Updated on:Aug 29, 2022 | 12:08 AM
ಟೀಮ್ ಇಂಡಿಯಾ ಏಷ್ಯಾಕಪ್ 2022 ಅನ್ನು ಉತ್ತಮ ರೀತಿಯಲ್ಲಿ ಆರಂಭ ಮಾಡಿದೆ. ಪಾಕಿಸ್ತಾನದ ವಿರುದ್ಧದ ಮೊದಲ ಪಂದ್ಯದಲ್ಲಿ ತನ್ನ ಅದ್ಭುತ ಬೌಲಿಂಗ್ ಮೂಲಕ ಜಯ ಸಾಧಿಸಿದೆ. ದುಬೈನಲ್ಲಿ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಕೇವಲ 147 ರನ್‌ಗಳಿಗೆ ಆಲೌಟ್ ಮಾಡಿತು. ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಬೌಲಿಂಗ್ ನಾಯಕತ್ವದಲ್ಲಿ ಭಾರತದ ವೇಗಿಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿ, ಈ ಮೂಲಕ ಹಿಂದೆಂದೂ ಮಾಡದ ಅದ್ಭುತಗಳನ್ನು ಮಾಡಿದರು.
ಟಿ20 ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಭಾರತದ ವೇಗದ ಬೌಲರ್‌ಗಳು ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸಿದ್ದು ಇದೇ ಮೊದಲು. ಭಾರತ ತಂಡ ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಅವರೊಂದಿಗೆ ಈ ಪಂದ್ಯದಲ್ಲಿ ಕಣಕ್ಕಿಳಿದಿತ್ತು ಮತ್ತು ಎಲ್ಲರೂ ವಿಕೆಟ್ ಪಡೆದು ಮಿಂಚಿದರು.
ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಸೇರಿದಂತೆ ಒಟ್ಟು 4 ವಿಕೆಟ್ ಪಡೆದು ಪಾಕ್ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು. ಭುವನೇಶ್ವರ್ 4 ಓವರ್‌ಗಳಲ್ಲಿ ಕೇವಲ 26 ರನ್ ನೀಡಿ ಈ ಯಶಸ್ಸನ್ನು ಸಾಧಿಸಿದರು.
ಹಾರ್ದಿಕ್ ಪಾಂಡ್ಯ ವಾಪಸಾತಿಯಿಂದ ಟೀಮ್ ಇಂಡಿಯಾಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಭಾರತೀಯ ಆಲ್ ರೌಂಡರ್ ನಿರಂತರವಾಗಿ ಶಾರ್ಟ್ ಬಾಲ್ಗಳ ಬಳಕೆಯಿಂದ ಪಾಕ್ ತಂಡವನ್ನು ತಲ್ಲಣಗೊಳಿಸಿದರು. ಜೊತೆಗೆ ಮೊಹಮ್ಮದ್ ರಿಜ್ವಾನ್ ಸೇರಿದಂತೆ 3 ವಿಕೆಟ್ ಪಡೆದು ಕೇವಲ 25 ರನ್ ನೀಡಿದರು.
ಯುವ ವೇಗಿಗಳಾದ ಅರ್ಷದೀಪ್ ಸಿಂಗ್ ಮತ್ತು ಅವೇಶ್ ಖಾನ್ ಕೂಡ ಪಾಕಿಸ್ತಾನದ ವಿರುದ್ಧ ಆಡುವ ಮೂಲಕ ಯಶಸ್ಸನ್ನು ಪಡೆದರು. ಇಬ್ಬರೂ ಸ್ವಲ್ಪ ದುಬಾರಿಯಾದರು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಅರ್ಷದೀಪ್ ಸಿಂಗ್ 2, ಅವೇಶ್ ಒಂದು ವಿಕೆಟ್ ಪಡೆದರು.
Published On - 12:08 am, Mon, 29 August 22