Rohit Sharma: 2 ಟೂರ್ನಿಗಳ ಬಳಿಕ ರೋಹಿತ್ ಶರ್ಮಾ ನಿವೃತ್ತಿ?

|

Updated on: Jul 02, 2024 | 1:05 PM

ವೆಸ್ಟ್ ಇಂಡೀಸ್​ನ ಬಾರ್ಬಡೋಸ್​ನಲ್ಲಿ ನಡೆದ ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಇದಾಗ್ಯೂ ಅವರು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್​ನಲ್ಲಿ ಮುಂದುವರೆಯಲಿದ್ದಾರೆ. ಅದರಂತೆ ಮುಂಬರುವ ಎರಡು ಐಸಿಸಿ ಟೂರ್ನಿಗಳಲ್ಲಿ ಹಿಟ್​ಮ್ಯಾನ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ.

Rohit Sharma: 2 ಟೂರ್ನಿಗಳ ಬಳಿಕ ರೋಹಿತ್ ಶರ್ಮಾ ನಿವೃತ್ತಿ?
Rohit Sharma
Follow us on

17 ವರ್ಷಗಳ ಬಳಿಕ ಭಾರತ ತಂಡಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾ (Rohit Sharma) ಇನ್ನೊಂದು ವರ್ಷ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಹಿಟ್​ಮ್ಯಾನ್ ಅವರನ್ನು 2025 ರವರೆಗೆ ನಾಯಕನಾಗಿ ಮುಂದುವರೆಸಲು ಬಿಸಿಸಿಐ ಇಚ್ಛಿಸಿದೆ ಎಂದು ತಿಳಿದು ಬಂದಿದೆ. ಅದರಂತೆ ರೋಹಿತ್ ಶರ್ಮಾ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಹಾಗೆಯೇ 2025 ರಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲೂ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಎರಡು ಟೂರ್ನಿಗಳ ಬಳಿಕ ಅವರು ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ.

ಟಿ20 ಕ್ರಿಕೆಟ್​ಗೆ ನಿವೃತ್ತಿ:

ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಕಾರಣ ಮುಂಬರುವ ಸರಣಿಗಳಲ್ಲಿ ಭಾರತ ತಂಡವನ್ನು ಹೊಸ ನಾಯಕ ಮುನ್ನಡೆಸಲಿದ್ದಾರೆ. ಇಲ್ಲಿ ಟೀಮ್ ಇಂಡಿಯಾ ನಾಯಕನಾಗಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಏಕೆಂದರೆ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಹಾರ್ದಿಕ್ ಪಾಂಡ್ಯ ಉಪನಾಯಕನಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಈ ಹಿಂದೆ ಭಾರತ ತಂಡವನ್ನು ಪಾಂಡ್ಯ ಮುನ್ನಡೆಸಿದ್ದರು. ಹೀಗಾಗಿ ಟಿ20 ತಂಡಕ್ಕೆ ಹಾರ್ದಿಕ್ ನಾಯಕನಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಬಹುದು.

ಚಾಂಪಿಯನ್ಸ್ ಟ್ರೋಫಿ 2025:

ಬಹುನಿರೀಕ್ಷಿತ ಚಾಂಪಿಯನ್ಸ್​ ಟ್ರೋಫಿ ಟೂರ್ನಿಗೆ ತಾತ್ಕಾಲಿಕ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಮುಂದಿನ ವರ್ಷ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಏಕದಿನ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಭಾರತ ತಂಡ ಪಾಲ್ಗೊಳ್ಳಲಿದೆಯಾ ಎಂಬುದೇ ಪ್ರಶ್ನೆ.

ಏಕೆಂದರೆ ಈ ಟೂರ್ನಿಗೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆತಿಥ್ಯವಹಿಸುತ್ತಿದ್ದು, ಪಂದ್ಯಾವಳಿಗಾಗಿ ಲಾಹೋರ್, ಕರಾಚಿ ಹಾಗೂ ರಾವಲ್ಪಿಂಡಿ ಸ್ಟೇಡಿಯಂಗಳನ್ನು ಹೆಸರಿಸಿದೆ. ಆದರೆ 2006 ರ ಬಳಿಕ ಭಾರತ ತಂಡವು ಪಾಕಿಸ್ತಾನಕ್ಕೆ ತೆರಳಿಲ್ಲ. ಆದರೆ ಮುಂದಿನ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿರುವುದರಿಂದ ಇದೀಗ ಭಾರತ ತಂಡ ಪಾಕ್​ಗೆ ತೆರೆಳಲಿದೆಯಾ ಎಂಬುದೇ ಕುತೂಹಲ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್:

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್ ಪಂದ್ಯವು ಜೂನ್ 1 ರಂದು ಲಾರ್ಡ್ಸ್​ ಮೈದಾನದಲ್ಲಿ ಶುರುವಾಗಲಿದೆ. WTC ಅಂಕ ಪಟ್ಟಿಯಲ್ಲಿ ಶೇ. 68.51 ರಷ್ಟು ಗೆಲುವಿನ ಪರ್ಸೆಂಟೇಜ್​ನೊಂದಿಗೆ ಅಗ್ರಸ್ಥಾನದಲ್ಲಿರುವ ಭಾರತ ತಂಡವು ಫೈನಲ್​ನಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಬಹುದು. ಇನ್ನು ದ್ವಿತೀಯ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡವಿದ್ದರೆ, ತೃತೀಯ ಸ್ಥಾನದಲ್ಲಿ ನ್ಯೂಝಿಲೆಂಡ್ ತಂಡವಿದೆ. ಹಾಗೆಯೇ 4ನೇ ಸ್ಥಾನದಲ್ಲಿರುವ ಶ್ರೀಲಂಕಾ ಕೂಡ ಫೈನಲ್ ರೇಸ್​ನಲ್ಲಿದೆ.

ಇದನ್ನೂ ಓದಿ: Shoaib Akhtar: ಭಗವದ್ಗೀತೆ ಶ್ಲೋಕ ಹಂಚಿಕೊಂಡ ಶೊಯೇಬ್ ಅಖ್ತರ್

2 ಟೂರ್ನಿಗಳ ಬಳಿಕ ನಿವೃತ್ತಿ:

ಟೀಮ್ ಇಂಡಿಯಾ ಮುಂದಿರುವ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯಗಳ ಬಳಿಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ರೋಹಿತ್ ಶರ್ಮಾ ಅವರ ಪ್ರಸ್ತುತ ವಯಸ್ಸು 37 ವರ್ಷಗಳು. ಇದೀಗ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಕಾರಣ ಅವರನ್ನು ಮುಂದಿನ ವರ್ಷದವರೆಗೆ ನಾಯಕನಾಗಿ ಮುಂದುವರೆಸಬಹುದು. ಅದರಂತೆ 2025ರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಬಳಿಕ ರೋಹಿತ್ ಶರ್ಮಾ ಇಂಟರ್​ನ್ಯಾಷನಲ್​ ಕ್ರಿಕೆಟ್​ ಕೆರಿಯರ್​ಗೆ ವಿದಾಯ ಹೇಳುವ ಸಾಧ್ಯತೆ ಹೆಚ್ಚಿದೆ.

 

 

Published On - 1:30 pm, Mon, 1 July 24