ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ್ದ ಭಾರತ (India vs West Indies) ತಂಡ ಇದೀಗ ಎರಡನೇ ಕದನಕ್ಕೆ ಸಜ್ಜಾಗುತ್ತಿದೆ. ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಇಂಡೋ-ವಿಂಡೀಸ್ ಎರಡನೇ ಟಿ20 ಪಂದ್ಯ ಆಯೋಜನೆಯಾಗಿದ್ದು, ಟೀಮ್ ಇಂಡಿಯಾ (Team India) ಮೇಲೆ ಎಲ್ಲರ ಕಣ್ಣಿದೆ. ಈಗಾಗಲೇ 1-0 ಅಂತರದಿಂದ ಮುನ್ನಡೆ ಪಡೆದುಕೊಂಡಿರುವ ರೋಹಿತ್ (Rohit Sharma) ಪಡೆ ಇಂದಿನ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವ ಯೋಜನೆಯಲ್ಲಿದೆ. ಇತ್ತ ವೆಸ್ಟ್ ಇಂಡೀಸ್ ಈ ಬಾರಿಯ ಭಾರತದ ಪ್ರವಾಸದಲ್ಲಿ ಒಂದೇ ಒಂದು ಗೆಲುವು ಕಂಡಿಲ್ಲ. ಹೀಗಾಗಿ ಕೀರೊನ್ ಪೊಲಾರ್ಡ್ ಪಡೆಗೂ ಇದು ಮಹತ್ವದ ಪಂದ್ಯವಾಗಿದೆ. ಈಡನ್ ಗಾರ್ಡನ್ಸ್ನಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
ಭಾರತ ಬ್ಯಾಟಿಂಗ್ನಲ್ಲಿ ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರುತ್ತಿಲ್ಲ. ನಾಯಕ ರೋಹಿತ್ ಶರ್ಮಾ ಆರಂಭದಲ್ಲಿ ಕೊಂಚ ರನ್ ಕಲೆಹಾಕುತ್ತಿದ್ದಾರಷ್ಟೆ. ಮಧ್ಯಮ ಕ್ರಮಾಂಕದ ವೈಫಲ್ಯ ಎದ್ದು ಕಾಣುತ್ತಿದೆ. ಇಶಾನ್ ಕಿಶನ್ ಕಳೆದ ಪಂದ್ಯದಲ್ಲಿ ರನ್ ಗಳಿಸಲು ಪರದಾಡಿರುವ ಕಾರಣ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇವರ ಜಾಗಕ್ಕೆ ಅವಕಾಶಕ್ಕಾಗಿ ಕಾಯುತ್ತಿರುವ ರುತುರಾಜ್ ಗಾಯಕ್ವಾಡ್ ಬಂದರೆ ಅಚ್ಚರಿ ಪಡಬೇಕಿಲ್ಲ. ಇತ್ತ ಮಾಜಿ ನಾಯಕ ವಿರಾಟ್ ಕೊಹ್ಲಿ ಏಕದಿನ ಸರಣಿಯಿಂದಲೂ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದು, ಇಂದು ದೊಡ್ಡ ರನ್ ಕಲೆಹಾಕಬೇಕಾದ ಒತ್ತಡದಲ್ಲಿದ್ದಾರೆ.
ಸೂರ್ಯಕುಮಾರ್ ಯಾದವ್ ಉತ್ತಮ ಆಟವಾಡುತ್ತಿದ್ದರೆ, ರಿಷಭ್ ಪಂತ್ ಕೆಲ ಪಂದ್ಯದಲ್ಲಿ ಮಿಂಚಿದರೆ ಇನ್ನೂ ಕೆಲ ಮ್ಯಾಚ್ನಲ್ಲಿ ವೈಫಲ್ಯ ಕಾಣುತ್ತಿದ್ದಾರೆ. ಇದರ ನಡುವೆ ಶ್ರೇಯಸ್ ಅಯ್ಯರ್ಗೆ ಸ್ಥಾನವೇ ಇಲ್ಲದಂತಾಗಿದೆ. ವೆಂಕಟೇಶ್ ಅಯ್ಯರ್ ಹಾಗೂ ದೀಪಕ್ ಹೂಡ್ ಇಬ್ಬರು ಆಲ್ರೌಂಡರ್ಗಳು ಇರುವ ಕಾರಣ ಒಬ್ಬರನ್ನು ಕೈಬಿಡುವ ಸಾಧ್ಯತೆ ಕೂಡ ಇದೆ. ರವಿ ಬಿಷ್ಟೋಯನ್ ಚೊಚ್ಚಲ ಪಂದ್ಯದಲ್ಲೇ ಮಿಂಚಿ ಪಂದ್ಯಶ್ರೇಷ್ಠ ಕೂಡ ಬಾಜಿಕೊಂಡಿದ್ದರು. ಹೀಗಾಗಿ ಇವರ ಮೇಲೆ ದೊಡ್ಡ ಜವಾಬ್ದಾರಿಗಳಿವೆ. ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಬಲಗೈಗೆ ಗಾಯಗೊಂಡಿರುವ ವೇಗದ ಬೌಲರ್ ದೀಪಕ್ ಚಾಹರ್ ಈ ಪಂದ್ಯದಲ್ಲಿ ಆಡುತ್ತಾರೆಯೋ ಇಲ್ಲವೋ ಎಂಬುದು ಸಂದೇಹ.
