ಫೆಬ್ರವರಿ 6 ರಿಂದ ಆರಂಭವಾಗಲಿರುವ ಬಹುನಿರೀಕ್ಷಿತ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಈಗಾಗಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾರತ ತಂಡವನ್ನು ಪ್ರಕಟ ಮಾಡಿದೆ. ಕೆಲವು ಅಚ್ಚರಿಯ ಆಯ್ಕೆಗಳು ನಡೆದರೆ, ಪ್ರಮುಖ ಬೌಲರ್ಗಳಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನೂ ಕೆಲ ಆಟಗಾರರು ಇಂಜುರಿ ಸಮಸ್ಯೆಯಿಂದ ಸಂಪೂರ್ಣ ಹೊರಬಂದಿಲ್ಲ. ನಾಯಕನಾಗಿ ರೋಹಿತ್ ಶರ್ಮಾ (Rohit Sharma) ಕಮ್ಬ್ಯಾಕ್ ಮಾಡಿದ್ದಾರೆ. ಜೊತೆಗೆ ರಿಸ್ಟ್ ಸ್ಪಿನ್ನರ್ ಕುಲ್ದೀಪ್ ಯಾದವ್ ಕೂಡ ಏಕದಿನ ಮತ್ತು ಟಿ20 ತಂಡಕ್ಕೆ ಪುನರಾಗಮನ ಕಂಡಿದ್ದರೆ, ಯುವ ಬೌಲರ್‌ಗಳಾದ ಲೆಗ್-ಸ್ಪಿನ್ನರ್ ರವಿ ಬಿಷ್ಣೋಯಿ ಹಾಗೂ ವೇಗಿ ಆವೇಶ್ ಖಾನ್ ತಂಡದಲ್ಲಿ ಸ್ಥಾನ ಪಡೆದಿರುವ ಹೊಸಮುಖವಾಗಿದ್ದಾರೆ. ಇದರ ನಡುವೆ 26 ವರ್ಷದ ದೀಪಕ್ ಹೂಡಾ ಅವರಿಗೆ ಏಕದಿನ ತಂಡದಲ್ಲಿ ಸ್ಥಾನ ನೀಡುರುವುದು ಅಚ್ಚರಿ ಮೂಡಿಸಿದೆ. ಇದರ ನಡುವೆ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಅವರನ್ನು ಏಕದಿನ ಅಷ್ಟೇ ಅಲ್ಲದೆ ಟಿ20 ತಂಡದಿಂದ ಹೊರಗಿಟ್ಟಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಹಲವು ವರ್ಷಗಳ ಕಾಲ ಅವಕಾಶ ವಂಚಿತರಾಗಿದ್ದ ಅನುಭವಿ ಆಫ್ ಸ್ಪಿನ್ನರ್ ಆರ್. ಅಶ್ವಿನ್, ಕಳೆದ ವರ್ಷವಷ್ಟೆ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಮೂಲಕ ಟೀಮ್ ಇಂಡಿಯಾ ಪರ ಭರ್ಜರಿ ಕಮ್ಬ್ಯಾಕ್ ಮಾಡಿದ್ದರು. ಆದರೆ, ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ನೀಡಿದ ಕಳಪೆ ಪ್ರದರ್ಶನ ಬಳಿಕ ಮಾಂತ್ರಿಕ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಮತ್ತೊಮ್ಮೆ ಭಾರತ ತಂಡದಿಂದ ಹೊರಬಿದ್ದಿದ್ದಾರೆ. ವಿಂಡೀಸ್ ವಿರುದ್ಧದ ತಲಾ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಮತ್ತು ಟಿ20 ಕ್ರಿಕೆಟ್ ಸರಣಿಗಳಿಂದ ಅಶ್ವಿನ್ ಅವರನ್ನು ಕೈಬಿಡಲಾಗಿದೆ.
