
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ (Rohit Sharma) ಮೇ 7 ರಂದು ಟೆಸ್ಟ್ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡುವ ಇಂಗಿತವನ್ನು ಸಹ ವ್ಯಕ್ತಪಡಿಸಿದ್ದ ಹಿಟ್ಮ್ಯಾನ್, ಏಕಾಏಕಿ ನಿವೃತ್ತಿ ಘೋಷಿಸಲು ಕಾರಣವೇನು? ಎಂಬ ಪ್ರಶ್ನೆಯೊಂದು ಇದರ ಬೆನ್ನಲ್ಲೇ ಹುಟ್ಟಿಕೊಂಡಿತ್ತು. ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.
ರೋಹಿತ್ ಶರ್ಮಾ ದಿಢೀರ್ ನಿವೃತ್ತಿ ಘೋಷಿಸಲು ಮುಖ್ಯ ಕಾರಣ ಬಿಸಿಸಿಐ ನಡೆ. ಅಂದರೆ ಇಂಗ್ಲೆಂಡ್ ವಿರುದ್ಧದ ಸರಣಿಯೊಂದಿಗೆ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಲು ರೋಹಿತ್ ಶರ್ಮಾ ಬಯಸಿದ್ದರು. ಇದಕ್ಕಾಗಿ ಯೋಜನೆಯೊಂದನ್ನು ರೂಪಿಸಿದ್ದರು. ಆದರೆ ಹಿಟ್ಮ್ಯಾನ್ ಮನವಿಯನ್ನು ಬಿಸಿಸಿಐ ಆಯ್ಕೆ ಸಮಿತಿ ತಿರಸ್ಕರಿಸಿದೆ. ಹೀಗಾಗಿಯೇ ರೋಹಿತ್ ಶರ್ಮಾ ಸೋಷಿಯಲ್ ಮೀಡಿಯಾ ಮೂಲಕ ನಿವೃತ್ತಿಯನ್ನು ಘೋಷಿಸಿದ್ದರು.
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 2014 ರಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿ ಮೂಲಕ ನಿವೃತ್ತಿ ಘೋಷಿಸಿದ್ದರು. ಈ ಸರಣಿಯಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದ ಧೋನಿ, ಸರಣಿ ಮಧ್ಯೆ ತನ್ನ ನಿವೃತ್ತಿಯನ್ನು ಪ್ರಕಟಿಸಿದ್ದರು.
ಇದೇ ಮಾದರಿಯಲ್ಲಿ ಇಂಗ್ಲೆಂಡ್ ಸರಣಿಯ ನಡುವೆ ನಿವೃತ್ತಿ ಘೋಷಿಸುವುದಾಗಿ ರೋಹಿತ್ ಶರ್ಮಾ ಬಿಸಿಸಿಐಗೆ ತಿಳಿಸಿದ್ದಾರೆ. 5 ಪಂದ್ಯಗಳ ಟೆಸ್ಟ್ ಸರಣಿ ಮಧ್ಯೆ ಅಂತಿಮ ಪಂದ್ಯವನ್ನು ಘೋಷಿಸಲು ಹಿಟ್ಮ್ಯಾನ್ ಯೋಜನೆ ರೂಪಿಸಿದ್ದರು. ಹೀಗಾಗಿ ಇಂಗ್ಲೆಂಡ್ ವಿರುದ್ದದ ಸರಣಿಗೆ ನಾಯಕನಾಗಿ ಆಯ್ಕೆ ಮಾಡುವಂತೆ ಕೋರಿದ್ದರು.
ಆದರೆ ರೋಹಿತ್ ಶರ್ಮಾ ಅವರ ಈ ಮನವಿಯನ್ನು ಬಿಸಿಸಿಐ ಆಯ್ಕೆ ಸಮಿತಿ ತಿರಸ್ಕರಿಸಿದೆ. ಹೀಗಾಗಿ ಹಿಟ್ಮ್ಯಾನ್ ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನವೇ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ ಎಂದು ಸ್ಕೈ ಸ್ಪೋರ್ಟ್ ವರದಿ ಮಾಡಿದೆ.
ಇದಕ್ಕೂ ಮುನ್ನ ಆಸ್ಟ್ರೇಲಿಯಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲೇ ನಿವೃತ್ತಿ ಘೋಷಿಸುವಂತೆ 38 ವರ್ಷದ ರೋಹಿತ್ ಶರ್ಮಾಗೆ ಸೂಚಿಸಲಾಗಿತ್ತು. ಇದಾಗ್ಯೂ ಅವರು ನಿವೃತ್ತಿ ನೀಡಿರಲಿಲ್ಲ. ಈ ಮೊದಲೇ ಅವರಿಗೆ ಕೊನೆಯ ಸರಣಿಯ ಸೂಚನೆ ನೀಡಿದ್ದರೂ, ಅವರು ಮತ್ತೊಂದು ಅವಕಾಶವನ್ನು ಎದುರು ನೋಡಿದ್ದರು.
ಆದರೆ ಕಳಪೆ ಫಾರ್ಮ್ನಲ್ಲಿದ್ದ ರೋಹಿತ್ ಶರ್ಮಾ ಅವರನ್ನು ಮತ್ತೆ ನಾಯಕನಾಗಿ ಆಯ್ಕೆ ಮಾಡಲು ಬಿಸಿಸಿಐ ಆಯ್ಕೆ ಸಮಿತಿ ಆಸಕ್ತಿ ತೋರಿಲ್ಲ. ಅಲ್ಲದೆ ಇಂಗ್ಲೆಂಡ್ ವಿರುದ್ಧದ ಸರಣಿಯೊಂದಿಗೆ ಹೊಸ ಯುಗಕ್ಕೆ ನಾಂದಿಯಾಡಲು ಬಿಸಿಸಿಐ ಬಯಸಿದೆ. ಅದರಂತೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಹೊಸ ನಾಯಕ ಮುನ್ನಡೆಸುವುದು ಖಚಿತ.
ಇದನ್ನೂ ಓದಿ: MS Dhoni: ಭರ್ಜರಿ ಅಲ್ಲ, ಇದು ಸರ್ಜರಿ ಬ್ಯಾಟಿಂಗ್: ಧೋನಿ ಫುಲ್ ಟ್ರೋಲ್
ಪ್ರಸ್ತುತ ಮಾಹಿತಿ ಪ್ರಕಾರ, ಭಾರತ ಟೆಸ್ಟ್ ತಂಡದ ನಾಯಕರಾಗಿ ಶುಭ್ಮನ್ ಗಿಲ್ ಆಯ್ಕೆಯಾಗಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ಗಿಲ್ ಕಪ್ತಾನನಾಗಿ ಹೊಸ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ.