Rohit Sharma: ಪಾಕಿಸ್ತಾನ್ ತಂಡಕ್ಕೆ ಹಿಟ್​ಮ್ಯಾನ್ ಭೀತಿ

| Updated By: ಝಾಹಿರ್ ಯೂಸುಫ್

Updated on: Aug 26, 2023 | 6:52 PM

India vs Pakistan: ಪಾಕಿಸ್ತಾನ್ ಬೌಲರ್​ಗಳ ಬೆಂಡೆತ್ತುವ ವಿಚಾರದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸದಾ ಮುಂದಿದ್ದರು. ಆದರೆ ರೋಹಿತ್ ಶರ್ಮಾ ಆಗಮನದ ಬಳಿಕ ಈ ವಿಚಾರದಲ್ಲಿ ಸಚಿನ್ ಒಂದೆಜ್ಜೆ ಹಿಂದುಳಿದಿದ್ದಾರೆ ಎನ್ನಬಹುದು.

Rohit Sharma: ಪಾಕಿಸ್ತಾನ್ ತಂಡಕ್ಕೆ ಹಿಟ್​ಮ್ಯಾನ್ ಭೀತಿ
Rohit Sharma
Follow us on

ಏಷ್ಯಾಕಪ್​ ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಆಗಸ್ಟ್ 30 ರಿಂದ ಶುರುವಾಗಲಿರುವ ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ (Team India) ತನ್ನ ಮೊದಲ ಪಂದ್ಯವಾಡುತ್ತಿರುವುದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ (India vs Pakistan) ವಿರುದ್ಧ ಎಂಬುದು ವಿಶೇಷ.

ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿರುವ ಪಾಕಿಸ್ತಾನ್ ವಿರುದ್ಧದ ಪಂದ್ಯದ ಮೂಲಕ ಭಾರತ ತಂಡವು ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಆದರೆ ಅತ್ತ ಟೂರ್ನಿಯ ಪೂರ್ವಭ್ಯಾಸಕ್ಕಾಗಿ ಪಾಕಿಸ್ತಾನ್ ತಂಡವು ಅಫ್ಘಾನಿಸ್ತಾನ್ ವಿರುದ್ಧ ಸರಣಿ ಆಡುತ್ತಿದೆ.

ಇತ್ತ ಟೀಮ್ ಇಂಡಿಯಾ ಆಟಗಾರರು ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಈ ಅಭ್ಯಾಸ ನಡುವೆ ರೋಹಿತ್ ಶರ್ಮಾ ಮತ್ತಷ್ಟು ಬೆವರಿಳಿಸುತ್ತಿರುವುದು ಇದೀಗ ಪಾಕಿಸ್ತಾನ್ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಇದಕ್ಕೆ ಮುಖ್ಯ ಕಾರಣ ಪಾಕ್​ ವಿರುದ್ಧ ಹಿಟ್​ಮ್ಯಾನ್ ಪ್ರದರ್ಶನ.

ಪಾಕ್​ ವಿರುದ್ಧ ರೋಹಿಟ್​ಮ್ಯಾನ್:

ಏಕದಿನ ಕ್ರಿಕೆಟ್​ನಲ್ಲಿ ಪಾಕಿಸ್ತಾನ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಲ್ಲಿ ರೋಹಿತ್ ಶರ್ಮಾ ಕೂಡ ಒಬ್ಬರು. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.

ರೋಹಿತ್ ಶರ್ಮಾ ಪಾಕಿಸ್ತಾನ್ ವಿರುದ್ಧ ಇದುವರೆಗೆ 16 ಏಕದಿನ ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಹಿಟ್​ಮ್ಯಾನ್ ಬ್ಯಾಟ್​ನಿಂದ ಹರಿದು ಬಂದಿರುವುದು ಬರೋಬ್ಬರಿ 720 ರನ್​ಗಳು. ಇದೇ ವೇಳೆ 6 ಅರ್ಧಶತಕಗಳನ್ನು ಹಾಗೂ 2 ಸೆಂಚುರಿಗಳನ್ನೂ ಸಹ ಸಿಡಿಸಿದ್ದಾರೆ.

