IND vs ENG: ಭಾರತದ ವೇಗಿಗಳಿಗಾಗಿ ಕೊಹ್ಲಿ, ರೋಹಿತ್, ದ್ರಾವಿಡ್ ಮಾಡಿದ ತ್ಯಾಗವೇನು ನೋಡಿ: ಕೇಳಿದ್ರೆ ಹೆಮ್ಮೆ ಆಗುತ್ತೆ
T20 World Cup Semi Final, India vs England: ಭಾರತೀಯ ಆಟಗಾರರು ಮೆಲ್ಬೋರ್ನ್ನಿಂದ ಅಡಿಲೇಡ್ಗೆ ವಿಮಾನದಲ್ಲಿ ಪ್ರಯಾಣ ಬೆಳೆಸುವ ಸಂದರ್ಭ ಎಲ್ಲರೂ ಹೆಮ್ಮೆ ಪಡುವಂತಹ ವಿಶೇಷ ಘಟನೆಯೊಂದು ನಡೆದಿದೆ.

ಭಾರತ ಕ್ರಿಕೆಟ್ ತಂಡ ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ (T20 World Cup) ಅದ್ಭುತ ಪ್ರದರ್ಶನ ತೋರಿ ಗ್ರೂಪ್ 2ರ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಈಗ ಸೆಮಿ ಫೈನಲ್ಗೆ ತಲುಪಿದೆ. ಒಟ್ಟು ಎರಡು ಸೆಮಿ ಫೈನಲ್ ಕದನ ನಡೆಯಲಿದ್ದು ನವೆಂಬರ್ 9 ರಂದು ನ್ಯೂಜಿಲೆಂಡ್-ಪಾಕಿಸ್ತಾನ (New Zealand vs Pakistan) ಮುಖಾಮುಖಿ ಆದರೆ, ನವೆಂಬರ್ 10 ರಂದು ಅಡಿಲೆಡ್ನ ಓವಲ್ನಲ್ಲಿ ಆಯೋಜಿಸಲಾಗಿರುವ ದ್ವಿತೀಯ ಪಂದ್ಯದಲ್ಲಿ ಭಾರತ-ಇಂಗ್ಲೆಂಡ್ (India vs England) ಸೆಣೆಸಾಟ ನಡೆಸಲಿದೆ. ಈ ಪಂದ್ಯಕ್ಕಾಗಿ ರೋಹಿತ್ ಪಡೆ ಈಗಾಗಲೇ ಅಡಿಲೇಡ್ಗೆ ಬಂದಿಳಿದಿದ್ದು ಅಭ್ಯಾಸ ಕೂಡ ಆರಂಭಿಸಿದೆ. ಆದರೆ, ಭಾರತೀಯ ಆಟಗಾರರು ಮೆಲ್ಬೋರ್ನ್ನಿಂದ ಅಡಿಲೇಡ್ಗೆ ವಿಮಾನದಲ್ಲಿ ಪ್ರಯಾಣ ಬೆಳೆಸುವ ಸಂದರ್ಭ ಎಲ್ಲರೂ ಹೆಮ್ಮೆ ಪಡುವಂತಹ ವಿಶೇಷ ಘಟನೆಯೊಂದು ನಡೆದಿದೆ.
ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನ ಪಂದ್ಯಕ್ಕೆ ಒಂದು ಸ್ಥಳದಿಂದ ಮತ್ತೊಂದು ಜಾಗಕ್ಕೆ ತೆರಳಲು ಕಡಿಮೆ ಎಂದರೂ ಐದು ಗಂಟೆಗಳವರೆಗೆ ದೇಶೀಯ ವಿಮಾನಗಳಲ್ಲಿ ಪ್ರಯಾಣಿಸಬೇಕು. ಇದರಲ್ಲಿ ತಂಡದ ಹಿರಿಯ ಆಟಗಾರರಿಗೆ ಹಾಗೂ ಕೋಚ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಿಶೇಷವಾದ ನಾಲ್ಕು ಬಿಸಿನೆಸ್ ಕ್ಲಾಸ್ ಸೀಟುಗಳನ್ನು ನಿಗದಿಪಡಿಸುತ್ತದೆ. ಭಾರತ ಪರ ಈ ಸೀಟುಗಳಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ಗೆ ಮೀಸಲಿಡಲಾಗಿದೆ.
