Roger Binny: ಬಿಸಿಸಿಐ ನೂತನ ಅಧ್ಯಕ್ಷರಾಗುತ್ತಿರುವ ರೋಜರ್ ಬಿನ್ನಿ ಯಾರು?: ಭಾರತ ಪರ ಎಷ್ಟು ಪಂದ್ಯವನ್ನು ಆಡಿದ್ದಾರೆ?

| Updated By: Vinay Bhat

Updated on: Oct 11, 2022 | 1:32 PM

BCCI President: ರೋಜರ್‌ ಬಿನ್ನಿ ಅವರು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ನೂತನ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಬಿಸಿಸಿಐ ಚುನಾವಣೆ ಅಕ್ಟೋಬರ್‌ 18 ರಂದು ಮುಂಬೈನಲ್ಲಿ ನಡೆಯಲಿದೆ. ಹಾಗಾದರೆ ಬಿಸಿಸಿಐ ನೂತನ ಅಧ್ಯಕ್ಷರಾಗಲಿರುವ ರೋಜರ್ ಬಿನ್ನಿ ಯಾರು?.

Roger Binny: ಬಿಸಿಸಿಐ ನೂತನ ಅಧ್ಯಕ್ಷರಾಗುತ್ತಿರುವ ರೋಜರ್ ಬಿನ್ನಿ ಯಾರು?: ಭಾರತ ಪರ ಎಷ್ಟು ಪಂದ್ಯವನ್ನು ಆಡಿದ್ದಾರೆ?
Roger Binny
Follow us on

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರೋಜರ್‌ ಬಿನ್ನಿ (Roger Binny) ಅವರು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (BCCI) ನೂತನ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಕನ್ನಡಿಗ ರೋಜರ್ ಬಿನ್ನಿ ಈ ಹಿಂದೆ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಸದ್ಯ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ (Sourav Ganguly) ಸ್ಥಾನಕ್ಕೆ ಮಾಜಿ ವೇಗಿ ರೋಜರ್ ಬಿನ್ನಿ ಮುಂಚೂಣಿಯಲ್ಲಿದ್ದಾರೆ ಮತ್ತು ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್‌ 11 ಮತ್ತು 12 ರಂದು ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಬಹುದು. ಬಿಸಿಸಿಐ ಚುನಾವಣೆ ಅಕ್ಟೋಬರ್‌ 18 ರಂದು ಮುಂಬೈನಲ್ಲಿ ನಡೆಯಲಿದೆ. ಹಾಗಾದರೆ ಬಿಸಿಸಿಐ ನೂತನ ಅಧ್ಯಕ್ಷರಾಗಲಿರುವ ರೋಜರ್ ಬಿನ್ನಿ ಯಾರು?.

ರೋಜರ್ ಬಿನ್ನಿ ಭಾರತದಲ್ಲಿ ಜುಲೈ 19, 1955 ರಲ್ಲಿ ಜನಿಸಿದರು. ಇಲ್ಲಿಯೇ ಬಾಲ್ಯವನ್ನು ಕಳೆದಿದ್ದ ಇವರು, ಕೊನೆಗೊಂದು ದಿನ ಭಾರತೀಯ ಕ್ರಿಕೆಟ್​ ತಂಡದ ಸದಸ್ಯರಾಗಿ ಆಯ್ಕೆಯಾದರು. ಮಧ್ಯಮ ವೇಗದ ಮತ್ತು ಲೋವರ್ ಆರ್ಡರ್ ಬೌಲರ್ ಆಗಿದ್ದ ರೋಜರ್ ಬಿನ್ನಿ, 1979 ರಲ್ಲಿ ಭಾರತೀಯ ತಂಡಕ್ಕೆ ಪದಾರ್ಪಣೆ ಮಾಡಿದರು. ತವರು ಅಂಗಣ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ 1979ಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಜರ್‌ ಬಿನ್ನಿ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟರು. ತಮ್ಮ ಚೊಚ್ಚಲ ಟೆಸ್ಟ್‌ ಪಂದ್ಯದಲ್ಲಿ ಅವರು 46 ರನ್‌ ಗಳಿಸಿದ್ದರು.

