Rohit Sharma: ವಿಂಬಲ್ಡನ್ ಅಂಗಳದಲ್ಲಿ ರೋಹಿತ್ ಶರ್ಮಾ ಮಿಂಚಿಂಗ್
Wimbledon 2024: ವಿಂಬಲ್ಡನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪಂದ್ಯದ ವೇಳೆ ಟಿ20 ವಿಶ್ವಕಪ್ ವಿಜೇತ ತಂಡದ ನಾಯಕ ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದಾರೆ. ಲಂಡನ್ನಲ್ಲಿ ನಡೆದ ಕಾರ್ಲೋಸ್ ಅಲ್ಕರಾಝ್ ಹಾಗೂ ಡೇನಿಯಲ್ ಮೆಡ್ವೆಡೆವ್ ನಡುವಣ ಪಂದ್ಯ ವೀಕ್ಷಿಸಲು ಆಗಮಿಸಿದ ಹಿಟ್ಮ್ಯಾನ್ ಅವರನ್ನು ವಿಂಬಲ್ಡನ್ ಆಯೋಜಕರು ಭವ್ಯವಾಗಿ ಸ್ವಾಗತಿಸಿದ್ದರು.
ಲಂಡನ್ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟೆನಿಸ್ ಟೂರ್ನಿ ವಿಂಬಲ್ಡನ್ ಪಂದ್ಯದ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದಾರೆ. ಸೆಮಿಫೈನಲ್ ಪಂದ್ಯ ವೀಕ್ಷಿಸಲು ಸೆಂಟ್ರಲ್ ಕೋರ್ಟ್ಗೆ ಆಗಮಿಸಿದ ರೋಹಿತ್ ಶರ್ಮಾ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಇದೇ ವೇಳೆ ಮಾತನಾಡಿದ ರೋಹಿತ್ ಶರ್ಮಾ, ನಾನು ಇದುವರೆಗೆ ವಿಂಬಲ್ಡನ್ ವೀಕ್ಷಿಸಲು ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಈ ವೈಬ್ ಅನುಭವಿಸಲು ಉತ್ಸುಕನಾಗಿದ್ದೇನೆ ಎಂದರು. ಅಲ್ಲದೆ ಕಾರ್ಲೋಸ್ ಅಲ್ಕರಾಝ್ ಮತ್ತು ಡೇನಿಯಲ್ ಮೆಡ್ವೆಡೆವ್ ನಡುವಣ ಮೊದಲ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಿದರು.
ಇದಕ್ಕೂ ಮುನ್ನ ವಿಂಬಲ್ಡನ್ನ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಬೆನ್ ಸ್ಟೋಕ್ಸ್, ಪ್ಯಾಟ್ ಕಮ್ಮಿನ್ಸ್, ಜೋಸ್ ಬಟ್ಲರ್ ಮತ್ತು ಜೋ ರೂಟ್ ಕಾಣಿಸಿಕೊಂಡಿದ್ದರು. ಇದೀಗ ರೋಹಿತ್ ಶರ್ಮಾ ಕೂಡ ವಿಂಬಲ್ಡನ್ ಅಂಗಳದಲ್ಲಿ ಕಾಣಿಸಿಕೊಳ್ಳುವ ಮೂಲಕ ಮಿಂಚಿದ್ದಾರೆ.
ಸದ್ಯ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧದ ಸರಣಿಗೂ ಅಲಭ್ಯರಾಗಲಿದ್ದಾರೆ ಎಂದು ತಿಳಿದು ಬಂದಿದೆ. ಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯಿಂದ ವಿಶ್ರಾಂತಿ ಬಯಸಿರುವ ಹಿಟ್ಮ್ಯಾನ್ ಇದೀಗ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಇದೇ ವೇಳೆ ವಿಂಬಲ್ಡನ್ ಟೂರ್ನಿ ವೀಕ್ಷಿಸಲು ತೆರಳಿದ್ದರು.
ವಿಂಬಲ್ಡನ್ನ ಮೊದಲ ಸೆಮಿಫೈನಲ್ನಲ್ಲಿ ಡೇನಿಯಲ್ ಮೆಡ್ವೆಡೆವ್ ವಿರುದ್ಧ ಕಾರ್ಲೋಸ್ ಅಲ್ಕರಾಝ್ ಗೆಲುವು ದಾಖಲಿಸಿ ಫೈನಲ್ಗೆ ಪ್ರವೇಶಿಸಿದ್ದಾರೆ. ಹಾಗೆಯೇ ಎರಡನೇ ಸೆಮಿಫೈನಲ್ನಲ್ಲಿ ಲೊರೆಂಜೊ ಮುಸೆಟ್ಟಿ ಅವರನ್ನು ನೇರ ಸೆಟ್ಗಳಿಂದ ಮಣಿಸಿರುವ ನೊವಾಕ್ ಜೊಕೊವಿಚ್ ಅಂತಿಮ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಅದರಂತೆ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನೊವಾಕ್ ಜೊಕೊವಿಚ್ ಹಾಗೂ ಕಾರ್ಲೋಸ್ ಅಲ್ಕರಾಝ್ ಮುಖಾಮುಖಿಯಾಗಲಿದ್ದಾರೆ.