Ranji Trophy 2024: ಗೋವಾ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ ಮಯಾಂಕ್- ಪಡಿಕ್ಕಲ್..!

Ranji Trophy 2024: ಶ್ರೀಕಂಠದತ್ತ ನರಸಿಂಹರಾಜ ರಾಜ ಒಡೆಯರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಗೋವಾ ನಡುವಿನ ರಣಜಿ ಟ್ರೋಫಿ ಪಂದ್ಯದಲ್ಲಿ ಎರಡನೇ ದಿನದಾಟದಂತ್ಯಕ್ಕೆ ಕರ್ನಾಟಕ ತಂಡ 4 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿದೆ

Ranji Trophy 2024: ಗೋವಾ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ ಮಯಾಂಕ್- ಪಡಿಕ್ಕಲ್..!
ಮಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್

Updated on: Jan 20, 2024 | 8:35 PM

ಶ್ರೀಕಂಠದತ್ತ ನರಸಿಂಹರಾಜ ರಾಜ ಒಡೆಯರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಗೋವಾ (Goa vs Karnataka) ನಡುವಿನ ರಣಜಿ ಟ್ರೋಫಿ (Ranji Trophy 2024) ಪಂದ್ಯದಲ್ಲಿ ಎರಡನೇ ದಿನದಾಟದಂತ್ಯಕ್ಕೆ ಕರ್ನಾಟಕ ತಂಡ 4 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿದೆ. ತಂಡದ ಪರ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಹಾಗೂ ದೇವದತ್ ಪಡಿಕ್ಕಲ್ (Devdutt Padikkal) ಅಮೋಘ ಶತಕ ಸಿಡಿಸುವ ಮೂಲಕ ತಂಡವನ್ನು ಭದ್ರ ಸ್ಥಿತಿಯಲ್ಲಿರಿಸಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಗೋವಾ ಕಲೆಹಾಕಿರುವ 321 ರನ್​ಗಳ ಗುರಿ ಬೆನ್ನಟ್ಟಿರುವ ಕರ್ನಾಟಕ ಇನ್ನು 70 ರನ್​ಗಳಿಂದ ಹಿಂದೆ ಇದ್ದು, ತಂಡದ ಪರ ನಿಖಿನ್ ಜೋಶ್ ಹಾಗೂ ಎಸ್ ಶರತ್ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

321 ರನ್​ಗಳಿಗೆ ಗೋವಾ ಆಲೌಟ್

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗೋವಾ ತಂಡ 321 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತು. ತಂಡದ ಪರ ಸ್ನೇಹಲ್ ಕೌಠಂಕರ್ 83 ರನ್​ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರೆ, ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಕೂಡ 52 ರನ್​ಗಳ ಕೊಡುಗೆ ನೀಡಿದರು. ಕೊನೆಯಲ್ಲಿ ಹೆರಾಂಬ್ ಪರಬ್ ಕೂಡ 53 ರನ್​ಗಳ ಇನ್ನಿಂಗ್ಸ್ ಆಡಿದರು. ಕರ್ನಾಟಕ ಪರ ವೈಶಾಕ್ ವಿಜಯ್ ಕುಮಾರ್, ಎಂ ವೆಂಕಟೇಶ್, ರೋಹಿತ್ ಕುಮಾರ್ ತಲಾ 3 ವಿಕೆಟ್ ಪಡೆದರು.

251ರನ್ ಕಲೆಹಾಕಿದ ಕರ್ನಾಟಕ

ಗೋವಾ ತಂಡವನ್ನು 321 ರನ್​ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ದೇಗಾ ನಿಶ್ಚಲ್ 16 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಜೊತೆಯಾದ ನಾಯಕ ಮಯಾಂಕ್ ಹಾಗೂ ಪಡಿಕ್ಕಲ್ ದ್ವಿಶತಕದ ಜೊತೆಯಾಟವನ್ನಾಡಿದಲ್ಲದೆ ಇಬ್ಬರೂ ಕೂಡ ಶತಕ ಸಿಡಿಸಿ ಮಿಂಚಿದರು. ನಂತರ ಕೇವಲ 6 ರನ್​ಗಳ ಅಂತರದಲ್ಲಿ ಈ ಇಬ್ಬರ ವಿಕೆಟ್ ಕೂಡ ಪತನವಾಯಿತು. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ರೋಹಿತ್ ಕುಮಾರ್ 3 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ದಿನದಾಟದಂತ್ಯಕ್ಕೆ ಕರ್ನಾಟಕ 4 ವಿಕೆಟ್ ನಷ್ಟಕ್ಕೆ 251ರನ್ ಕಲೆಹಾಕಿದೆ.

ಮಯಾಂಕ್- ಪಡಿಕ್ಕಲ್ ಶತಕ

ಈ ಸೀಸನ್​ ಎರಡನೇ ಶತಕ ಸಿಡಿಸಿದ ಮಯಾಂಕ್ ಗೋವಾ ವಿರುದ್ಧದ ಈ ರಣಜಿ ಟ್ರೋಫಿ ಪಂದ್ಯದಲ್ಲಿ 180 ಎಸೆತಗಳನ್ನು ಎದುರಿಸಿ 10 ಬೌಂಡರಿಗಳ ನೆರವಿನಿಂದ 114 ರನ್​ಗಳ ಇನ್ನಿಂಗ್ಸ್ ಅಡಿದರು. ಇವರೊಂದಿಗೆ ದ್ವಿಶತಕದ ಜೊತೆಯಾಟವನ್ನಾಡಿದ ದೇವದತ್ ಪಡಿಕ್ಕಲ್ 142 ಎಸೆತಗಳಲ್ಲಿ 13 ಬೌಂಡರಿಗಳ ನೆರವಿನಿಂದ 101 ರನ್ ಗಳಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:34 pm, Sat, 20 January 24