ಸಚಿನ್​ಗಿಂತ ಮುಂದಿದ್ದಾರೆ ರೋಹಿತ್:

ಪಾಕಿಸ್ತಾನ್ ಬೌಲರ್​ಗಳ ಬೆಂಡೆತ್ತುವ ವಿಚಾರದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸದಾ ಮುಂದಿದ್ದರು. ಆದರೆ ರೋಹಿತ್ ಶರ್ಮಾ ಆಗಮನದ ಬಳಿಕ ಈ ವಿಚಾರದಲ್ಲಿ ಸಚಿನ್ ಒಂದೆಜ್ಜೆ ಹಿಂದುಳಿದಿದ್ದಾರೆ ಎನ್ನಬಹುದು.

ಏಕೆಂದರೆ ಪಾಕಿಸ್ತಾನ್ ವಿರುದ್ಧ ಒಟ್ಟು 67 ಏಕದಿನ ಇನಿಂಗ್ಸ್​ ಆಡಿರುವ ಸಚಿನ್ ತೆಂಡೂಲ್ಕರ್ ಕಲೆಹಾಕಿರುವುದು 2526 ರನ್​ಗಳು. ಅಂದರೆ ಇಲ್ಲಿ ಮಾಸ್ಟರ್​ ಬ್ಲಾಸ್ಟರ್ ಪಾಕ್ ವಿರುದ್ಧ 40.09 ಸರಾಸರಿಯಲ್ಲಿ ರನ್ ಪೇರಿಸಿದ್ದರು.

ಮತ್ತೊಂದೆಡೆ ರೋಹಿತ್ ಶರ್ಮಾ ಪಾಕಿಸ್ತಾನ್ ವಿರುದ್ಧ 16 ಪಂದ್ಯಗಳಲ್ಲಿ 811 ಎಸೆತಗಳನ್ನು ಎದುರಿಸಿ 720 ರನ್​ ಬಾರಿಸಿದ್ದಾರೆ. ಅಂದರೆ ಪಾಕ್ ವಿರುದ್ಧ ಹಿಟ್​ಮ್ಯಾನ್ 51.42 ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಇದುವೇ ಈಗ ಪಾಕ್ ಬೌಲರ್​ಗಳ ಚಿಂತೆಯನ್ನು ಹೆಚ್ಚಿಸಿದೆ.

ಪಾಕ್ ಬೌಲರ್​ಗಳ ಬೆಂಡೆತ್ತಿದ್ದ ಹಿಟ್​ಮ್ಯಾನ್:

ಪಾಕಿಸ್ತಾನ್ ವಿರುದ್ಧದ ಕೊನೆಯ ಐದು ಏಕದಿನ ಇನಿಂಗ್ಸ್​ಗಳ ಅಂಕಿ ಅಂಶಗಳನ್ನು ತೆಗೆದುಕೊಂಡರೂ ಇಲ್ಲೂ ಕೂಡ ಹಿಟ್​ಮ್ಯಾನ್ ಅಬ್ಬರ ಕಾಣಬಹುದು. ಅಂದರೆ ರೋಹಿತ್ ಶರ್ಮಾ ಪಾಕಿಸ್ತಾನ್ ವಿರುದ್ಧ ಕೊನೆಯ ಐದು ಏಕದಿನ ಪಂದ್ಯಗಳಲ್ಲಿ  ಕ್ರಮವಾಗಿ 91(119), 0(3), 52(39), 111*(119) & 140 (113) ರನ್ ಬಾರಿಸಿದ್ದರು.

ಈ ಅದ್ಭುತ ಫಾರ್ಮ್​​ ಏಷ್ಯಾಕಪ್​ನಲ್ಲೂ ಮುಂದುವರೆಯುವ ವಿಶ್ವಾಸವಿದೆ. ಅದಕ್ಕಾಗಿ ಬೇಕಾದ ಭರ್ಜರಿ ತಯಾರಿಯಲ್ಲಿದ್ದಾರೆ ಹಿಟ್​ಮ್ಯಾನ್.