ಆದರೆ ರೋಜರ್‌ ಬಿನ್ನಿ ಅವರಿಗೆ ಆಟದ ಮೇಲೆ ಹಿಡಿತ ಸಾಧಿಸಲು ಕೆಲ ವರ್ಷಗಳು ಬೇಕಾಯಿತು. 1983 ರ ವಿಶ್ವಕಪ್‌ ಬಳಿಕ ಬಿನ್ನಿ ಕ್ರಿಕೆಟ್ ಜೀವನ ಬದಲಾಯಿತು. ಈ ಸಮಯದಲ್ಲಿ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ, ಅವರು 8 ಓವರ್‌ಗಳಲ್ಲಿ ಕೇವಲ 29 ರನ್‌ಗಳನ್ನು ನೀಡಿ 4 ವಿಕೆಟ್‌ಗಳನ್ನು ತೆಗೆದುಕೊಂಡು ಭಾರತವನ್ನು ಗೆಲುವಿನತ್ತ ಕೊಂಡೊಯ್ದರು. ನಂತರ ವೆಸ್ಟ್ ಇಂಡೀಸ್ ವಿರುದ್ಧದ ಫೈನಲ್​ ಪಂದ್ಯದಲ್ಲಿ, ಬಿನ್ನಿ 10 ಓವರ್​ಗ​ಳಲ್ಲಿ ಕೇವಲ 23 ರನ್​ಗಳನ್ನು ನೀಡಿದರು. ಈ ರೀತಿಯಾಗಿ, ಅವರು ಭಾರತದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು.

ಇದನ್ನೂ ಓದಿ
BCCI President: ಬಿಸಿಸಿಐ ನೂತನ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ನೇಮಕ?: ಕಾರ್ಯದರ್ಶಿಯಾಗಿ ಜಯ್ ಶಾ ಮುಂದುವರಿಕೆ: ವರದಿ
Aaron Finch: ಮೈದಾನದಲ್ಲಿ ಅಂಪೈರ್‌ಗೆ ಅವಾಚ್ಯ ಶಬ್ದದಿಂದ ನಿಂದಿಸಿದ ಆ್ಯರೋನ್ ಫಿಂಚ್: ನಿಷೇಧದ ಭೀತಿಯಲ್ಲಿ ಆಸೀಸ್ ನಾಯಕ
IND vs SA 3rd ODI: ನಿರ್ಣಾಯಕ ಕದನಕ್ಕೆ ಟೀಮ್ ಇಂಡಿಯಾ ಭರ್ಜರಿ ತಯಾರಿ: ಫೋಟೋ ನೋಡಿ
Virat Kohli: ವಿರಾಟ್ ಕೊಹ್ಲಿಗೆ ಸ್ಪೆಷಲ್ ಟ್ರೈನಿಂಗ್ ನೀಡುತ್ತಿರುವ ಕೋಚ್ ರಾಹುಲ್ ದ್ರಾವಿಡ್: ನೆಟ್​ನಲ್ಲಿ ಏನು ಮಾಡ್ತಿದ್ದಾರೆ ನೋಡಿ

ಕರ್ನಾಟಕ ಪರ ಬಿನ್ನಿ ಸಾಧನೆ:

ರೋಜರ್ ಬಿನ್ನಿ ದೇಶೀಯ ಕ್ರಿಕೆಟ್‌ನಲ್ಲೂ ಸಂಚಲನ ಸೃಷ್ಟಿಸಿದ್ದಾರೆ. ಕರ್ನಾಟಕ ಪರ ಆಡುತ್ತಿದ್ದ ಇವರು 1977-78ರ ರಣಜಿ ಟ್ರೋಫಿಯಲ್ಲಿ ಕೇರಳ ವಿರುದ್ಧ 211 ರನ್ ಗಳಿಸಿದ ಮತ್ತು ಮೊದಲ ವಿಕೆಟ್‌ಗೆ 451 ರನ್ ಹಂಚಿಕೊಂಡಿದ ಹೆಗ್ಗಳಿಕೆಗೆ ಪಾತ್ರರಾದರು. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 136 ಪಂದ್ಯಗಳನ್ನು ಆಡಿರುವ ಇವರು 205 ವಿಕೆಟ್ ಹಾಗೂ 6579 ರನ್ ಕಲೆಹಾಕಿದ್ದಾರೆ. 22 ರನ್​ಗೆ 8 ವಿಕೆಟ್ ಪಡೆದಿರುವುದು ಇವರ ಶ್ರೇಷ್ಠ ಸಾಧನೆ. ಕ್ರಿಕೆಟ್ ತೊರೆದ ನಂತರ ರೋಜರ್ ಬಿನ್ನಿ ತರಬೇತುದಾರರಾದರು. 2000 ರಲ್ಲಿ ಅಂಡರ್ -19 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ಕೋಚ್ ಆಗಿದ್ದರು. ನಂತರ 2012 ರ ಸೆಪ್ಟೆಂಬರ್‌ನಲ್ಲಿ ಅವರು ಬಿಸಿಸಿಐ ಆಯ್ಕೆ ಸಮಿತಿಯಲ್ಲೂ ಸೇವೆ ಸಲ್ಲಿಸಿದರು.

