ಅಲ್ಲಿಯಲ್ಲ, ಇಲ್ಲಿ ನಿಲ್ಸು… ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
India vs Bangladesh 1st Test: ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 376 ರನ್ ಕಲೆಹಾಕಿದ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ 287 ರನ್ಗಳಿಸಿ ಡಿಕ್ಲೇರ್ ಘೋಷಿಸಿದೆ. ಈ ಮೂಲಕ ಬಾಂಗ್ಲಾದೇಶ್ ತಂಡಕ್ಕೆ ದ್ವಿತೀಯ ಇನಿಂಗ್ಸ್ನಲ್ಲಿ 515 ರನ್ಗಳ ಗುರಿ ನೀಡಿದೆ.
ಚೆನ್ನೈನ ಎಂಎ ಚಿದರಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ್ ಹಾಗೂ ಭಾರತ ನಡುವಣ ಟೆಸ್ಟ್ ಪಂದ್ಯವು ಸ್ವಾರಸ್ಯಕರ ಘಟನೆಗೆ ಸಾಕ್ಷಿಯಾಗಿದೆ. ಅಂತಹದೊಂದು ಸ್ವಾರಸ್ಯಕರ ಸನ್ನಿವೇಶವನ್ನು ಸೃಷ್ಟಿಸಿದ್ದು ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್. ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಭಾರತದ ಪರ ಪಂತ್ ಹಾಗೂ ಶುಭ್ಮನ್ ಗಿಲ್ ಬ್ಯಾಟಿಂಗ್ ಮಾಡುತ್ತಿದ್ದರು.
ಇತ್ತ ರಿಷಭ್ ಹಾಗೂ ಶುಭ್ಮನ್ ಅವರ ಅಮೋಘ ಜೊತೆಯಾಟದಿಂದಾಗಿ ಬಾಂಗ್ಲಾದೇಶ್ ತಂಡದ ಬೌಲರ್ಗಳು ಹೈರಾಣರಾಗಿದ್ದರು. ಅದರಲ್ಲೂ ನಾಯಕ ನಜ್ಮುಲ್ ಹೊಸೈನ್ ಶಾಂತೊ ಹಲವು ಬಾರಿ ಫೀಲ್ಡಿಂಗ್ ಬದಲಿಸಿದರೂ ಪ್ರಯೋಜನವಾಗಿರಲಿಲ್ಲ. ಇದರ ನಡುವೆ ಫೀಲ್ಡಿಂಗ್ ಬದಲಾವಣೆಯೇ ಬಾಂಗ್ಲಾ ತಂಡದ ನಾಯಕನಿಗೆ ಹೊಸ ಸವಾಲಾಗಿ ಪರಿಣಮಿಸಿತು.
ಇದನ್ನ ಮನಗಂಡ ರಿಷಭ್ ಪಂತ್ ಬಾಂಗ್ಲಾದೇಶ್ ತಂಡದ ನಾಯಕನ ಫೀಲ್ಡಿಂಗ್ ಸೆಟ್ಟಿಂಗ್ನಲ್ಲಿನ ನ್ಯೂನತೆಗಳನ್ನು ತೋರಿಸಿದರು. ಅಲ್ಲದೆ ಇಲ್ಲಿ ಒಬ್ಬ ಫೀಲ್ಡರ್ ಬೇಕೆಂದು ರಿಷಭ್ ಪಂತ್ ಮಿಡ್-ವಿಕೆಟ್ ಕಡೆಗೆ ತೋರಿಸುತ್ತಾ ಸನ್ನೆ ಮಾಡಿದರು.
ಇದನ್ನು ಗಮನಿಸಿದ ಬಾಂಗ್ಲಾದೇಶ್ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂತೊ, ಪಂತ್ ಸಲಹೆಯಂತೆ ಅಲ್ಲೊಬ್ಬರು ಫೀಲ್ಡರ್ನ ನಿಲ್ಲಿಸಿದರು. ಇದೀಗ ತನ್ನ ಬ್ಯಾಟಿಂಗ್ ವೇಳೆ ಬಾಂಗ್ಲಾದೇಶ್ ತಂಡದ ಫೀಲ್ಡಿಂಗ್ ಸೆಟ್ ಮಾಡಿರುವ ರಿಷಭ್ ಪಂತ್ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಈ ವಿಡಿಯೋಗೆ ಕ್ರೀಡಾಪ್ರೇಮಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ 2ನೇ ಇನಿಂಗ್ಸ್ನಲ್ಲಿ 5ನೇ ಕ್ರಮಾಂಕದಲ್ಲಿ ರಿಷಭ್ ಪಂತ್ 128 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 13 ಫೋರ್ಗಳೊಂದಿಗೆ 109 ರನ್ ಬಾರಿಸಿದರು. ಈ ಭರ್ಜರಿ ಶತಕದ ನೆರವಿನಿಂದ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ 4 ವಿಕೆಟ್ ಕಳೆದುಕೊಂಡು 287 ರನ್ಗಳಿಸಿ ಡಿಕ್ಲೇರ್ ಘೋಷಿಸಿದೆ.