ಹರಿಣಗಳ ನಾಡಿನಲ್ಲಿ ಈಗಾಗಲೇ ತನ್ನ ಪ್ರವಾಸವನ್ನು ಆರಂಭಿಸಿರುವ ಭಾರತ ತಂಡ ದಕ್ಷಿಣ ಆಫ್ರಿಕಾ (India vs South Africa) ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿ ಮುಗಿದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಕೂಡ ನಡೆಯಲಿದೆ. ಆದರೆ, ಈ ಏಕದಿನ ಸರಣಿಗೆ ಬಿಸಿಸಿಐ (BCCI) ಆಯ್ಕೆ ಸಮಿತಿ ಇನ್ನೂ ತಂಡವನ್ನು ಪ್ರಕಟ ಮಾಡಿಲ್ಲ. ಈ ವಾರದಲ್ಲಿ ಬಿಸಿಸಿಐ ಸಭೆ ಕರೆದು 15 ಸದಸ್ಯರ ತಂಡವನ್ನು ಹೆಸರಿಸಲಿದೆಯಂತೆ. ಆದರೆ, ಇದಕ್ಕೂ ಮುನ್ನ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಏಕದಿನ ಮತ್ತು ಟಿ20 ತಂಡಗಳ ನಾಯಕನಾಗಿ ಇತ್ತೀಚೆಗೆ ನೇಮಕವಾಗಿರುವ ರೋಹಿತ್ ಶರ್ಮಾ (Rohit Sharma) ಗಾಯಗೊಂಡಿದ್ದು, ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಇದೀಗ ಗಾಯದಿಂದ ಗುಣಮುಖರಾಗದ ಕಾರಣ 3 ಪಂದ್ಯಗಳ ಏಕದಿನ ಸರಣಿಗೂ ಅವರು ಅಲಭ್ಯವಾಗಲಿದ್ದಾರೆಂದು ಹೇಳಲಾಗಿದೆ.
ಮಂಡಿರಜ್ಜು ನೋವಿನಿಂದ ಬಳಲುತ್ತಿರುವ ರೋಹಿತ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಚಿಕಿತ್ಸೆ ಪಡೆಯುತ್ತಿದ್ದಾರೆ. ವರದಿಯಂತೆ ರೋಹಿತ್ ಏಕದಿನ ಸರಣಿಯಿಂದಲೂ ಹೊರಗುಳಿದರೆ ತಂಡದ ನಾಯಕತ್ವದ ಜವಾಬ್ದಾರಿ ಕೆಎಲ್ ರಾಹುಲ್ ವಹಿಸಿಕೊಳ್ಳಲಿದ್ದಾರೆ. ರುತುರಾಜ್ ಗಾಯಕ್ವಾಡ್, ವೆಂಕಟೇಶ್ ಅಯ್ಯರ್ ಸೇರಿದಂತೆ ಕೆಲವೊಂದು ಅಚ್ಚರಿಯ ಆಯ್ಕೆಯನ್ನು ನಿರೀಕ್ಷಿಸಲಾಗಿದೆ. ಜನವರಿ 19 ರಿಂದ 23ರವರೆಗೆ ನಡೆಯಲಿರುವ 3 ಪಂದ್ಯಗಳ ಒಡಿಐ ಸರಣಿಗೆ ಭಾರತದ 15 ಸದಸ್ಯರ ಸಂಭಾವ್ಯ ತಂಡವನ್ನು ನೋಡೋಣ.
ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಜೊತೆ ರುತುರಾಜ್ ಗಾಯಕ್ವಾಡ್ಗೆ ಸ್ಥಾನ ಖಚಿತ. ವಿರಾಟ್ ಕೊಹ್ಲಿ ಇವರ ಜೊತೆಗಿದ್ದರೆ ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ನಡುವೆ ಪೈಪೋಟಿ ಏರ್ಪಡಲಿದೆ. ಇತ್ತೀಚಿನ ದಿನಗಳಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮಿಂಚಿರುವ ಸೂರ್ಯಕುಮಾರ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ಅವರಲ್ಲಿ ಯಾರನ್ನು ಭಾರತ ತಂಡಕ್ಕೆ ಆಯ್ಕೆ ಮಾಡುವುದು ಎಂಬ ದ್ವಂದ್ವ ಆಯ್ಕೆ ಸಮಿತಿಗೆ ಕಾಡುತ್ತಿದೆ. ತಂಡದ 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದು, ನಾಲ್ಕನೇ ಕ್ರಮಾಂಕಕ್ಕೆ ಸೂರ್ಯ ಮತ್ತು ಶ್ರೇಯಸ್ ನಡುವೆ ಭಾರಿ ಪೈಪೋಟಿ ಇದೆ.
