
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಆರ್ಸಿಬಿ 2ನೇ ಬಾರಿ ಕಿರೀಟ ಮುಡಿಗೇರಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ ಕಲೆಹಾಕಿದ್ದು 155 ರನ್ಗಳು ಮಾತ್ರ. ಈ ಸುಲಭ ಗುರಿಯನ್ನು ಬೆನ್ನತ್ತಿದ ಆರ್ಸಿಬಿ 18 ಓವರ್ಗಳಲ್ಲಿ ಪಂದ್ಯ ಮುಗಿಸಿ 5 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಈ ಗೆಲುವಿನ ಬಳಿಕ ಮಾತನಾಡಿದ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ಈ ಮೈದಾನದಲ್ಲಿ ಚೇಸಿಂಗ್ ಸುಲಭ ಎಂಬುದು ನಮಗೆ ಗೊತ್ತಿತ್ತು. ಹೀಗಾಗಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದೆವು. ಅಲ್ಲದೆ ಎದುರಾಳಿ ತಂಡದ ಮೂವರು ಬ್ಯಾಟರ್ಗಳನ್ನು ಬೇಗನೆ ಔಟ್ ಮಾಡುವುದು ನಮ್ಮ ಮುಖ್ಯ ಗುರಿಯಾಗಿತ್ತು. ಅದನ್ನು ನಮ್ಮ ಬೌಲರ್ಗಳು ಯಶಸ್ವಿಯಾಗಿ ಮಾಡಿದರು. ಫೈನಲ್ ಪಂದ್ಯದಲ್ಲಿ ಮಾತ್ರ, ನಮ್ಮ ಬೌಲರ್ಗಳು ಇಡೀ ಟೂರ್ನಿಯುದ್ದಕ್ಕೂ ಅಧ್ಭುತ ಬೌಲಿಂಗ್ ಮಾಡಿದ್ದಾರೆ. ವಿಶೇಷವಾಗಿ ಭುವಿ, ರಾಸಿಖ್, ಹೇಝಲ್ವುಡ್, ಸುಯಶ್ ಶರ್ಮಾ, ಶೆಫರ್ಡ್, ಕೃನಾಲ್… ಹೀಗೆ ಎಲ್ಲರೂ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದಾರೆ ಎಂದು ಎಲ್ಲಾ ಬೌಲರ್ಗಳನ್ನು ಶ್ಲಾಘಿಸಿದರು.
ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗುತ್ತೇನೆ. ನಾಯಕನಾಗಿ ಟ್ರೋಫಿ ಎತ್ತಿ ಹಿಡುತ್ತೇನೆ ಎಂದು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಎಲ್ಲವೂ ಹಣೆಬರಹ, ಹೀಗೆ ಆಗುತ್ತೆ… ನಾನು ಆರ್ಸಿಬಿಗೆ ಟ್ರೋಫಿ ಗೆದ್ದುಕೊಡ್ತೀನಿ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಇದಕ್ಕೆಲ್ಲಾ ನಾನು ಕೃತಜ್ಞ ಎಂದು ರಜತ್ ಪಾಟಿದಾರ್ ಭಾವುಕರಾದರು.
ಇನ್ನು ತಂಡದಲ್ಲಿ ವಿರಾಟ್ ಕೊಹ್ಲಿ ಅವರಿಂದ ಸಿಕ್ಕ ಬೆಂಬಲದ ಬಗ್ಗೆ ಮಾತನಾಡಿದ ಪಾಟಿದಾರ್, ವಿರಾಟ್ ಭಾಯ್ ಯಾವಾಗಲೂ ತಂಡದ ಆಟಗಾರ. ಯಾರೇ ಬಂದರೂ, ಅಂದರೆ ಹೊಸ ಆಟಗಾರರು, ಯುವ ಆಟಗಾರರು ಬಂದರೆ ಅವರ ಹಿಂಜರಿಕೆಯನ್ನು ಮನಗಂಡು, ಖುದ್ದಾಗಿ ಹೋಗಿ ಮಾತನಾಡಿ ಧೈರ್ಯ ತುಂಬುವಂತಹ ಆಟಗಾರ ಎಂದು ಕೊಹ್ಲಿಯನ್ನು ಕೊಂಡಾಡಿದ್ದಾರೆ.
ಐಪೆಇಲ್ 2025 ರ ಫೈನಲ್ ಆಡುವಾಗ ಮೊದಲ ಟ್ರೋಫಿ ಗೆಲ್ಲಬೇಕಾದ ಒತ್ತಡವಿತ್ತು. ಆದರೆ ಈ ವರ್ಷ ನಮ್ಮ ತಂಡ ಆಡಿದ ರೀತಿ, ತಂಡದಲ್ಲಿದ್ದವರ ಫಾರ್ಮ್ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಹೀಗಾಗಿಈ ಬಾರಿ ಯಾವುದೇ ಒತ್ತಡವಿಲ್ಲದೇ ಫೈನಲ್ ಆಡಿದ್ದೇವೆ ಎಂದು ಪಾಟಿದಾರ್ ತಿಳಿಸಿದ್ದಾರೆ.
ಇದನ್ನೂ ಓದಿ: IPL 2026 Car Winner: ಈ ಬಾರಿ ಟಾಟಾ ಕಾರ್ ಪ್ರಶಸ್ತಿ ಸಿಕ್ಕಿದ್ದು ಯಾರಿಗೆ ಗೊತ್ತಾ?
ಅಂತಿಮವಾಗಿ ಪ್ರತಿ ಸ್ಟೇಡಿಯಂಗೂ ಬಂದು ನಮ್ಮ ಹೋಮ್ ಗ್ರೌಂಡ್ನಂತೆ ಭಾಸುವಾಗುವಂತೆ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಧ್ಯನ್ಯವಾದಗಳನ್ನು ಅರ್ಪಿಸಿದ ರಜತ್ ಪಾಟಿದಾರ್, ಈ ಕಪ್ ನಿಮ್ಮದೇ… ಈ ಸಲನೂ ಕಪ್ ನಮ್ಮದೇ ಎನ್ನುವ ಮೂಲಕ ಮಾತು ಮುಗಿಸಿದರು.