ಐಸಿಸಿ ಟಿ20 ವಿಶ್ವಕಪ್ 2022 (T20 World Cup) ಟೂರ್ನಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಸೂಪರ್ 12 ಹಂತದ ಎಲ್ಲ ಪಂದ್ಯಗಳು ಮುಕ್ತಾಯಗೊಂಡಿದ್ದು ಗ್ರೂಪ್ 1 ಮತ್ತು ಗ್ರೂಪ್ 2 ರಿಂದ ಮೊದಲ ಎರಡು ಸ್ಥಾನ ಪಡೆದುಕೊಂಡ ತಂಡಗಳು ಸೆಮಿ ಫೈನಲ್ಗೆ ಪ್ರವೇಶ ಪಡೆದಿದೆ. ಗ್ರೂಪ್ 1 ರಿಂದ ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ ಗ್ರೂಪ್ 2 ರಿಂದ ಭಾರತ, ಪಾಕಿಸ್ತಾನ ಮುಂದಿನ ಹಂತಕ್ಕೆ ತೇರ್ಗಡೆಯಾಗಿದೆ. ನವೆಂಬರ್ 9 ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯಲಿರುವ ಮೊದಲ ಸೆಮಿ ಫೈನಲ್ನಲ್ಲಿ ನ್ಯೂಜಿಲೆಂಡ್-ಪಾಕಿಸ್ತಾನ (New Zealand vs Pakistan) ಮುಖಾಮುಖಿ ಆಗಲಿದೆ. ನಂತರ ನವೆಂಬರ್ 10 ರಂದು ಅಡಿಲೆಡ್ನ ಓವಲ್ನಲ್ಲಿ ಆಯೋಜಿಸಲಾಗಿರುವ ದ್ವಿತೀಯ ಪಂದ್ಯದಲ್ಲಿ ಭಾರತ-ಇಂಗ್ಲೆಂಡ್ (India vs England) ಸೆಣೆಸಾಟ ನಡೆಸಲಿದೆ. ಆದರೆ, ಈ ಮಹತ್ವದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಕ್ಕೆ ಆಘಾತ ಉಂಟಾಗಿದೆ.
ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯಕ್ಕಾಗಿ ಈಗಾಗಲೇ ಅಡಿಲೇಡ್ಗೆ ಬಂದಿಳಿದಿರುವ ಭಾರತ ಅಭ್ಯಾಸ ಕೂಡ ಶುರುಮಾಡಿದೆ. ಆದರೆ, ನೆಟ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವಾಗ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಇಂಜುರಿಗೆ ತುತ್ತಾಗಿದ್ದಾರೆ. ಹಿಟ್ಮ್ಯಾನ್ ಬಲ ಮುಂಗೈಗೆ ಪೆಟ್ಟು ಮಾಡಿಕೊಂಡಿದ್ದು ಅಭ್ಯಾಸವನ್ನು ಅರ್ಧದಲ್ಲೇ ಬಿಟ್ಟು ತೆರಳಿದ್ದಾರೆ. ನೆಟ್ನಲ್ಲಿ ಗಾಯವಾದ ತಕ್ಷಣ ಟೀಮ್ ಇಂಡಿಯಾ ವೈದ್ಯಕೀಯ ಸಿಬ್ಬಂದಿ ಬಂದು ಚಿಕಿತ್ಸೆ ನೀಡಿದ್ದಾರೆ. ಆದರೆ, ನೋವು ಅತಿಯಾದ ಕಾರಣ ಬ್ಯಾಟಿಂಗ್ ಅಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿದರು.
