ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಇಂದು ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವೆ ಮೊದಲ ಟಿ20 ಪಂದ್ಯ ನಡೆಯಲಿದೆ. ಮುಂದಿನ ತಿಂಗಳು ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ (T20 World Cup) ಪೂರ್ವಸಿದ್ಧತಾ ಅಭಿಯಾನವಾಗಿ ಆಡಿಸಲಾಗುತ್ತಿರುವ ಈ ಸರಣಿಯು ಎರಡೂ ತಂಡಗಳಿಗೆ ಮಹತ್ವದ್ದಾಗಿದೆ. ರೋಹಿತ್ ಶರ್ಮಾ (Rohit Sharma) ಬಳಗ ತವರಿನಲ್ಲಿ ಬಲಿಷ್ಠವಾಗಿರುವುದು ಗೊತ್ತೇ ಇದೆ. ಹೀಗಾಗಿ ಕಳೆದ ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ ಯಾವರೀತಿ ಪ್ರದರ್ಶನ ತೋರುತ್ತದೆ ಎಂಬುದು ನೋಡಬೇಕಿದೆ. ಇದರ ನಡುವೆ ನಾಯಕ ರೋಹಿತ್ ಶರ್ಮಾ ವಿಶ್ವ ದಾಖಲೆಯ ಹೊಸ್ತಿಲಲ್ಲಿದ್ದಾರೆ.
ರೋಹಿತ್ ಶರ್ಮಾ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್‌ಮನ್ ಆಗಲು ಕೇವಲ ಎರಡು ಸಿಕ್ಸರ್‌ಗಳಷ್ಟೆ ಬೇಕಾಗಿದೆ. ಪ್ರಸ್ತುತ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ಅವರು ಒಟ್ಟು 172 ಸಿಕ್ಸರ್‌ಗಳೊಂದಿಗೆ ಕಡಿಮೆ ಕ್ರಿಕೆಟ್ ಮಾದರಿಯಲ್ಲಿ ಗರಿಷ್ಠ ಸಂಖ್ಯೆಯ ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ರೋಹಿತ್ ಶರ್ಮಾ 171 ಸಿಕ್ಸರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ (124), ಇಂಗ್ಲೆಂಡ್‌ನ ಮಾಜಿ ನಾಯಕ ಇಯಾನ್ ಮಾರ್ಗನ್ (120) ಮತ್ತು ಆಸ್ಟ್ರೇಲಿಯದ ಟಿ20 ನಾಯಕ ಆ್ಯರನ್ ಫಿಂಚ್ (117) ನಂತರದ ಸ್ಥಾನದಲ್ಲಿದ್ದಾರೆ.
ಕೊಹ್ಲಿಗೆ ಬೇಕು 98 ರನ್:
ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಈ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಒಟ್ಟು 98 ರನ್ ಗಳಿಸಿದರೆ ಟಿ20 ಮಾದರಿ ಕ್ರಿಕೆಟ್ನಲ್ಲಿ 11,000 ರನ್ ಗಳಿಸಿದ ದಾಖಲೆ ಬರೆಯಲಿದ್ದಾರೆ. ಈ ರನ್ ಗಳಿಸುವಲ್ಲಿ ಯಶಸ್ವಿಯಾದರೆ, ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಲಿದ್ದಾರೆ. ಇದುವರೆಗೆ ಭಾರತದ ಯಾವುದೇ ಬ್ಯಾಟ್ಸ್‌ಮನ್ ಟಿ20 ಮಾದರಿಯಲ್ಲಿ ಇಷ್ಟು ರನ್ ಗಳಿಸಿಲ್ಲ. ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. ಗೇಲ್ 463 ಪಂದ್ಯಗಳಲ್ಲಿ 14,562 ರನ್ ಗಳಿಸಿದ್ದಾರೆ. ಶೋಯೆಬ್ ಮಲಿಕ್ 480 ಪಂದ್ಯಗಳಲ್ಲಿ 11,893 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಫಾರ್ಮ್ಗೆ ಬಂದಿರುವುದು ಸಂತಸದ ಸುದ್ದಿ. ಕೊಹ್ಲಿ ಏಷ್ಯಾಕಪ್ನ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಇಂಡೋ– ಆಸೀಸ್ ಮೊದಲ ಟಿ20 ಪಂದ್ಯ ಸಂಜೆ 7:30 ಕ್ಕೆ ಆರಂಭವಾಗಲಿದೆ. ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ. ನೇರಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಸೇರಿದಂತೆ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿಧ ಚಾನೆಲ್‌ಗಳಲ್ಲಿ ಲೈವ್ ಇರಲಿದೆ. ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ.
Published On - 11:01 am, Tue, 20 September 22