ಏಷ್ಯಾಕಪ್ 2023 ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ಸೂಪರ್-4 ಹಂತಕ್ಕೆ ಪ್ರವೇಶ ಪಡೆದಿದೆ. ಸೋಮವಾರ ಪಲ್ಲಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಟೀಮ್ ಇಂಡಿಯಾ 10 ವಿಕೆಟ್ಗಳ ಅಮೋಘ ಗೆಲುವು ಕಂಡಿತು. ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಶುಭ್ಮನ್ ಗಿಲ್ ಅಜೇಯ ಅರ್ಧಶತಕ ಸಿಡಿಸಿ ಭರ್ಜರಿ ಆಟವಾಡಿದರು. ರೋಹಿತ್ ಶರ್ಮಾ ಕೇವಲ 59 ಎಸೆತಗಳಲ್ಲಿ 6 ಫೋರ್, 5 ಸಿಕ್ಸರ್ನೊಂದಿಗೆ ಅಜೇಯ 74 ರನ್ ಚಚ್ಚಿದರು. ಇದರೊಂದಿಗೆ ಹಿಟ್ಮ್ಯಾನ್ ಹಲವು ದಾಖಲೆ ನಿರ್ಮಿಸಿದ್ದಾರೆ.
ಪಾಕಿಸ್ತಾನದ ವಿರುದ್ಧ ಸಂಪೂರ್ಣ ವೈಫಲ್ಯ ಅನುಭವಿಸಿದ್ದ ರೋಹಿತ್ ಶರ್ಮಾ ನೇಪಾಳ ವಿರುದ್ಧ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು. ಇದು ರೋಹಿತ್ ಅವರ 49 ನೇ ಏಕದಿನ ಅರ್ಧಶತಕ ಮತ್ತು ಜನವರಿ 24, 2023 ರ ನಂತರ ಬಂದ 50 ರನ್ ಕೂಡ ಹೌದು. ಇದರ ಜೊತೆಗೆ ರೋಹಿತ್ ಶರ್ಮಾ ಏಷ್ಯಾಕಪ್‌ನಲ್ಲಿ ಭಾರತ ಪರ ಹೆಚ್ಚು ರನ್ ಗಳಿಸಿದ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.
VIDEO: ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಮಧ್ಯದ ಬೆರಳು ತೋರಿಸಿದ ಗೌತಮ್ ಗಂಭೀರ್
ರೋಹಿತ್, ಕೊಹ್ಲಿ ಅವರ 1046 ರನ್‌ಗಳ ಗಡಿ ದಾಟಿದರು. ಅಷ್ಟೇ ಅಲ್ಲದೆ, ಶ್ರೀಲಂಕಾದ ಶ್ರೇಷ್ಠ ಆಟಗಾರ ಕುಮಾರ ಸಂಗಕ್ಕಾರ ಅವರ 1075 ರನ್‌ಗಳ ದಾಖಲೆಯನ್ನೂ ಹಿಂದಿಕ್ಕಿ ಏಷ್ಯಾಕಪ್ ಟೂರ್ನಿಯ ಸಾರ್ವಕಾಲಿಕ ಬ್ಯಾಟಿಂಗ್ ಪಟ್ಟಿಯಲ್ಲಿ 2 ನೇ ಸ್ಥಾನಕ್ಕೆ ಏರಿದ್ದಾರೆ. ಸನತ್ ಜಯಸೂರ್ಯ ಮಾತ್ರ ಏಷ್ಯಾಕಪ್ ಪಂದ್ಯಾವಳಿಗಳಲ್ಲಿ (ODI ಮತ್ತು T20I ಮಾದರಿಗಳಲ್ಲಿ) ರೋಹಿತ್ ಶರ್ಮಾಗಿಂತ ಹೆಚ್ಚು ರನ್ ಗಳಿಸಿದ್ದಾರೆ.
