IND vs AUS: ಇಂದು ಭಾರತ- ಆಸ್ಟ್ರೇಲಿಯಾ ಮೊದಲ ಟಿ20: ಇಲ್ಲೂ ಪ್ರಯೋಗ ನಡೆಸುತ್ತಾ ರೋಹಿತ್ ಪಡೆ?
ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಫಾರ್ಮ್ಗೆ ಬಂದಿರುವುದು ಸಂತಸದ ಸುದ್ದಿ. ಆದರೆ, ಕೆಎಲ್ ರಾಹುಲ್ ಕಡೆಯಿಂದ ಇಂಜುರಿಯಿಂದ ಗುಣಮುಖರಾದ ಬಳಿಕ ವಾವ್ ಎಂಬಂತಹ ಇನ್ನಿಂಗ್ಸ್ ಬಂದಿಲ್ಲ.
ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಟಿ20 ಸರಣಿಗೆ ಇಂದು ಚಾಲನೆ ಸಿಗಲಿದೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಲಿದೆ. ಮುಂದಿನ ತಿಂಗಳು ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ (T20 World Cup) ಪೂರ್ವಸಿದ್ಧತಾ ಅಭಿಯಾನವಾಗಿ ಆಡಿಸಲಾಗುತ್ತಿರುವ ಈ ಸರಣಿಯು ಎರಡೂ ತಂಡಗಳಿಗೆ ಮಹತ್ವದ್ದಾಗಿದೆ. ರೋಹಿತ್ ಶರ್ಮಾ (Rohit Sharma) ಬಳಗ ತವರಿನಲ್ಲಿ ಬಲಿಷ್ಠವಾಗಿರುವುದು ಗೊತ್ತೇ ಇದೆ. ಹೀಗಾಗಿ ಕಳೆದ ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ ಯಾವರೀತಿ ಪ್ರದರ್ಶನ ತೋರುತ್ತದೆ ಎಂಬುದು ನೋಡಬೇಕಿದೆ. ಜೊತೆಗೆ ಏಷ್ಯಾಕಪ್ನಲ್ಲಿ ಅನುಭವಿಸಿದ ಸೋಲಿನಿಂದ ಹೊರಬರಬೇಕಿದೆ.
ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಫಾರ್ಮ್ಗೆ ಬಂದಿರುವುದು ಸಂತಸದ ಸುದ್ದಿ. ಕೊಹ್ಲಿ ಏಷ್ಯಾಕಪ್‌ನ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಆದರೆ, ಕೆಎಲ್ ರಾಹುಲ್ ಕಡೆಯಿಂದ ಇಂಜುರಿಯಿಂದ ಗುಣಮುಖರಾದ ಬಳಿಕ ವಾವ್ ಎಂಬಂತಹ ಇನ್ನಿಂಗ್ಸ್ ಬಂದಿಲ್ಲ. ವಿಶ್ವಕಪ್ಗೂ ಮುನ್ನ ಇವರು ಫಾರ್ಮ್ ಕಂಡುಕೊಳ್ಳಬೇಕಾದ ಒತ್ತಡದಲ್ಲಿದ್ದಾರೆ.
ಟೀಮ್ ಇಂಡಿಯಾಕ್ಕೆ ದೊಡ್ಡ ತಲೆನೋವಾಗಿರುವುದೇ ವಿಕೆಟ್ ಕೀಪರ್‌ಗಳಾದ ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್. ಇವರಲ್ಲಿ ಯಾರನ್ನ ಆಡಿಸಬೇಕು ಎಂಬ ಗೊಂದಲವಿದೆ. ಇಬ್ಬರನ್ನೂ ಆಡಿಸಿದರೆ ಒಂದು ಬೌಲಿಂಗ್ ಆಯ್ಕೆ ಕಡಿಮೆ ಆಗುತ್ತದೆ. ಹೀಗಾಗಿ ಇವರಲ್ಲಿ ಯಾರು ಆಯ್ಕೆಯಾಗಲಿದ್ದಾರೆ ಎಂಬುದು ಖಚಿತವಾಗಿಲ್ಲ.