Rohit Sharma’s injury video when he got a blow in the forearms when he was practicing at the nets #T20WorldCup #INDvENG pic.twitter.com/HNpwV5xpNN
— ???︎?︎??????????™ ??❤️ (@MSDianMrigu) November 8, 2022
ರೋಹಿತ್ ಶರ್ಮಾ ಇಂಜುರಿ ಇದೀಗ ಭಾರತಕ್ಕೆ ದೊಡ್ಡ ಆಘಾತ ಉಂಟಾಗಿದೆ. ಸ್ವತಃ ನಾಯಕನೇ ಗಾಯಕ್ಕೆ ಗುರಿಯಾಗಿರುವುದು ಮ್ಯಾನೇಜ್ಮೆಂಟ್ಗೆ ತಲೆನೋವಾಗಿದೆ. ಆದರೆ, ರೋಹಿತ್ ಇಂಜುರಿ ಬಗ್ಗೆ ಬಿಸಿಸಿಐ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ನೆಟ್ಸ್‌ನಿಂದ ನಿರ್ಗಮಿಸಿದ ರೋಹಿತ್ ಕೈಗೆ ಐಸ್ ಬಾಕ್ಸ್ ಕಟ್ಟಿದ್ದು, ದೂರದಲ್ಲಿ ಕುಳಿತು ಅವರು ಅಭ್ಯಾಸವನ್ನು ವೀಕ್ಷಿಸುತ್ತಿದ್ದರು. ಮಾನಸಿಕ ಕಂಡೀಷನಿಂಗ್ ತರಬೇತುದಾರ ಪ್ಯಾಡಿ ಅಪ್ಟನ್ ಅವರೊಂದಿಗೆ ರೋಹಿತ್ ಸಾಕಷ್ಟು ಸಮಯದವರೆಗೆ ಮಾತನಾಡುತ್ತಿರುವುದು ಕಂಡುಬಂದಿದೆ.
ಇನ್ನು ನವೆಂಬರ್ 10 ರಂದು ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಸೆಮಿ ಫೈನಲ್ ಪಂದ್ಯದಲ್ಲಿ ಐಸಿಸಿ ಅಂಪೈರ್ಗಳ ಹೆಸರನ್ನು ಪ್ರಕಟ ಮಾಡಿದೆ. ಇದರಲ್ಲಿ ಆನ್-ಫೀಲ್ಡ್ ಅಂಪೈರ್ ಆಗಿ ಕುಮಾರ್ ಧರ್ಮಸೇನ ಮತ್ತು ಪಾಲ್ ರೀಫೆಲ್ ಕ್ರಿಸ್ ಗಫಾನಿ (ಮೂರನೇ ಅಂಪೈರ್), ರಾಡ್ ಟಕರ್ (ನಾಲ್ಕನೇ ಅಂಪೈರ್), ಮತ್ತು ಡೇವಿಡ್ ಬೂನ್ (ಪಂದ್ಯ ರೆಫರಿ) ಆಗಿ ಆಯ್ಕೆ ಆಗಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಕಡಿಮೆ ಪಂದ್ಯಗಳು ನಡೆದಿವೆ. ಈ ಎರಡು ತಂಡಗಳ ನಡುವೆ ಎಲ್ಲರಿಗೂ ನೆನಪಾಗುವಂತಹ ಒಂದೇ ಒಂದು ಪಂದ್ಯವಿದ್ದು, ಆ ಪಂದ್ಯದ ರೋಚಕತೆಯನ್ನು ಇದುವರೆಗೂ ಸಹ ಭಾರತೀಯರು ಮರೆತಿಲ್ಲ. ವಾಸ್ತವವಾಗಿ 2007 ರ ಮೊದಲ ಟಿ 20 ವಿಶ್ವಕಪ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಯುವರಾಜ್ ಸಿಂಗ್ ಸ್ಟುವರ್ಟ್ ಬ್ರಾಡ್ ಓವರ್ನಲ್ಲಿ ಸತತ ಆರು ಸಿಕ್ಸರ್‌ಗಳನ್ನು ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಜೊತೆಗೆ ಆ ಪಂದ್ಯವನ್ನು ಟೀಂ ಇಂಡಿಯಾ ಗೆದ್ದುಬೀಗಿತ್ತು. ಇದಾದ ಬಳಿಕ 2009ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಈ ಎರಡೂ ತಂಡಗಳು ಗ್ರೂಪ್ ಹಂತದಲ್ಲಿ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಭಾರತ ಸೋಲನುಭವಿಸಬೇಕಾಯಿತು. ಹೀಗಾಗಿ ಈ ಬಾರಿಯ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.