ಭಾರತದ ಪರ 27 ಟೆಸ್ಟ್ ಪಂದ್ಯಗಳನ್ನು ಆಡಿರುವ ರೋಜರ್ ಬಿನ್ನಿ ಬ್ಯಾಟಿಂಗ್‌ನಲ್ಲಿ 23.06 ಸರಾಸರಿಯಲ್ಲಿ 830 ರನ್ ಗಳಿಸಿದ್ದಾರೆ ಮತ್ತು 5 ಅರ್ಧಶತಕ ಬಾರಿಸಿದ್ದಾರೆ. ಇನ್ನು 72 ಏಕದಿನ ಪಂದ್ಯಗಳನ್ನು ಆಡಿರುವ ಅವರು, 16.13 ಸರಾಸರಿಯಲ್ಲಿ 629 ರನ್ ಗಳಿಸಿದ್ದಾರೆ ಮತ್ತು 1 ಅರ್ಧಶತಕ ಬಾರಿಸಿದ್ದಾರೆ. ಬೌಲಿಂಗ್‌ನಲ್ಲಿ 27 ಟೆಸ್ಟ್ ಪಂದ್ಯಗಳಿಂದ 47 ವಿಕೆಟ್ ಪಡೆದುಕೊಂಡಿದ್ದಾರೆ ಮತ್ತು 2 ಬಾರಿ 5 ವಿಕೆಟ್ ಗೊಂಚಲು ಗಳಿಸಿದ್ದಾರೆ. ಇನ್ನು 72 ಏಕದಿನ ಪಂದ್ಯಗಳಿಂದ 77 ವಿಕೆಟ್ ಪಡೆದುಕೊಂಡ ಸಾಧನೆ ಮಾಡಿದ್ದಾರೆ.

2007 ರಿಂದ 12ರ ತನಕ ಕೆಎಸ್‌ಸಿಎ ಉಪಾಧ್ಯಕ್ಷರಾಗಿದ್ದ ರೋಜರ್‌, ರಾಜ್ಯ ವಿಧಾನಸಭೆಗೂ ಆಂಗ್ಲೊ-ಇಂಡಿಯನ್‌ ವಿಭಾಗದಲ್ಲಿ ನೇಮಕಗೊಂಡಿದ್ದರು. ಅನೇಕ ಹುದ್ದೆಗಳನ್ನ ನಿಭಾಯಿಸಿರುವ ರೋಜರ್ ಬಿನ್ನಿ 2015ರ ಐಸಿಸಿ ಏಕದಿನ ವಿಶ್ವಕಪ್‌ ವೇಳೆಯಲ್ಲಿ ಹಿರಿಯ ಆಟಗಾರರ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಸೇವೆಯನ್ನ ಸಲ್ಲಿಸಿದ್ದಾರೆ. ಇದೀಗ 1983ರ ಐಸಿಸಿ ವಿಶ್ವಕಪ್‌ ವಿಜೇತ ತಂಡದ ಸದಸ್ಯ ಹಾಗೂ ಪ್ರಸ್ತುತ ಕೆಎಸ್‌ಸಿಎ ಅಧ್ಯಕ್ಷರಾಗಿರುವ ಹೆಮ್ಮೆಯ ಕನ್ನಡಿಗ ರೋಜರ್ ಬಿನ್ನಿ ಮುಂದಿನ ಬಿಸಿಸಿಐ ಅಧ್ಯಕ್ಷನಾಗುವ ಹಾದಿಯಲ್ಲಿದ್ದಾರೆ.

Published On - 12:52 pm, Tue, 11 October 22