ನಾಯಕತ್ವದಿಂದ ಕೆಳಗಿಳಿದ ಬಳಿಕವಂತು ವಿರಾಟ್ ಕೊಹ್ಲಿ (Virat Kohli) ಕಳಪೆ ಫಾರ್ಮ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸತತ ವೈಫಲ್ಯ ಅನುಭವಿಸುತ್ತಿರುವ ಕೊಹ್ಲಿ ದೊಡ್ಡ ಸ್ಕೋರ್ ಕಲೆಹಾಕುವಲ್ಲಿ ಎಡವುತ್ತಿದ್ದಾರೆ. ಇತ್ತೀಚೆಗಷ್ಟೆ ಮುಕ್ತಾಯಗೊಂಡ ಇಂಗ್ಲೆಂಡ್ (England) ಪ್ರವಾಸದಲ್ಲಿ ಕೊಹ್ಲಿ ನೀಡಿದ ಪ್ರದರ್ಶನ ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತು. ಕೇವಲ ಭಾರತದ ಮಾಜಿ ಆಟಗಾರರು ಮಾತ್ರವಲ್ಲದೆ ವಿದೇಶಿ ದಿಗ್ಗಜ ಪ್ಲೇಯರ್ಸ್ ಕೂಡ ಕೊಹ್ಲಿ ಕಳಪೆ ಆಟದ ಬಗ್ಗೆ ಹೇಳಿಕೆ ನೀಡಿದರು. ಇಂಗ್ಲೆಂಡ್ ವಿರದ್ಧದ ಟೆಸ್ಟ್ನ ಎರಡು ಇನ್ನಿಂಗ್ಸ್ನಲ್ಲಿ 11 ಮತ್ತು 10 ರನ್ ಗಳಿಸಿ ಔಟಾಗಿದ್ದ ಕೊಹ್ಲಿ ಆಡಿದ ಎರಡು ಟಿ20 ಪಂದ್ಯಗಳಲ್ಲೂ 1 ಮತ್ತು 11 ರನ್ಗೆ ನಿರ್ಗಮಿಸಿದ್ದರು. ಎರಡನೇ ಏಕದಿನ ಪಂದ್ಯದಲ್ಲಿ 25 ಎಸೆತಗಳಲ್ಲಿ 16 ರನ್ಗೆ ಔಟಾದರೆ, ಮೂರನೇ ಏಕದಿನದಲ್ಲಿ 17 ರನ್ಗೆ ಬ್ಯಾಟ್ ಕೆಳಗಿಟ್ಟರು. ಸದ್ಯ ಕೊಹ್ಲಿ ವೆಸ್ಟ್ ಇಂಡೀಸ್ (West Indies) ಪ್ರವಾಸಕ್ಕೆ ಆಯ್ಕೆಯಾಗದೆ ವಿಶ್ರಾಂತಿಯ ಮೊರೆ ಹೋಗಿದ್ದಾರೆ.
ಹೀಗಿರುವಾಗ ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ಅವರು ಕೊಹ್ಲಿ ಫಾರ್ಮ್ ವಿಚಾರವಾಗಿ ಮಾತನಾಡಿದ್ದಾರೆ. “ನಾನು ಭಾರತೀಯನಾಗಿದ್ದರೆ ಕೊಹ್ಲಿಯ ಬೆಂಬಲಕ್ಕೆ ನಿಲ್ಲುತ್ತಿದ್ದೆ. ಯಾಕೆಂದರೆ ಕೊಹ್ಲಿ ಈಗಿರುವ ಸ್ಥಿತಿ ಹೇಗಿರುತ್ತದೆ ಎಂದು ನನಗ ತಿಳಿದಿದೆ. ಹೀಗಾಗಿ ನಾನು ಭಾರತ ತಂಡದ ನಾಯಕ ಅಥವಾ ಕೋಚ್ ಆಗಿದ್ದರೆ ಕೊಹ್ಲಿಗೆ ಸುಲಭವಾಗುವ ರೀತಿ ಹಾಗೂ ಆರಾಮವಾಗಿ ಆಡಲು ಸಮಯ ಕೊಡುತ್ತಿದ್ದೆ. ಅವರ ಶೈಲಿಯ ಆಟಕ್ಕೆ ಮರಳಿ ರನ್ ಗಳಿಸಲು ಸಹಾಯ ಮಾಡುತ್ತಿದ್ದೆ,” ಎಂದು ಹೇಳಿದ್ದಾರೆ.
