ಭಾರತ ಮತ್ತು ಶ್ರೀಲಂಕಾ (India and Sri Lanka) ನಡುವಿನ ಟಿ20 ಸರಣಿಯ ಕೊನೆಯ ಪಂದ್ಯ ಜನವರಿ 7 ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಈಗಾಗಲೇ ಸರಣಿಯು 1-1 ರಲ್ಲಿ ಸಮನಾಗಿರುವುದರಿಂದ ಕೊನೆಯ ಪಂದ್ಯದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಏಕೆಂದರೆ ಈ ಪಂದ್ಯ ಗೆದ್ದವರಿಗೆ ಸರಣಿ ಕೈವಶವಾಗಲಿದೆ. ಈ ಸರಣಿಯ ನಂತರ ಅಂದರೆ ಜನವರಿ 10 ರಿಂದ ಉಭಯ ದೇಶಗಳ ನಡುವೆ ಏಕದಿನ ಸರಣಿಯು ಪ್ರಾರಂಭವಾಗಲಿದೆ. ಏಕದಿನ ವಿಶ್ವಕಪ್‌ನ ಸಿದ್ಧತೆಯ ದೃಷ್ಟಿಯಿಂದ ಈ ಸರಣಿ ಟೀಂ ಇಂಡಿಯಾಕ್ಕೆ ಬಹಳ ಮುಖ್ಯವಾಗಿದೆ. ಅಲ್ಲದೆ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಕೆಲವು ಟೀಂ ಇಂಡಿಯಾ (Team India) ಆಟಗಾರರು ಈ ಸರಣಿಯಿಂದ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಇದರಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma) ಕೂಡ ಸೇರಿದ್ದಾರೆ. ಗಾಯದಿಂದಾಗಿ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದ ರೋಹಿತ್, ಈ ಸರಣಿಯಿಂದ ತಂಡಕ್ಕೆ ವಾಪಸಾಗಲಿದ್ದು, ಅದಕ್ಕೂ ಮುನ್ನ ಅಭಿಮಾನಿಗಳಿಗೆ ತಮ್ಮ ಫಿಟ್‌ನೆಸ್ ಬಗ್ಗೆ ಅಪ್ಡೇಟ್ ನೀಡಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಸೆಮಿಫೈನಲ್ ಸೋಲಿನ ನಂತರ ನಾಯಕ ರೋಹಿತ್ ಶರ್ಮಾ ಹೆಚ್ಚು ಕ್ರಿಕೆಟ್ ಆಡಿಲ್ಲ. ಕಳೆದ ತಿಂಗಳು ಬಾಂಗ್ಲಾದೇಶದ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ಹೆಬ್ಬೆರಳಿನ ಗಾಯದಿಂದಾಗಿ ಅವರು ಮೈದಾನದಿಂದ ಹೊರಗುಳಿಯಬೇಕಾಯಿತು. ಇದರಿಂದಾಗಿ ಅವರು ಟೆಸ್ಟ್ ಸರಣಿಯನ್ನು ಸಹ ಆಡಲು ಸಾಧ್ಯವಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರ ಫಿಟ್ನೆಸ್ ಬಗ್ಗೆ ಆತಂಕ ಹಾಗೂ ಅನುಮಾನ ಮೂಡಿದೆ.
KL Rahul: ಮದುವೆ ತಯಾರಿಯ ನಡುವೆಯೂ ಏಕದಿನ ಸರಣಿಗೆ ಸಮರಾಭ್ಯಾಸ ಶುರು ಮಾಡಿದ ರಾಹುಲ್; ವಿಡಿಯೋ
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಸಂಪೂರ್ಣ ಫಿಟ್ ಆಗಿರುವ ಮೂಲಕ ಪುನರಾಗಮನ ಮಾಡಲಿ ಎಂದು ಭಾರತ ತಂಡ ಮತ್ತು ಅಭಿಮಾನಿಗಳು ಹಾರೈಸಿದ್ದಾರೆ. ಸ್ವತಃ ಕ್ಯಾಪ್ಟನ್ ರೋಹಿತ್ ತಮ್ಮ ಒಂದು ವಿಡಿಯೋ ಮೂಲಕ ಅಭಿಮಾನಿಗಳ ಈ ಭರವಸೆಗೆ ಶಕ್ತಿ ತುಂಬಿದ್ದಾರೆ. ಏಕದಿನ ಸರಣಿಯ ಆರಂಭಕ್ಕೆ 4 ದಿನಗಳ ಮೊದಲು ಶುಕ್ರವಾರ, ಜನವರಿ 6 ರಂದು ನಾಯಕ ರೋಹಿತ್ ತಮ್ಮ ಇನ್ಸ್ಟಾಗ್ರಮ್ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ತಮ್ಮ ಫಿಟ್ನೇಸ್ ತಯಾರಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿಡಿಯೋದಲ್ಲಿ ಕಾಣುವಂತೆ ಟೀಂ ಇಂಡಿಯಾ ನಾಯಕ ಈಗ ಇಂಜುರಿಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಫಿಟ್ ಆಗಿರುವುದನ್ನು ಕಾಣಬಹುದಾಗಿದೆ. ಹೀಗಾಗಿ ರೋಹಿತ್ ಫಿಟ್ ಆಗಿರುವುದು ಮತ್ತು ಫ್ರೆಶ್ ಮೈಂಡ್ನಲ್ಲಿರುವುದು ಮೈದಾನದ ಒಳಗೆ ಮತ್ತು ಡ್ರೆಸ್ಸಿಂಗ್ ರೂಮ್‌ನಲ್ಲಿ ಭಾರತಕ್ಕೆ ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ, ಸ್ವತಃ ರೋಹಿತ್ ಉತ್ತಮ ಪ್ರದರ್ಶನ ನೀಡುವುದು ಮಾತ್ರವಲ್ಲದೆ ತಮ್ಮ ಸಹ ಆಟಗಾರರನ್ನು ಪ್ರೇರೇಪಿಸಲು ಅವರ ಈ ಮನಸ್ಥಿತಿಯಿಂದ ಸಾಧ್ಯವಾಗುತ್ತದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:55 pm, Sat, 7 January 23