BCCI President: ಬಿಸಿಸಿಐ ನೂತನ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ನೇಮಕ?: ಕಾರ್ಯದರ್ಶಿಯಾಗಿ ಜಯ್ ಶಾ ಮುಂದುವರಿಕೆ: ವರದಿ
Roger Binny: ರೋಜರ್ ಬಿನ್ನಿ ಈ ಹಿಂದೆ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 11 ಮತ್ತು 12 ರಂದು ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಬಹುದು.
ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಕರ್ನಾಟಕದ ರೋಜರ್ ಬಿನ್ನಿ (Roger Binny) ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) ನೂತನ ಅಧ್ಯಕ್ಷರಾಗಲಿದ್ದಾರೆ (BCCI President) ಎಂದು ವರದಿಯಾಗಿದೆ. ಈ ಮೂಲಕ ಬಿನ್ನಿ ಸೌರವ್ ಗಂಗೂಲಿ ಅವರ ಸ್ಥಾನವನ್ನು ತುಂಬಲಿದ್ದಾರೆಂದು ಬಿಸಿಸಿಐ ಮೂಲಗಳು ತಿಳಿಸಿವೆ. ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ. ಬಿಸಿಸಿಐನ ಹಾಲಿ ಅಧ್ಯಕ್ಷರಾದ ಸೌರವ್ ಗಂಗೂಲಿ (Sourav Ganguly) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಇನ್ನು ರಾಜಿವ್ ಶುಕ್ಲಾ ಬಿಸಿಸಿಐ ಉಪಾಧ್ಯಕ್ಷರಾಗಲಿದ್ದು, ಐಪಿಎಲ್ ಅಧ್ಯಕ್ಷರಾಗಿ ಅರುಣ್ ಧುಮಾಲ್ ಇರಲಿದ್ದಾರೆ. ಖಜಾಂಚಿ ಸ್ಥಾನಕ್ಕೆ ಆಶಿಶ್ ಶೆಲರ್ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಬಿಸಿಸಿಐ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ರೋಜರ್ ಬಿನ್ನಿ ಈ ಹಿಂದೆ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 11 ಮತ್ತು 12 ರಂದು ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಬಹುದು. ಅಕ್ಟೋಬರ್ 13 ರಂದು ಎಲ್ಲಾ ನಾಮಪತ್ರಗಳ ಪರಿಶೀಲನೆ ಕಾರ್ಯ ಜರುಗಲಿದೆ. ತದನಂತರ ಅಕ್ಟೋಬರ್ 14 ರಂದು ಅಭ್ಯರ್ಥಿಗಳು ತಮ್ಮ-ತಮ್ಮ ನಾಮಪತ್ರಗಳನ್ನು ವಾಪಸ್ ಪಡೆಯಲು ಅವಕಾಶ ನೀಡಲಾಗಿದೆ. ಅಂದಹಾಗೆ ಬಿಸಿಸಿಐ ಚುನಾವಣೆ ಅಕ್ಟೋಬರ್ 18 ರಂದು ಮುಂಬೈನಲ್ಲಿ ನಡೆಯಲಿದೆ.
1955 ಜುಲೈ 19ರಂದು ಜನಿಸಿರುವ ರೋಜರ್ ಬಿನ್ನಿ 1979ರಿಂದ 1987ರವರೆಗೆ ಭಾರತ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು. ಬಲಗೈ ಬ್ಯಾಟಿಂಗ್ ಶೈಲಿ ಮತ್ತು ಬಲಗೈ ಮಧ್ಯಮ ವೇಗದ ಬೌಲರ್ ಆಗಿದ್ದರು. ತವರು ಅಂಗಣ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ 1979ಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಜರ್ ಬಿನ್ನಿ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅವರು 46 ರನ್ ಗಳಿಸಿದ್ದರು. ಆ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಭಾರತದ ಪರ 27 ಟೆಸ್ಟ್ ಪಂದ್ಯಗಳನ್ನು ಆಡಿರುವ ರೋಜರ್ ಬಿನ್ನಿ ಬ್ಯಾಟಿಂಗ್‌ನಲ್ಲಿ 23.06 ಸರಾಸರಿಯಲ್ಲಿ 830 ರನ್ ಗಳಿಸಿದ್ದಾರೆ ಮತ್ತು 5 ಅರ್ಧಶತಕ ಬಾರಿಸಿದ್ದಾರೆ. ಇನ್ನು 72 ಏಕದಿನ ಪಂದ್ಯಗಳನ್ನು ಆಡಿರುವ ಅವರು, 16.13 ಸರಾಸರಿಯಲ್ಲಿ 629 ರನ್ ಗಳಿಸಿದ್ದಾರೆ ಮತ್ತು 1 ಅರ್ಧಶತಕ ಬಾರಿಸಿದ್ದಾರೆ. ಬೌಲಿಂಗ್‌ನಲ್ಲಿ 27 ಟೆಸ್ಟ್ ಪಂದ್ಯಗಳಿಂದ 47 ವಿಕೆಟ್ ಪಡೆದುಕೊಂಡಿದ್ದಾರೆ ಮತ್ತು 2 ಬಾರಿ 5 ವಿಕೆಟ್ ಗೊಂಚಲು ಗಳಿಸಿದ್ದಾರೆ. ಇನ್ನು 72 ಏಕದಿನ ಪಂದ್ಯಗಳಿಂದ 77 ವಿಕೆಟ್ ಪಡೆದುಕೊಂಡ ಸಾಧನೆ ಮಾಡಿದ್ದಾರೆ.
Published On - 11:51 am, Tue, 11 October 22