“ನನಗನಿಸುವ ಪ್ರಕಾರ ಭಾರತ ತಂಡ ಕೊಹ್ಲಿಯನ್ನು ಫಾರ್ಮ್ಗೆ ಮರಳಲು ಹೊಸ ದಾರಿ ಹುಡುಕುತ್ತಿದೆ. ಇದು ಸಹಕಾರಿ ಆಗುವುದಿಲ್ಲ. ಕೊಹ್ಲಿಯ ಜಾಗವನ್ನು ತುಂಬಲು ಅವರು ಬೇರೆಯವರನ್ನು ಹುಡಕುತ್ತಿದ್ದಾರೆ. ಕೊಹ್ಲಿ ಓಪನರ್ ಆಗಿ ಆಡಿದ್ದಾರೆ, ನಂಬರ್ 3 ರಲ್ಲಿ ಬ್ಯಾಟ್ ಬೀಸಿದ್ದಾರೆ. ಹೀಗೆ ಬ್ಯಾಟಿಂಗ್ ಸ್ಥಾನದಲ್ಲಿ ಬದಲಾವಣೆ ತಂದರೆ ಆ ಬ್ಯಾಟರ್ಗೆ ತೊಂದರೆಯಾಗುತ್ತಿದೆ. ನಾನು ಕೋಚ್ ಆಗಿದ್ದರೆ, ಇದು ನಿನ್ನ ಜಾಗ, ನೀವು ಈ ಕ್ರಮಾಂಕದಲ್ಲಿ ಆಡಬೇಕು. ಎಂದಿಗೂ ಇದು ಬದಲಾವಣೆ ಆಗುವುದಿಲ್ಲ. ನಿನ್ನ ಮೇಲೆ ನಂಬಿಕೆಯಿಟ್ಟು ಆಡು, ಶ್ರಮ ಪಡು ಎಂದು ಸಲಹೆ ಕೊಡುತ್ತಿದ್ದೆ,” ಎಂದು ಪಾಂಟಿಂಗ್ ಹೇಳಿದ್ದಾರೆ.
ಗವಾಸ್ಕರ್ ಹೇಳಿಕೆ:
ಕೆಲ ದಿನಗಳ ಹಿಂದೆಯಷ್ಟೆ ಸುನಿಲ್ ಗವಾಸ್ಕರ್ ಕೂಡ ಕೊಹ್ಲಿ ಬಗ್ಗೆ ಹೇಳಿಕೆ ನೀಡಿದ್ದರು. “ನನಗೆ ಕೊಹ್ಲಿ ಜೊತೆ ಸುಮಾರು 20 ನಿಮಿಷ ಸಮಯ ಕೊಡಿ. ಅವರು ಏನು ಬದಲಾವಣೆ ಮಾಡಬೇಕು ಎಂಬ ವಿಷಯಗಳನ್ನು ನಾನು ಹೇಳಬಲ್ಲೆ. ಇದು ಅವರಿಗೆ ಸಹಾಯ ಮಾಡಬಹುದು. ಹಾಗಂತ ಇದು ಅವರಿಗೆ ಸಹಾಯ ಮಾಡುತ್ತದೆ ಎಂದು ನಾನು ಹೇಳುತ್ತಿಲ್ಲ. ಕೊಹ್ಲಿ ಯಾವಾಗ ಕಮ್ಬ್ಯಾಕ್ ಮಾಡುತ್ತಾರೆ ಎಂಬುದನ್ನು ನಾವು ಕಾಯಬೇಕು. ಅದು ಅವರಿಗೆ ಸಹಾಯ ಮಾಡುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕು ಎಂದು ನಾನು ಭಾವಿಸುತ್ತೇನೆ. ಭಾರತಕ್ಕಾಗಿ ಅವರ ದಾಖಲೆ ನೋಡಿದರೆ ಅದ್ಭುತ, 70 ಅಂತರರಾಷ್ಟ್ರೀಯ ಶತಕಗಳನ್ನು ನೋಡಿ. ನನ್ನ ಪ್ರಕಾರ, ಅವರು ಆಟದ ಎಲ್ಲಾ ಸ್ವರೂಪಗಳಲ್ಲಿ ಎಲ್ಲಾ ಪರಿಸ್ಥಿತಿಗಳಲ್ಲಿ ರನ್ ಗಳಿಸಿದ್ದಾರೆ,” ಎಂದು ಗವಾಸ್ಕರ್ ಹೇಳಿದ್ದರು.