ಇನ್ನು ಈ ಬಾರಿಯ ಭಾರತ ಪ್ರವಾಸದಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ವೆಸ್ಟ್ ಇಂಡೀಸ್ ಗಾಯದ ಸಮಸ್ಯೆಯಿಂದಾಗಿ ಮೊದಲ ಪಂದ್ಯದಲ್ಲಿ ಜೇಸನ್ ಹೋಲ್ಡರ್ ಅವರಿಗೆ ವಿಶ್ರಾಂತಿ ನೀಡಿತ್ತು. ಇಂದಿನ ಪಂದ್ಯಕ್ಕೆ ಲಭ್ಯ ಇರುವ ನಿರೀಕ್ಷೆ ಇದೆ. ನಿಕೋಲಸ್ ಪೂರನ್ ಫಾರ್ಮ್ ಕಂಡುಕೊಂಡಿರುವುದು ವೆಸ್ಟ್ ಇಂಡೀಸ್ ತಂಡದಲ್ಲಿ ಭರವಸೆ ಮೂಡಿಸಿದೆ. ಅರಂಭಿಕ ಬ್ಯಾಟರ್ ಕೈಲ್ ಮೇಯರ್ಸ್ ಮತ್ತು ಮಧ್ಯಮ ಕ್ರಮಾಂಕದ ಕೀರನ್ ಪೊಲಾರ್ಡ್ ತಂಡಕ್ಕೆ ತಮ್ಮಿಂದಾದ ಕಾಣಿಕೆ ನೀಡಿದ್ದಾರೆ. ಹೀಗಾಗಿ ಅವರ ಮೇಲೆಯೂ ನಿರೀಕ್ಷೆ ಇದೆ.
ಈಡನ್ ಗಾರ್ಡನ್ಸ್ ಪಿಚ್ ವರದಿ:
ಮೊದಲ ಪಂದ್ಯದಲ್ಲಿ ಕಂಡಂತೆ ಕೋಲ್ಕತಾದ ಈಡನ್ ಗಾರ್ಡನ್ಸ್ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ನೆರವಾದರೂ, ಸ್ಪಿನ್ನರ್‌ಗಳು ಇಲ್ಲಿ ಉತ್ತಮ ತಿರುವನ್ನು ಪಡೆಯಬಲ್ಲರು. ಕಳೆದ ಪಂದ್ಯದಲ್ಲಿ ರವಿ ಬಿಷ್ಣೋಯ್ ಮತ್ತು ರಾಸ್ಟನ್ ಚೇಸ್ ಅತ್ಯುತ್ತಮ ಬೌಲರ್‌ಗಳಾಗಿ ಹೊರಹೊಮ್ಮಿದರು. ಇವರ ಸ್ಪಿನ್ ಮೋಡಿಯ ಎದುರು ಬ್ಯಾಟ್ಸ್‌ಮನ್‌ಗಳು ರನ್ ಹೆಕ್ಕಲು ಅಕ್ಷರಶಃ ಪರದಾಡಿದರು. ಆದರೆ, ಓಪನರ್ ರೋಹಿತ್ ಶರ್ಮಾ ಇದೇ ಪಿಚ್‌ನಲ್ಲಿ 19 ಎಸೆತಗಳಲ್ಲಿ 40 ರನ್ ಸಿಡಿಸಿದರು ಎನ್ನುವುದನ್ನು ಮರೆಯಬಾರದು. ಅಂದಹಾಗೆ ಇಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 180 ರನ್ ಗಳಿಸಿದರೆ ಗೆಲ್ಲುವ ಉತ್ತಮ ಸಾಧ್ಯತೆ ಇದೆ.
ಭಾರತದ ಟಿ20 ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್-ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್ , ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಹರ್ಷಲ್ ಪಟೇಲ್, ರುತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ಕುಲ್ದೀಪ್ ಯಾದವ್.
ವೆಸ್ಟ್ ಇಂಡೀಸ್ ಟಿ20 ತಂಡ: ಕೀರೊನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್ (ಉಪನಾಯಕ), ಫ್ಯಾಬಿಯನ್ ಅಲೆನ್, ಡ್ಯಾರೆನ್ ಬ್ರಾವೋ, ರೋಸ್ಟನ್ ಚೇಸ್, ಶೆಲ್ಡನ್ ಕಾಟ್ರೆಲ್, ಡೊಮಿನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೀಲ್ ಹೊಸೈನ್, ಬ್ರಾಂಡನ್ ಕಿಂಗ್, ರೋವ್‌ಮನ್ ಪೊವೆಲ್, ರೊಮಾರಿಯೊ ಶೆಫರ್ಡ್, ಓಡಿಯನ್ ಶೆಫರ್ಡ್, ಓಡಿಯನ್ ಕೈಲ್ ಮೇಯರ್ಸ್, ಹೇಡನ್ ವಾಲ್ಷ್ ಜೂನಿಯರ್.
Ranji Trophy: ರಣಜಿ ಟ್ರೋಫಿ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್ಗಳು ಯಾರು ಗೊತ್ತಾ?