ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯ 14ನೇ ಪಂದ್ಯದಲ್ಲಿ ರೊಮೊರಿಯೊ ಶೆಫರ್ಡ್ ಬಿರುಗಾಳಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಕೊನೆಯ ಓವರ್ನಲ್ಲಿ ರೊಮಾರಿಯೊ ಬ್ಯಾಟ್ನಿಂದ ಮೂಡಿಬಂದ ರನ್ಗಳ ನೆರವಿನಿಂದ ಈ ಪಂದ್ಯದಲ್ಲಿ ಎಂಐ ಎಮಿರೇಟ್ಸ್ ತಂಡವು ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಅಬುಧಾನಿ ನೈಟ್ ರೈಡರ್ಸ್ ತಂಡದ ನಾಯಕ ಸುನಿಲ್ ನರೈನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಎಂಐ ಎಮಿರೇಟ್ಸ್ ಪರ ಕುಸಾಲ್ ಪೆರೇರಾ 23 ರನ್ ಬಾರಿಸಿದರೆ, ಮುಹಮ್ಮದ್ ವಸೀಮ್ 38 ರನ್ ಗಳಿಸಿದರು.
ಇನ್ನು ನಾಯಕ ನಿಕೋಲಸ್ ಪೂರನ್ 26 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 49 ರನ್ ಸಿಡಿಸಿದರು. ಇದಾಗ್ಯೂ ಎಂಐ ಎಮಿರೇಟ್ಸ್ ತಂಡದ ಸ್ಕೋರ್ 150ರ ಗಡಿದಾಟಿರಲಿಲ್ಲ.
7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೊಮೊರಿಯಾ ಶೆಫರ್ಡ್ ಕೊನೆಯ ಓವರ್ಗಳ ವೇಳೆ ಅಬ್ಬರಿಸಿದರು. ಅದರಲ್ಲೂ ಅಲಿ ಖಾನ್ ಎಸೆದ ಕೊನೆಯ ಓವರ್ನಲ್ಲಿ 3 ಸಿಕ್ಸ್ ಹಾಗೂ 2 ಫೋರ್ ಚಚ್ಚುವ ಮೂಲಕ ಒಟ್ಟು 26 ರನ್ ಕಲೆಹಾಕಿದರು. ಈ ಮೂಲಕ ಎಂಐ ಎಮಿರೇಟ್ಸ್ ತಂಡದ ಸ್ಕೋರ್ ಅನ್ನು 20 ಓವರ್ಗಳಲ್ಲಿ 186 ಕ್ಕೆ ತಂದು ನಿಲ್ಲಿಸಿದರು.
Last-over fireworks from Romario Shepherd! 💥
The Windies all-rounder smashed 38* off 13 balls to lift the MI Emirates to a score of 186! 👏#ILT20onFanCode pic.twitter.com/iV5w7l8Zma
— FanCode (@FanCode) January 21, 2025
187 ರನ್ಗಳ ಕಠಿಣ ಗುರಿ ಪಡೆದ ಅಬುಧಾಬಿ ನೈಟ್ ರೈಡರ್ಸ್ ತಂಡಕ್ಕೆ ಕೈಲ್ ಮೇಯರ್ಸ್ (22) ಹಾಗೂ ಅ್ಯಂಡ್ರಿಸ್ ಗೌಸ್ (34) ಉತ್ತಮ ಆರಂಭ ಒದಗಿಸಿದ್ದರು. ಆದರೆ ಆರಂಭಿಕರಿಬ್ಬರು ಪೆವಿಲಿಯನ್ಗೆ ಮರಳುತ್ತಿದ್ದಂತೆ ದಿಢೀರ್ ಕುಸಿತಕ್ಕೊಳಗಾದ ನೈಟ್ ರೈಡರ್ಸ್ 56 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ ಕಣಕ್ಕಿಳಿದ ಆ್ಯಂಡ್ರೆ ರಸೆಲ್ 23 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 37 ರನ್ ಬಾರಿಸಿದರು. ಈ ಮೂಲಕ ತಂಡದ ಮೊತ್ತವನ್ನು 150ರ ಗಡಿದಾಟಿಸಿದರು. ಅಂತಿಮವಾಗಿ ಅಬುಧಾಬಿ ನೈಟ್ ರೈಡರ್ಸ್ ತಂಡವು 9 ವಿಕೆಟ್ ಕಳೆದುಕೊಂಡು 159 ರನ್ಗಳಿಸಿ 28 ರನ್ಗಳಿಂದ ಸೋಲೊಪ್ಪಿಕೊಂಡಿತು.
ಈ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ 13 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ರೊಮೊರಿಯಾ ಶೆಫರ್ಡ್ ಅಜೇಯ 38 ರನ್ ಬಾರಿಸಿದ್ದರು. ಅದರಲ್ಲೂ ಕೊನೆಯ ಓವರ್ನಲ್ಲಿ 26 ರನ್ ಕಲೆಹಾಕಿದ್ದರು.
ಇನ್ನು ಬೌಲಿಂಗ್ನಲ್ಲಿ 2 ಓವರ್ಗಳಲ್ಲಿ 14 ರನ್ ನೀಡಿ 2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆಲ್ರೌಂಡರ್ ಪ್ರದರ್ಶನದ ಫಲವಾಗಿ ರೊಮೊರಿಯೊ ಶೆಫರ್ಡ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು.
ಹೀಗೆ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ರೊಮಾರಿಯೊ ಶೆಫರ್ಡ್ ಅವರು ಈ ಬಾರಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯಲಿದ್ದಾರೆ.