ಹೇಲಿ ಸ್ಪೋಟಕ ಶತಕ: ಫೋಬೆ ವಿಶ್ವ ದಾಖಲೆಯ ಅರ್ಧಶತಕ

Hayley Matthews: 213 ರನ್​ಗಳ ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡಕ್ಕೆ ನಾಯಕಿ ಹೇಲಿ ಮ್ಯಾಥ್ಯೂಸ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಮೊದಲ ಓವರ್​ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಹೇಲಿ 64 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 20 ಫೋರ್​ಗಳೊಂದಿಗೆ 132 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಹೇಲಿ ಸ್ಪೋಟಕ ಶತಕ: ಫೋಬೆ ವಿಶ್ವ ದಾಖಲೆಯ ಅರ್ಧಶತಕ
Hayley Matthews vs phoebe litchfield
Updated By: ಝಾಹಿರ್ ಯೂಸುಫ್

Updated on: Oct 02, 2023 | 5:25 PM

ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ಮಹಿಳಾ ತಂಡ ಹಾಗೂ ವೆಸ್ಟ್ ಇಂಡೀಸ್​ ಮಹಿಳಾ ತಂಡಗಳ ನಡುವಣ 2ನೇ ಟಿ20 ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕಿ ಹೇಲಿ ಮ್ಯಾಥ್ಯೂಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಎಲ್ಲಿಸ್ ಪೆರ್ರಿ ಕೇವಲ 46 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 70 ರನ್ ಬಾರಿಸಿದರು. ಇನ್ನು 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಫೋಬೆ ಲಿಚ್​ಫೀಲ್ಡ್​ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಫೋಬೆ ವಿಶ್ವ ದಾಖಲೆ:

ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಫೋಬೆ ಲಿಚ್ಫೀಲ್ಡ್ ಕೇವಲ 18 ಎಸತೆಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಮಹಿಳಾ ಟಿ20 ಕ್ರಿಕೆಟ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಸಿಡಿಸಿದ ನ್ಯೂಝಿಲೆಂಡ್​ ಸೋಫಿ ಡಿವೈನ್ (18 ಎಸೆತಗಳು) ಅವರ ವಿಶ್ವ ದಾಖಲೆಯನ್ನು ಸರಿಗಟ್ಟಿದರು.

ಅಲ್ಲದೆ ಕೇವಲ 19 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ ಅಜೇಯ 52 ರನ್ ಬಾರಿಸುವ ಮೂಲಕ ಫೋಬೆ ಲಿಚ್​ಫೀಲ್ಡ್ ಆಸ್ಟ್ರೇಲಿಯಾ ಪರ ಅತೀ ವೇಗವಾಗಿ ಟಿ20 ಅರ್ಧಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದರು. ಈ ಸ್ಪೋಟಕ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿತು.

ಹೇಲಿ ಮ್ಯಾಥ್ಯೂಸ್ ಸಿಡಿಲಬ್ಬರದ ಸೆಂಚುರಿ:

213 ರನ್​ಗಳ ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡಕ್ಕೆ ನಾಯಕಿ ಹೇಲಿ ಮ್ಯಾಥ್ಯೂಸ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಮೊದಲ ಓವರ್​ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಹೇಲಿ 64 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 20 ಫೋರ್​ಗಳೊಂದಿಗೆ 132 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಅಷ್ಟರಲ್ಲಾಗಲೇ ವೆಸ್ಟ್ ಇಂಡೀಸ್ ತಂಡವು 18.5 ಓವರ್​ಗಳಲ್ಲಿ 204 ರನ್​ ಕಲೆಹಾಕಿತ್ತು. ಅಂತಿಮ ಓವರ್​ನಲ್ಲಿ 8 ರನ್​ಗಳನ್ನು ಬಾರಿಸುವ ಮೂಲಕ ವೆಸ್ಟ್ ಇಂಡೀಸ್ ತಂಡ 19.5 ಓವರ್​ಗಳಲ್ಲಿ ಗುರಿ ಮುಟ್ಟಿತು. ಈ ಮೂಲಕ ವಿಂಡೀಸ್ ವನಿತೆಯರು 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಅಲಿಸ್ಸಾ ಹೀಲಿ (ನಾಯಕಿ) , ಬೆತ್ ಮೂನಿ , ತಹ್ಲಿಯಾ ಮೆಕ್‌ಗ್ರಾತ್ , ಆಶ್ಲೀ ಗಾರ್ಡ್ನರ್ , ಎಲ್ಲಿಸ್ ಪೆರ್ರಿ , ಫೋಬೆ ಲಿಚ್‌ಫೀಲ್ಡ್ , ಅನ್ನಾಬೆಲ್ ಸದರ್‌ಲ್ಯಾಂಡ್ , ಜಾರ್ಜಿಯಾ ವೇರ್‌ಹ್ಯಾಮ್ , ಜೆಸ್ ಜೊನಾಸೆನ್ , ಮೇಗನ್ ಶುಟ್ , ಡಾರ್ಸಿ ಬ್ರೌನ್.

ಇದನ್ನೂ ಓದಿ: ಜಸ್ಟ್​ 22 ರನ್ಸ್​: ವಿಶ್ವ ದಾಖಲೆ ಹೊಸ್ತಿಲಲ್ಲಿ ರೋಹಿತ್ ಶರ್ಮಾ

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಹೇಲಿ ಮ್ಯಾಥ್ಯೂಸ್ (ನಾಯಕಿ) , ಶಬಿಕಾ ಗಜ್ನಾಬಿ , ಸ್ಟಾಫನಿ ಟೇಲರ್ , ರಶಾದಾ ವಿಲಿಯಮ್ಸ್ (ವಿಕೆಟ್ ಕೀಪರ್ ) , ಶೆಮೈನ್ ಕ್ಯಾಂಪ್ಬೆಲ್ಲೆ , ಚಿನೆಲ್ಲೆ ಹೆನ್ರಿ , ಆಲಿಯಾ ಅಲೀನ್ , ಜೈದಾ ಜೇಮ್ಸ್ , ಶಾಮಿಲಿಯಾ ಕಾನ್ನೆಲ್ , ಅಫಿ ಫ್ಲೆಚರ್ , ಕರಿಷ್ಮಾ ರಾಮ್ಹರಾಕ್.