ಏಷ್ಯಾಕಪ್ನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಕಳೆದ ವರ್ಷ ಟಿ20 ವಿಶ್ವಕಪ್ನಲ್ಲಿ ಅನುಭವಿಸಿದ ಸೋಲಿಗ ಸೇಡುತೀರಿಸಿಕೊಂಡಿದೆ. ಮೊದಲ ಬ್ಯಾಟ್ ಮಾಡಿದ ಪಾಕಿಸ್ತಾನ ಮೊಹಮ್ಮದ್ ರಿಜ್ವಾನ್ ಅವರ 43 ಹಾಗೂ ಇಫ್ತಿಖರ್ ಜಮಾನ್ 28 ರನ್ಗಳ ನೆರವಿನಿಂದ 19.5 ಓವರ್ನಲ್ಲಿ 147 ರನ್ಗೆ ಆಲೌಟ್ ಆಯಿತು. ಭಾರತ 19.4 ಓವರ್ನಲ್ಲಿ ಈ ಟಾರ್ಗೆಟ್ ಬೆನ್ನಟ್ಟಿ ಗೆಲುವು ಕಂಡಿತು. ಹಾರ್ದಿಕ್ ಪಾಂಡ್ಯ (Hardik Pandya) ಅಜೇಯ 33 ರನ್ ಹಾಗೂ ಜಡೇಜಾ, ವಿರಾಟ್ ಕೊಹ್ಲಿ ತಲಾ 35 ರನ್ ಬಾರಿಸಿದರು. ಹೀಗೆ ಬ್ಯಾಟಿಂಗ್ – ಬೌಲಿಂಗ್ ಎರಡೂ ವಿಭಾಗಗಳಲ್ಲಿ ಮಿಂಚಿದ ಭಾರತ ಏಷ್ಯಾಕಪ್ 2022 ರಲ್ಲಿ ಶುಭಾರಂಭ ಮಾಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ (Rohit Sharma) ಏನು ಹೇಳಿದ್ದಾರೆ ಕೇಳಿ.
”ಟಾರ್ಗೆಟ್ ಬೆನ್ನಟ್ಟುವ ಸಂದರ್ಭ ಅರ್ಧದ ಹೊತ್ತಿಗೆ ಯಾವುದೇ ಪರಿಸ್ಥಿತಿಯಲ್ಲಿದ್ದಿದ್ದರೂ ಪಂದ್ಯ ಗೆಲ್ಲುತ್ತೇವೆಂಬ ವಿಶ್ವಾಸ ನಮ್ಮಲ್ಲಿತ್ತು. ಇಂತಹ ಆತ್ಮವಿಶ್ವಾಸ ನಮ್ಮಲ್ಲಿ ಇದ್ದಾಗ ಈರೀತಿಯ ಫಲಿತಾಂಶ ಕಂಡುಬರುತ್ತದೆ. ತಂಡದ ಆಟಗಾರರಿಗೆ ಒಂದೊಂದು ಪಾತ್ರ ನೀಡಲಾಗಿದೆ ಮತ್ತು ಅವರಿಗೆ ಆ ಪಾತ್ರದ ಬಗ್ಗೆ ಸ್ಪಷ್ಟತೆ ಇದೆ. ಒನ್ಸೈಡ್ ಪಂದ್ಯ ಆಗಿ ಗೆಲ್ಲುವುದಕ್ಕಿಂತಲೂ ಈ ರೀತಿ ಹೋರಾಡಿ ಗೆಲುವು ಸಾಧಿಸುವುದು ಉತ್ತಮ,” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಇದೇವೇಳೆ ಹಾರ್ದಿಕ್ ಪಾಂಡ್ಯ ಪ್ರದರ್ಶನವನ್ನು ಹಾಡಿ ಹೊಗಳಿದ ರೋಹಿತ್, ”ಇಂಜುರಿಯಿಂದ ಕಮ್‌ಬ್ಯಾಕ್ ಮಾಡಿದ ಸಮಯದಿಂದಲೂ ಹಾರ್ದಿಕ್ ಅತ್ಯುತ್ತಮ ಆಟ ಪ್ರದರ್ಶಿಸುತ್ತಿದ್ದಾರೆ. ತಂಡದಿಂದ ಹೊರಗಿದ್ದ ಸಮಯದಲ್ಲಿ ಅವರು ತಮ್ಮ ಫಿಟ್ನೆಸ್‌ನ ಪ್ರಾಮುಖ್ಯತೆ ಅರಿತು ಆ ಬಗ್ಗೆ ಕಠಿಣ ಪರಿಶ್ರಮ ವಹಿಸಿದ್ದಾರೆ. ಅವರ ಬೌಲಿಂಗ್ ನೋಡಲು ಖುಷಿ ಆಗುತ್ತದೆ. ಈಗ 140 ಕಿ.ಮೀ.ಗೂ ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದು, ಅವರ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ನಮ್ಮೆಲ್ಲರಿಗೂ ತಿಳಿದೇ ಇದೆ. ನಾವದನ್ನು ನೋಡಿದ್ದೇವೆ,” ಎಂಬುದು ರೋಹಿತ್ ಮಾತು.