ಇದರ ಜೊತೆಗೆ ವಿಕೆಟ್ ಕೀಪರ್ಗಳಾಗಿ ರಿಷಭ್ ಪಂತ್ ಮತ್ತು ಇಶಾನ್ ಕಿಶನ್ ಕಿಶನ್ ಸ್ಥಾನ ಪಡೆಯಲಿದ್ದಾರೆ. ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆ ಮತ್ತು ಕಳಪೆ ಲಯ ಕಾರಣ ಭಾರತ ತಂಡದಿಂದ ಹೊರ ಬಿದ್ದಿದ್ದಾರೆ. ಅವರ ಸ್ಥಾನದಲ್ಲಿ ಹೊಸ ಆಲ್‌ರೌಂಡರ್ ಆಗಿ ವೆಂಕಟೇಶ್ ಅಯ್ಯರ್ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ ಅಕ್ಷರ್ ಪಟೇಲ್ ಮತ್ತು ಶಾರ್ದುಲ್ ಠಾಕೂರ್ ಸ್ಥಾನ ಪಡೆಯಬಹುದು.
4 ವರ್ಷಗಳ ಬಳಿಕ ಅಶ್ವಿನ್ ಕಮ್ಬ್ಯಾಕ್?:
4 ವರ್ಷಗಳ ಬಳಿಕ ಭಾರತ ಏಕದಿನ ತಂಡಕ್ಕೆ ತಾರಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಾಪಸಾಗುವ ನಿರೀಕ್ಷೆಯಿದೆ. 2017ರ ಬಳಿಕ ಅಶ್ವಿನ್ ಏಕದಿನ ಪಂದ್ಯವನ್ನಾಡಿಲ್ಲ. 2021ರ ಐಸಿಸಿ ಟಿ20 ವಿಶ್ವಕಪ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡುವ ಮೂಲಕ ಅಶ್ವಿನ್ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿದ್ದರು. 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಅಶ್ವಿನ್‌ಗೆ ಮಣೆಹಾಕುವ ಸಾಧ್ಯತೆಯಿದೆ.
ಜಸ್‌ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಸಾರಥ್ಯದಲ್ಲಿ ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗ ಅತ್ಯಂತ ಬಲಿಷ್ಟವಾಗಿದೆ. ಅವರೊಟ್ಟಿಗೆ ಭುವನೇಶ್ವರ್ ಕುಮಾರ್, ಶಾರ್ದುಲ್ ಠಾಕೂರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಮತ್ತು ದೀಪಕ್ ಚಹರ್ ಕೈ ಜೋಡಿಸುವ ಸಾಧ್ಯತೆ ಇದೆ. ಆರ್ ಅಶ್ವಿನ್ ಮತ್ತು ಯುಜ್ವೇಂದ್ರ ಚಹಲ್ ಸ್ಪಿನ್ನರ್‌ಗಳಾಗಿ ಆಯ್ಕೆಯಾಗಲಿದ್ದಾರೆ.
ದ. ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಸಂಭಾವ್ಯ ತಂಡ:
ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್ (ಉಪ ನಾಯಕ), ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಇಶಾನ್ ಕಿಶನ್, ವೆಂಕಟೇಶ್ ಅಯ್ಯರ್, ಶಾರ್ದುಲ್ ಠಾಕೂರ್, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಆರ್ ಅಶ್ವಿನ್, ಯುಜ್ವೇಂದ್ರ ಚಹಲ್.
Sourav Ganguly: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಕೊರೊನಾ ಪಾಸಿಟಿವ್: ಐಸೋಲೇಷನ್ ದಾದಾ
India vs South Africa: ಮೂರನೇ ದಿನಕ್ಕೂ ಇದೆಯೇ ಮಳೆಯ ಕಾಟ?: ಸೆಂಚುರಿಯನ್ ವಾತಾವರಣ ಹೇಗಿದೆ?
(Rohit Sharma misses KL Rahul Captain Here is the India probable squad for South Africa ODI series)