ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ (ODI World Cup 2023) ಗೆಲ್ಲುವಲ್ಲಿ ಎಡವಿದ ಟೀಂ ಇಂಡಿಯಾ ಇದೀಗ ಮುಂದಿನ ವರ್ಷ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ (T20 World Cup 2024) ಮೇಲೆ ಗಮನ ಕೇಂದ್ರಿಕರಿಸಿದೆ. ಇದಕ್ಕಾಗಿ ಯುವ ತಂಡವನ್ನು ಕಟ್ಟುವತ್ತ ಮೊದಲ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ನಡೆಯಲ್ಲಿರುವ ಟಿ20 ಸರಣಿಗೆ ಯುವ ಆಟಗಾರರನ್ನೇ ತಂಡದಲ್ಲಿ ಆಯ್ಕೆ ಮಾಡಿದೆ. ಇದಕ್ಕೆ ಪೂರಕವಾಗಿ ತಂಡದ ಹಿರಿಯ ಆಟಗಾರರಲ್ಲಿ ಪ್ರಮುಖರಾದ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಈ ಎರಡೂ ದೇಶಗಳ ವಿರುದ್ಧದ ಟಿ20 ಸರಣಿಯಿಂದ ಹಿಂದೆ ಸರಿದಿದ್ದಾರೆ. ಇದೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ಟೀಂ ಇಂಡಿಯಾದ ಖಾಯಂ ನಾಯಕ ರೋಹಿತ್ ಶರ್ಮಾ, ಟಿ20 ಮಾದರಿಯಿಂದ ದೂರ ಸರಿಯುವ ಚಿಂತನೆ ನಡೆಸಿರುವ ಬಗ್ಗೆ ಬಿಸಿಸಿಐಗೆ ತಿಳಿಸಿದ್ದಾರೆ ಎಂತಲೂ ವರದಿಯಾಗುತ್ತಿದೆ. ಆದರೆ ಈ ಬಗ್ಗೆ ಅಭಿಪ್ರಾಯ ಹೊರಹಾಕಿರುವ ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly), ರೋಹಿತ್ ಪರ ಬ್ಯಾಟ್ ಬೀಸಿದ್ದಾರೆ.
ವಾಸ್ತವವಾಗಿ ರೋಹಿತ್ ಶರ್ಮಾ 2022 ರ ಟಿ20 ವಿಶ್ವಕಪ್ ಮುಗಿದ ಬಳಿಕ ಯಾವುದೇ ಟಿ 20 ಅಂತರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಇದು ಮಾತ್ರವಲ್ಲ, ಮುಂದಿನ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟಿ20 ಅಂತರಾಷ್ಟ್ರೀಯ ಸರಣಿಯ ಭಾಗವೂ ಆಗಿಲ್ಲ. ರೋಹಿತ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ವೈಟ್ ಬಾಲ್ ಕ್ರಿಕೆಟ್‌ನಿಂದ ವಿರಾಮ ಕೇಳಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ. ಇದರಿಂದಾಗಿ ಇಬ್ಬರೂ ಏಕದಿನ ಮತ್ತು ಟಿ20 ಅಂತರರಾಷ್ಟ್ರೀಯ ಸರಣಿಗಳಲ್ಲಿ ಆಡುವುದಿಲ್ಲ. ಹೀಗಾಗಿ ಈ ಇಬ್ಬರು ಟಿ20 ಮಾದರಿಯಿಂದ ದೂರ ಸರಿದಿರುವುದು ಖಚಿತ ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯವಾಗಿದೆ.
Virat Kohli: ವಿರಾಟ್ ಕೊಹ್ಲಿಯ ಸಾಧನೆಯ ಪಯಣ ಇನ್ನು ಮುಗಿದಿಲ್ಲ: ಸೌರವ್ ಗಂಗೂಲಿ
ಆದರೆ ಈ ಬಗ್ಗೆ ಮಾತನಾಡಿರುವ ಸೌರವ್ ಗಂಗೂಲಿ, ‘ರೋಹಿತ್ ಶರ್ಮಾ 2024 ರಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್ವರೆಗೆ ಟೀಂ ಇಂಡಿಯಾವನ್ನು ನಾಯಕರಾಗಿ ಮುನ್ನಡೆಸುತ್ತಾರೆ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ. ಇನ್ನು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಒಪ್ಪಂದದ ವಿಸ್ತರಣೆಯ ಬಗ್ಗೆ ಮಾತನಾಡಿದ ಗಂಗೂಲಿ, ‘ಬಿಸಿಸಿಐ ರಾಹುಲ್ ದ್ರಾವಿಡ್ ಮೇಲೆ ವಿಶ್ವಾಸವನ್ನು ತೋರಿಸಿರುವುದನ್ನು ನೋಡಿ ನನಗೆ ಆಶ್ಚರ್ಯವಾಗಿಲ್ಲ. ಆದರೆ ರಾಹುಲ್ ಅವರು ಮತ್ತೆ ಮುಖ್ಯ ಕೋಚ್ ಆಗಲು ಒಪ್ಪುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಸದಾ ಕಾಡುತ್ತಿತ್ತು’ ಎಂದಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ತಂಡದಲ್ಲಿ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಸ್ಥಾನ ಪಡೆದಿಲ್ಲ. ಈ ಕುರಿತು ಮಾತನಾಡಿದ ಗಂಗೂಲಿ, ‘ರಹಾನೆ ಮತ್ತು ಪೂಜಾರ ಟೀಂ ಇಂಡಿಯಾಕ್ಕೆ ಸಾಕಷ್ಟು ಯಶಸ್ಸು ತಂದುಕೊಟ್ಟಿದ್ದಾರೆ. ಆದರೆ ಆಯ್ಕೆಗಾರರು ತಂಡದಲ್ಲಿ ಹೊಸ ಮುಖಗಳನ್ನು ನೋಡಲು ಬಯಸುತ್ತಾರೆ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ. ವಾಸ್ತವವಾಗಿ ಅಜಿಂಕ್ಯ ರಹಾನೆ ಮತ್ತು ಚಟೇಶ್ವರ ಪೂಜಾರ ಅವರನ್ನು ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ತಂಡದಲ್ಲಿ ಆಯ್ಕೆಮಾಡಲಾಗಿಲ್ಲ. ಹೀಗಾಗಿ ಈ ಇಬ್ಬರ ಟೆಸ್ಟ್ ವೃತ್ತಿಜೀವನ ಮುಗಿದಿದೆ ಎಂಬುದು ಕೆಲವರ ಅಭಿಪ್ರಾಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:05 pm, Fri, 1 December 23