ಈ ಸರಣಿಯಿಂದ ಶಮಿ , ಬುಮ್ರಾ ವಿಶ್ರಾಂತಿ ಪಡೆದುಕೊಂಡಿದ್ದಾರೆ. ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಗಾಯದ ಕಾರಣ ಲಭ್ಯವಾಗುವುದಿಲ್ಲ ಎಂದು ಬಿಸಿಸಿಐ ಮಾಹಿತಿ ನೀಡಿದೆ. ಆದರೆ, ಅಶ್ವಿನ್ ಅಲಭ್ಯತೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಿರುವಾಗ ಟೈಮ್ಸ್ ಆಫ್ ಇಂಡಿಯಾ ವರದಿಯೊಂದನ್ನು ಮಾಡಿದ್ದು, ಇದರ ಪ್ರಕಾರ ತಮಿಳುನಾಡು ಮೂಲದ ಸ್ಪಿನ್ನರ್ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಗಾಯಗೊಂಡಿದ್ದು, ಮುಂದಿನ ಒಂದೂವರೆ ತಿಂಗಳು ಕಾಲ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ ಎಂದು ಹೇಳಿದೆ.
ಆಫ್ರಿಕಾ ವಿರುದ್ಧದ ಸರಣಿ ವೇಳೆ ಅಶ್ವಿನ್ ತಮ್ಮ ಅಂಗಾಲನ್ನು ಉಳುಕಿಸಿಕೊಂಡು ಬಿದ್ದು ಕೈಗಳಿಗೂ ಪೆಟ್ಟು ಮಾಡಿಕೊಂಡಿದ್ದಾರೆ. ಆದರೆ ಗಾಯದ ಸಮಸ್ಯೆ ಎಷ್ಟು ಗಂಭೀರವಾಗಿದೆ ಎಂಬುದರ ಬಗ್ಗೆ ಬಿಸಿಸಿಐ ಮಾಹಿತಿ ನೀಡಿಲ್ಲ. ಹೀಗಾಗಿ ಅಶ್ವಿನ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಆಯ್ಕೆ ಆಗಿಲ್ಲ ಎಂದು ಹೇಳಲಾಗಿದೆ.
ಏಕದಿನ ತಂಡ: ರೋಹಿತ್ ಶರ್ಮ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಋತುರಾಜ್ ಗಾಯಕ್ವಾಡ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೀ), ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಆವೇಶ್ ಖಾನ್.
ಟಿ20 ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಅಕ್ಸರ್ ಪಟೇಲ್, ಯುಜವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಭುವನೇಶ್ವರ್, ಅವೇಶ್ ಖಾನ್, ಹರ್ಷಲ್ ಪಟೇಲ್.
ಇತ್ತ ವಿಂಡೀಸ್ ಕ್ರಿಕೆಟ್ ಮಂಡಳಿ ಏಕದಿನಕ್ಕೆ ವೆಸ್ಟ್ ಇಂಡೀಸ್ ತಂಡವನ್ನು ಹೆಸರಿಸಿದೆ. ಕೆಲವೊಂದು ಅಚ್ಚರಿಯ ಆಯ್ಕೆ ನಡೆದಿದ್ದು ಮಾರಕ ವೇಗಿ ಕೇಮರ್ ರೋಚ್ (Kemar Roach) ಕಮ್ಬ್ಯಾಕ್ ಮಾಡಿದ್ದಾರೆ. ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ಎನ್ಕ್ರುಮ್ ಬೊನ್ನೆರ್ ಮತ್ತು ಬ್ರಾಂಡನ್ ಕಿಂಗ್ ತಂಡ ಸೇರಿಕೊಂಡಿದ್ದಾರೆ
ವೆಸ್ಟ್ ಇಂಡೀಸ್ ತಂಡ: ಕೀರೊನ್ ಪೊಲಾರ್ಡ್ (ನಾಯಕ), ಕೀಮರ್ ರೋಚ್, ಎನ್ಕ್ರುಮ್ ಬೊನ್ನೆರ್, ಬ್ರಾಂಡನ್ ಕಿಂಗ್, ಫಾಬಿನ್ ಅಲೆನ್, ಡ್ಯಾರೆನ್ ಬ್ರಾವೋ, ಶಮರ್ ಬ್ರೋಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೆಲ್ ಹುಸೈನ್, ಅಲ್ಜಾರಿ ಜೋಸೆಫ್, ನಿಕೋಲಸ್ ಪೂರನ್, ರೊಮಾರಿಯೊ ಶೆಪರ್ಡ್, ಓಡೆನ್ ಸ್ಮಿತ್, ಹೇಡನ್ ವಾಲ್ಶ್.
Pro Kabaddi: ಯುಪಿ ಯೋಧಾ ವಿರುದ್ಧ ಪುಣೇರಿ ಪಲ್ಟನ್ಗೆ ಜಯ: ಆದರೂ ಬೆಂಗಳೂರೇ ಟಾಪರ್