲಾ ರೀತಿಯ ಸಹಾಯವನ್ನು ನೀಡಲಾಗುವುದು ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:02 pm, Wed, 29 November 23