ಹಾರ್ದಿಕ್ ಕುರಿತು ಮಾತು ಮುಂದುವರೆಸಿದ ರೋಹಿತ್, “ಒಬ್ಬ ಆಟಗಾರ ಸಾಮರ್ಥ್ಯವನ್ನು ಅರಿತು ಅದಕ್ಕೆ ತಕ್ಕಂತೆ ಆಟವಾಡುವುದು ಮುಖ್ಯವಾಗುತ್ತದೆ. ಹಾರ್ದಿಕ್ ಈರೀತಿ ಮಾಡಿದ್ದಾರೆ. ಅವರಲ್ಲಿ ಈಗ ಆತಂಕ ಎಂಬುದೇ ಇಲ್ಲ. ಬ್ಯಾಟಿಂಗ್ ಆಗಲಿ ಅಥವಾ ಬೌಲಿಂಗ್ ಆಗಲಿ ತಾನು ತಂಡಕ್ಕೆ ಏನು ಕೊಡುಗೆ ನೀಡಬೇಕು ಎಂಬ ಸ್ಪಷ್ಟತೆ ಅವರಲ್ಲಿದೆ. ದೊಡ್ಡ ಮೊತ್ತದ ಟಾರ್ಗೆಟ್ ಇದ್ದಾಗ ಓವರ್‌ಗೆ 10ಕ್ಕೂ ಅಧಿಕ ರನ್ ಬೇಕು ಎಂದಿದ್ದರೂ ಹಾರ್ದಿಕ್ ಎಲ್ಲಿಯೂ ಕೂಡ ಆತಂಕ ಪಡಲಿಲ್ಲ,” ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಸೋತ ತಂಡದ ನಾಯಕ ಬಾಬರ್ ಅಜಮ್ ಮಾತನಾಡಿ, ”ನಾವು ಬೌಲಿಂಗ್ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದ್ದೆವು. ಆದರೆ, ಬ್ಯಾಟಿಂಗ್ನಲ್ಲಿ ಇನ್ನೂ 10-15 ರನ್ ಹೆಚ್ಚು ಹೊಡೆಯಬೇಕಿತ್ತು. ನಮ್ಮ ಬೌಲರ್ಗಳು ಅದ್ಭುತ ಪ್ರದರ್ಶನ ತೋರಿದ್ದಾರೆ. ಕೊನೆಯ ಹಂತದ ವರೆಗೂ ಪಂದ್ಯವನ್ನು ಕೊಂಡೊಯ್ಯಿದಿದ್ದಾರೆ. ನಮ್ಮ ಉದ್ದೇಶ ಎದುರಾಳಿಗೆ ಒತ್ತಡ ಹೇರುವುದು ಆಗಿತ್ತು. ಆದರೆ, ಹಾರ್ದಿಕ್ ಉತ್ತಮವಾಗಿ ಪಂದ್ಯವನ್ನು ಫಿನಿಶ್ ಮಾಡಿದರು,” ಎಂದು ಹೇಳಿದರು.