ಆದರೆ, ಜಿಂಬಾಬ್ವೆ ವಿರುದ್ಧದ ಪಂದ್ಯ ಗೆದ್ದ ಬಳಿಕ ಮೆಲ್ಬೋರ್ನ್ನಿಂದ ಅಡಿಲೇಡ್ಗೆ ವಿಮಾನದಲ್ಲಿ ಪ್ರಯಾಣ ಬೆಳೆಸುವಾಗ ರೋಹಿತ್, ಕೊಹ್ಲಿ ಮತ್ತು ದ್ರಾವಿಡ್ ಅವರು ತಮ್ಮ ಬಿಸಿನೆಸ್ ಕ್ಲಾಸ್ ಸೀಟುಗಳನ್ನು ವೇಗಿಗಳಿಗೆ ಬಿಟ್ಟುಕೊಟ್ಟಿದ್ದಾರೆ. ಇದರಿಂದಾಗಿ ವೇಗದ ಬೌಲರ್ಗಳಾದ ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್ ಮತ್ತು ಭುವನೇಶ್ವರ್ ಕುಮಾರ್ ಆರಾಮವಾಗಿ ಪ್ರಯಾಣಿಸಿದ್ದಾರೆ. ಮಹತ್ವದ ಸೆಮಿಫೈನಲ್ ಪಂದ್ಯಕ್ಕೆ ವೇಗಿಗಳಿಗೆ ಆಯಾಸವಾಗದಿರಲಿ ಎನ್ನುವ ಉದ್ದೇಶದಿಂದ ಬ್ಯುಸಿನೆಸ್ ಕ್ಲಾಸ್ ಟಿಕೆಟ್‌ಗಳನ್ನು ವೇಗಿಗಳಿಗೆ ಬಿಟ್ಟುಕೊಟ್ಟಿದ್ದಾರೆ ಎಂದು ಹೇಳಲಾಗಿದೆ.
ಭಾರತ-ಇಂಗ್ಲೆಂಡ್ ಟಿಕೆಟ್ ಸೋಲ್ಡ್‌ಔಟ್:
ಗುರುವಾರ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಸೆಮಿಫೈನಲ್ ಪಂದ್ಯದ ಟಿಕೆಟ್‌ಗಳು ಈಗಾಗಲೇ ಸೋಲ್ಡ್‌ಔಟ್ ಆಗಿದೆ. ಅಡಿಲೇಡ್ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯಗಳು ನಡೆಯಲಿದ್ದು, ಮಾರಾಟಕ್ಕಿಟ್ಟ ಹೆಚ್ಚುವರಿ ಟಿಕೆಟ್‌ಗಳು ಕೂಡಾ ಕೆಲ ಗಂಟೆಗಳಲ್ಲೇ ಮಾರಾಟವಾಗಿದೆ ಎಂದು ವರದಿಯಾಗಿದೆ. ಕ್ರೀಡಾಂಗಣ 53,000 ಆಸನ ಸಾಮರ್ಥ್ಯ ಹೊಂದಿದ್ದು, ಬಹುತೇಕ ಆಸನಗಳು ಪೂರ್ತಿಯಾಗುವ ಸಾಧ್ಯತೆ ಇದೆ. ಹೀಗಾಗಿ ಇಂಡೋ-ಆಂಗ್ಲರ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯುವುದು ಖಚಿತ.
ರೋಹಿತ್ ಇಂಜುರಿ:
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತದ ಆಟಗಾರರು ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಭಾರತೀಯ ನಾಯಕ ರೋಹಿತ್ ಶರ್ಮಾ ಇಂಜುರಿಗೆ ಗುರಿಯಾಗಿದ್ದರೆ. ರೋಹಿತ್ ಅವರ ಬಲಗೈಗೆ ಚೆಂಡು ಬಡಿದು ಗಾಯಗೊಂಡಿದ್ದಾರೆ. ಸುಮಾರು 150 ಕಿ.ಮೀ ಗೂ ಹೆಚ್ಚಿನ ವೇಗದಲ್ಲಿ ಬಂದ ಚೆಂಡು ರೋಹಿತ್ ಮುಂಗೈಗೆ ಬಡಿಯಿತು. ತಕ್ಷಣ ರೋಹಿತ್ ವೈದ್ಯಕೀಯ ಆರೈಕೆ ಪಡೆದರು. ಆದರೆ, ಈ ಇಂಜುರಿ ಬಗ್ಗೆ ಬಿಸಿಸಿಐ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ರೋಹಿತ್ ಶರ್ಮಾ ಇಂಜುರಿ ಇದೀಗ ಭಾರತಕ್ಕೆ ದೊಡ್ಡ ಆಘಾತ ಉಂಟಾಗಿದೆ. ಸ್ವತಃ ನಾಯಕನೇ ಗಾಯಕ್ಕೆ ಗುರಿಯಾಗಿರುವುದು ಮ್ಯಾನೇಜ್ಮೆಂಟ್ಗೆ ತಲೆನೋವಾಗಿದೆ. ನೆಟ್ಸ್‌ನಿಂದ ನಿರ್ಗಮಿಸಿದ ರೋಹಿತ್ ಕೈಗೆ ಐಸ್ ಬಾಕ್ಸ್ ಕಟ್ಟಿದ್ದು, ದೂರದಲ್ಲಿ ಕುಳಿತು ಅವರು ಅಭ್ಯಾಸವನ್ನು ವೀಕ್ಷಿಸುತ್ತಿದ್ದರು.