ಇನ್ನು ಶ್ರೀಲಂಕಾದಲ್ಲಿ ಅತಿ ಹೆಚ್ಚಿ ಸಿಕ್ಸರ್ (29) ಸಿಡಿಸಿದ ಭಾರತೀಯ ಎಂಬ ದಾಖಲೆಯನ್ನು ರೋಹಿತ್ ಬರೆದಿದ್ದಾರೆ. ಅಲ್ಲದೆ ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಭಾರತೀಯ ಕೂಡ ಹಿಟ್ಮ್ಯಾನ್ ಆಗಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 250 ಸಿಕ್ಸರ್ಗಳ ಗಡಿ ಮುಟ್ಟಿದ ಮೂರನೇ ಆಟಗಾರ ರೋಹಿತ್. ಇನ್ನು 30ನೇ ಬಾರಿಗೆ ಒಂದು ಇನ್ನಿಂಗ್ಸ್‌ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಏಕೈಕ ಭಾರತೀಯ ಎಂಬ ದಾಖಲೆ ಬರೆದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು ಉತ್ತಮ ಆರಂಭ ಪಡೆಯಿತು. ಆರಂಭದಲ್ಲೇ ಭಾರತೀಯರು ತೋರಿದ ಕಳಪೆ ಫೀಲ್ಡಿಂಗ್ನ ಸಂಪೂರ್ಣ ಲಾಭ ಪಡೆದ ಕುಶಾಲ್ ಭುರ್ಟೆಲ್ (38) ಹಾಗೂ ಆಸಿಫ್ ಶೇಖ್ (58) ಮೊದಲ ವಿಕೆಟ್ಗೆ 65 ರನ್‌ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಸ್ಪಿನ್ ಮೋಡಿ ಮಾಡಿದ ರವೀಂದ್ರ ಜಡೇಜಾ ಮೂರು ವಿಕೆಟ್ಗಳನ್ನು ಪಡೆದು ನೇಪಾಳ ತಂಡಕ್ಕೆ ಶಾಕ್ ನೀಡಿದರು.
ಆದರೆ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೋಂಪಾಲ್ ಕಮಿ 56 ಎಸೆತಗಳಲ್ಲಿ 48 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 200 ರ ಗಡಿದಾಟಿಸಿದರು. ಅಂತಿಮವಾಗಿ ನೇಪಾಳ 48.2 ಓವರ್ಗಳಲ್ಲಿ 230 ರನ್ಗಳಿಗೆ ಆಲೌಟ್ ಆಯಿತು. ಟೀಮ್ ಇಂಡಿಯಾ ಪರ ಜಡೇಜಾ ಹಾಗೂ ಸಿರಾಜ್ ತಲಾ 3 ವಿಕೆಟ್ ಪಡೆದರೆ, ಶಮಿ, ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದೂಲ್ ಒಂದೊಂದು ವಿಕೆಟ್ ಕಬಳಿಸಿದರು.
231 ರನ್‌ಗಳ ಗುರಿ ಪಡೆದ ಟೀಮ್ ಇಂಡಿಯಾ ಬ್ಯಾಟಿಂಗ್ ವೇಳೆ ಮಳೆ ಬಂದಿದ್ದರಿಂದ ಕೆಲ ಕಾಲ ಪಂದ್ಯವು ಸ್ಥಗಿತಗೊಂಡಿತು. ಮಳೆ ನಿಂತ ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 23 ಓವರ್ಗಳಲ್ಲಿ ಟೀಮ್ ಇಂಡಿಯಾ 145 ರನ್‌ಗಳ ಗುರಿ ನೀಡಲಾಯಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಅಜೇಯರಾಗಿ ಉಳಿದ ರೋಹಿತ್ ಶರ್ಮಾ (74) ಹಾಗೂ ಶುಭ್ಮನ್ ಗಿಲ್ (67) 20.1 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸುವ ಮೂಲಕ 10 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