ಇನ್ನು ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕ ಕೂಡ ಟಿ20 ವಿಶ್ವಕಪ್ಗೂ ಮುನ್ನ ಈ ಸರಣಿಯಲ್ಲಿ ಅಂತಿಮವಾಗಬೇಕಿದೆ. ದೀಪಕ್ ಹೂಡಾ ಏಷ್ಯಾಕಪ್‌ನ ಸೂಪರ್ 4 ಹಂತದ ಎಲ್ಲ ಪಂದ್ಯಗಳಲ್ಲಿ ಆಡಿದ್ದರೂ, ತಂಡದಲ್ಲಿ ಅವರ ಪಾತ್ರ ಏನು ಎಂಬುದರಲ್ಲಿ ಸ್ಪಷ್ಟತೆ ಇಲ್ಲ. ಬ್ಯಾಟಿಂಗ್ನಲ್ಲಿ ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಲಿಲ್ಲ. ಬೌಲಿಂಗ್ನಲ್ಲಿ ಇವರಿಗೆ ಅವಕಾಶ ಸಿಗಲಿಲ್ಲ. ವೇಗಿಗಳಾದ ಹರ್ಷಲ್ ಪಟೇಲ್ ಮತ್ತು ಜಸ್‌ಪ್ರೀತ್ ಬೂಮ್ರಾ ಅವರು ವಾಪಸಾಗಿರುವುದು ತಂಡದ ಬೌಲಿಂಗ್ ವಿಭಾಗದ ಬಲ ಹೆಚ್ಚಿಸಿದೆ. ಯುಜ್ವೇಂದ್ರ ಚಹಲ್ ಮತ್ತು ಆರ್. ಅಶ್ವಿನ್ ಪೈಕಿ ಯಾರಿಗೆ ಸ್ಥಾನ ಎಂಬುದು ನೋಡಬೇಕಿದೆ.
ಇತ್ತ ಆ್ಯರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ಇಂಜುರಿಯಿಂದಾಗಿ ಕೆಲವು ಪ್ರಮುಖ ಆಟಗಾರರ ಅನುಪಸ್ಥಿತಿಯೊಂದಿಗೆ ಭಾರತಕ್ಕೆ ಬಂದಿದೆ. ಡೇವಿಡ್ ವಾರ್ನರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಕ್ ಮತ್ತು ಮಿಚೆಲ್ ಮಾರ್ಷ್ ಅವರೂ ಈ ಸರಣಿಯಲ್ಲಿ ಆಡುತ್ತಿಲ್ಲ. ಸತತ ಕಳಪೆ ಫಾರ್ಮ್ನಿಂದ ತತ್ತರಿಸಿರುವ ಫಿಂಚ್ಗೆ ಈ ಸರಣಿ ಮಹತ್ವದ್ದಾಗಿದೆ. ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್ ಮೇಲೆ ಎಲ್ಲರ ಕಣ್ಣಿದೆ.
ಇಂಡೋ– ಆಸೀಸ್ ಮೊದಲ ಟಿ20 ಪಂದ್ಯ ಸಂಜೆ 7:30 ಕ್ಕೆ ಆರಂಭವಾಗಲಿದೆ. ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ. ನೇರಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಸೇರಿದಂತೆ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿಧ ಚಾನೆಲ್‌ಗಳಲ್ಲಿ ಲೈವ್ ಇರಲಿದೆ. ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.
ಉಭಯ ತಂಡಗಳು ಹೀಗಿವೆ:
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ.
ಆಸ್ಟ್ರೇಲಿಯಾ ತಂಡ: ಆರೋನ್ ಫಿಂಚ್ (ನಾಯಕ), ಸೀನ್ ಅಬಾಟ್, ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಝಲ್‌ವುಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್‌ಸನ್, ಡೇನಿಯಲ್ ಸ್ಯಾಮ್ಸ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಆಡಮ್ ಝಂಪಾ.
Published On - 8:44 am, Tue, 20 September 22