Asia Cup 2023: ಏಷ್ಯಾಕಪ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಆಗಸ್ಟ್ 30 ರಿಂದ ಪ್ರಾರಂಭವಾಗಲಿರುವ ಈ ಟೂರ್ನಿಗಾಗಿ ಶೀಘ್ರದಲ್ಲೇ ಟೀಮ್ ಇಂಡಿಯಾವನ್ನು ಘೋಷಿಸಲಾಗುತ್ತದೆ. ಆದರೆ ಈ ಬಾರಿ ತಂಡದಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಗಲಿದೆ ಎಂಬುದೇ ಪ್ರಶ್ನೆ. ಏಕೆಂದರೆ ಏಷ್ಯಾಕಪ್ ಮೂಲಕ ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಹಿಂತಿರುಗಲಿದ್ದಾರೆ. ಈ ಮೂವರ ಆಗಮನದೊಂದಿಗೆ ಕೆಲ ಆಟಗಾರರು ಹೊರಬೀಳುವುದು ಖಚಿತ.
ಆದರೆ ಈ ಮೂವರಲ್ಲಿ ಇಬ್ಬರಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ನೀಡಬಾರದೆಂದು ಅಭಿಪ್ರಾಯಪಟ್ಟಿದ್ದಾರೆ ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ. ಚಾನೆಲ್ ಚರ್ಚೆಯೊಂದರಲ್ಲಿ ಮಾಜಿ ಆಟಗಾರರಾದ ಸಂದೀಪ್ ಪಾಟೀಲ್ ಮತ್ತು ಎಂಎಸ್ಕೆ ಪ್ರಸಾದ್ ಜೊತೆ ಮಾತನಾಡಿದ ರವಿ ಶಾಸ್ತ್ರಿ ಕೆಎಲ್ ರಾಹುಲ್ ಹಾಗೂ ಅಯ್ಯರ್ ಅವರನ್ನು ಈಗ ಆಯ್ಕೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿದ ರವಿ ಶಾಸ್ತ್ರಿ, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಸುದೀರ್ಘ ಸಮಯದಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಇದೀಗ ಗಾಯದಿಂದ ಚೇತರಿಸಿಕೊಂಡು ಹಿಂತಿರುಗುತ್ತಿದ್ದಾರೆ. ಇಬ್ಬರು ಆಟಗಾರರು ಕಂಬ್ಯಾಕ್ ಮಾಡಲು ಉತ್ಸುಕರಾಗಿದ್ದಾರೆ.
ಆದರೆ ದೀರ್ಘಾವಧಿಯಿಂದ ತಂಡದಿಂದ ಹೊರಗುಳಿದಿರುವ ಇವರನ್ನು ಪ್ಲೇಯಿಂಗ್ ಇಲೆವೆನ್ನಲ್ಲಿ ಆಡಿಸುವುದು ಸೂಕ್ತವಲ್ಲ. ಏಕೆಂದರೆ ಗಾಯದ ಬಳಿಕ ಮರಳಿದಾಗ ಅವರ ಚಲನೆಯು ಈ ಹಿಂದಿನಂತೆ ಇರುವುದಿಲ್ಲ. ಇದರಿಂದ ವಿಕೆಟ್ ಕೀಪರ್ ಬ್ಯಾಟರ್ ಆಗಿ ಬಳಸಿಕೊಳ್ಳಲಾಗುವುದಿಲ್ಲ ಎಂದು ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಪಾದಾರ್ಪಣೆ ಮಾಡಿದ್ದ ತಿಲಕ್ ವರ್ಮಾ ಅವರ ಬ್ಯಾಟಿಂಗ್ ಅನ್ನು ಹಾಡಿ ಹೊಗಳಿರುವ ರವಿ ಶಾಸ್ತ್ರಿ ಯುವ ದಾಂಡಿಗನಿಗೆ ಅವಕಾಶ ನೀಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್ನನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ ವಿಶ್ವಕಪ್ ತಂಡದಿಂದ 7 ಆಟಗಾರರು ಔಟ್..!
ಇದೇ ವೇಳೆ ರವಿ ಶಾಸ್ತ್ರಿ, ಸಂದೀಪ್ ಪಾಟೀಲ್ ಮತ್ತು ಎಂಎಸ್ಕೆ ಪ್ರಸಾದ್ ಜಂಟಿಯಾಗಿ ಏಷ್ಯಾಕಪ್ಗಾಗಿ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದಾರೆ. ಈ ತಂಡದಲ್ಲಿ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ಗೆ ಸ್ಥಾನ ನೀಡಿಲ್ಲ ಎಂಬುದು ವಿಶೇಷ. ಸಂದೀಪ್ ಪಾಟೀಲ್, ಎಂಎಸ್ಕೆ ಪ್ರಸಾದ್ ಹಾಗೂ ರವಿ ಶಾಸ್ತ್ರಿ ಏಷ್ಯಾಕಪ್ಗೆ ಆಯ್ಕೆ ಮಾಡಿದ ಟೀಮ್ ಇಂಡಿಯಾ ಈ ಕೆಳಗಿನಂತಿದೆ.
ಶುಭ್ಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.
ಈ ಬಾರಿಯ ಏಷ್ಯಾಕಪ್ ಆಗಸ್ಟ್ 30 ರಿಂದ ಶುರುವಾಗಲಿದೆ. ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕ್ ತಂಡ ನೇಪಾಳವನ್ನು ಎದುರಿಸಲಿದೆ. ಇನ್ನು ಟೀಮ್ ಇಂಡಿಯಾ ಸೆಪ್ಟೆಂಬರ್ 2 ರಂದು ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ.