ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ರಿಷಭ್ ಪಂತ್ (Rishabh Pant) ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಪಂತ್ ಇದೀಗ ಫಿಟ್ನೆಸ್ ಮರಳಿ ಪಡೆಯುವ ಹಾದಿಯಲ್ಲಿದ್ದಾರೆ. ಐಪಿಎಲ್ ಆರಂಭದ ವೇಳೆ ಅವರು ಸಂಪೂರ್ಣ ಫಿಟ್ ಆಗಿರಲಿದ್ದು, ಇದಾಗ್ಯೂ ಅವರು ದೀರ್ಘಾವಧಿಯವರೆಗೆ ವಿಕೆಟ್ ಕೀಪಿಂಗ್ ಮಾಡುವುದು ಅನುಮಾನ ಎನ್ನಲಾಗಿದೆ.
ಇದೇ ಕಾರಣದಿಂದ ರಿಷಭ್ ಪಂತ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಚಿಂತಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ವರದಿಯಂತೆ, ಪಂತ್ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಯುವುದು ಖಚಿತ. ಆದರೆ ಫೀಲ್ಡಿಂಗ್ ವೇಳೆ ಮತ್ತೋರ್ವ ಆಟಗಾರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುವ ಸಾಧ್ಯತೆಯಿದೆ.
ಒಟ್ಟಿನಲ್ಲಿ ಈ ಬಾರಿಯ ಐಪಿಎಲ್ ಮೂಲಕ ರಿಷಭ್ ಪಂತ್ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳುವುದು ಬಹುತೇಕ ಖಚಿತವಾಗಿದೆ. ಇದೀಗ ಅವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ಡೇವಿಡ್ ವಾರ್ನರ್ ಅವರೇ ಮುಂದುವರೆಯಲಿದ್ದಾರೆ.
ಇನ್ನು ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರೋವ್‌ಮನ್ ಪೊವೆಲ್, ಮುಸ್ತಫಿಜುರ್ ರೆಹಮಾನ್, ರಿಲೀ ರೌಸ್ಸೊ ಸೇರಿದಂತೆ ಒಟ್ಟು 11 ಆಟಗಾರರನ್ನು ಬಿಡುಗಡೆ ಮಾಡಿದೆ. ಹೀಗಾಗಿ ಈ ಸಲ ಡೆಲ್ಲಿ ತಂಡದಲ್ಲಿ ಬಹುತೇಕ ಹೊಸ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿರುವ ಆಟಗಾರರು: ರಿಷಬ್ ಪಂತ್, ಪ್ರವೀಣ್ ದುಬೆ, ಡೇವಿಡ್ ವಾರ್ನರ್, ವಿಕ್ಕಿ ಒಸ್ತ್ವಾಲ್, ಪೃಥ್ವಿ ಶಾ, ಅನ್ರಿಚ್ ನಾರ್ಟ್ಜೆ, ಅಭಿಷೇಕ್ ಪೊರೆಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಲುಂಗಿ ಎನ್‌ಗಿಡಿ, ಲಲಿತ್ ಯಾದವ್, ಖಲೀಲ್ ಅಹ್ಮದ್, ಮಿಚೆಲ್ ಮಾರ್ಷ್, ಇಶಾಂತ್ ಧುಲ್ ಶರ್ಮಾ ಮತ್ತು ಯಕೇಶ್ ಧುಲ್ ಶರ್ಮಾ .
ಇದನ್ನೂ ಓದಿ: ಧೋನಿ ನಿವೃತ್ತಿ ಬಳಿಕ CSK ತಂಡಕ್ಕೆ ರಿಷಭ್ ಪಂತ್ ಎಂಟ್ರಿ: ದೀಪ್ ದಾಸ್ ಗುಪ್ತ
ಡೆಲ್ಲಿ ಕ್ಯಾಪಿಟಲ್ಸ್ ಬಿಡುಗಡೆ ಮಾಡಿದ ಆಟಗಾರರು: ರೋವ್‌ಮನ್ ಪೊವೆಲ್, ರಿಲೀ ರೊಸೊವ್, ಮನೀಶ್ ಪಾಂಡೆ, ಸರ್ಫರಾಜ್ ಖಾನ್, ಫಿಲ್ ಸಾಲ್ಟ್, ಮುಸ್ತಾಫಿಜುರ್ ರೆಹಮಾನ್, ಕಮಲೇಶ್ ನಾಗರಕೋಟಿ, ರಿಪಾಲ್ ಪಟೇಲ್, ಅಮನ್ ಖಾನ್, ಪ್ರಿಯಮ್ ಗಾರ್ಗ್ ಮತ್ತು ಚೇತನ್ ಸಕರಿಯಾ.
ಐಪಿಎಲ್ ಸೀಸನ್ 17 ರ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಈ ಹರಾಜಿಗಾಗಿ ಒಟ್ಟು 1166 ಆಟಗಾರರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಈ ಆಟಗಾರರ ಪಟ್ಟಿಯನ್ನು ಶಾರ್ಟ್ ಲೀಸ್ಟ್ ಮಾಡಲಿದ್ದು, ಇದಾದ ಬಳಿಕ ಆಟಗಾರರ ಹರಾಜು ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.