ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಫ್ಯಾನ್ಸ ಫಾಲೋಯಿಂಗ್ ಹೊಂದಿರುವ IPL ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಫ್ರಾಂಚೈಸಿಯ ಅಧಿಕೃತ ಯೂಟ್ಯೂಬ್ ಚಾನೆಲ್ (YouTube channel) ಅನ್ನು “ಮೈಕ್ರೋ ಸ್ಟ್ರಾಟಜಿ” ಎಂಬ ಕ್ರಿಪ್ಟೋಕರೆನ್ಸಿ ಕಂಪನಿ ಹ್ಯಾಕ್ ಮಾಡಿದೆ ಎಂದು ವರದಿಯಾಗಿದೆ. ಅಲ್ಲದೆ ಆರ್ಸಿಬಿ ಈ ಹಿಂದೆ ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಿದ್ದ ವಿಡಿಯೋಗಳೆಲ್ಲವನ್ನು ಡಿಲೀಟ್ ಮಾಡಲಾಗಿದೆ. ಯುನೈಟೆಡ್ ಸ್ಪಿರಿಟ್ಸ್ ಒಡೆತನದ ಆರ್ಸಿಬಿ ಫ್ರ್ಯಾಂಚೈಸ್, ಸೋಶಿಯಲ್ ಮೀಡಿಯಾಗಳಲ್ಲಿ (social media) ಸದಾ ಸಕ್ರಿಯವಾಗಿದ್ದು, ಅಭಿಮಾನಿಗಳಿಗೆ ಹಲವು ವೀಡಿಯೊಗಳ ಮೂಲಕ ಮನೋರಂಜನೆಯನ್ನು ನೀಡುವ ಕೆಲಸ ಮಾಡುತ್ತಿದೆ.
ಟ್ವಿಟರ್ ಖಾತೆಯೂ ಹ್ಯಾಕ್ ಆಗಿತ್ತು
RCB ಇಂತಹ ಸಮಸ್ಯೆಯನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ, ಏಕೆಂದರೆ ಕಳೆದ ವರ್ಷವಷ್ಟೇ ಈ ಫ್ರಾಂಚೈಸಿಯ ಟ್ವಿಟರ್ ಖಾತೆಯನ್ನು ಕೂಡ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದರು. ಬಳಿಕ ಹ್ಯಾಕ್ ಆಗಿದ್ದ ಖಾತೆಯನ್ನು ಸರಿಪಡಿಸಲು ತಾಂತ್ರಿಕ ತಂಡಕ್ಕೆ ಕೆಲವು ಗಂಟೆಗಳೇ ಬೇಕಾಯಿತು. ತನ್ನ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದ ಬಗ್ಗೆ ಮಾಹಿತಿ ನೀಡಿದ್ದ ಫ್ರಾಂಚೈಸಿ, ನಮ್ಮ ಟ್ವಿಟರ್ ಖಾತೆಯನ್ನು ಕೆಲವು ಗಂಟೆಗಳ ಹಿಂದೆ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದರು. ಆದರೆ ಈಗ ಆ ದೋಷವನ್ನು ಸರಿಪಡಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಜೊತೆಗೆ ಹ್ಯಾಕರ್‌ಗಳು ಹಾಕಿರುವ ಟ್ವೀಟ್ ಅನ್ನು ನಾವು ಖಂಡಿಸುತ್ತೇವೆ. ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ ಎಂದು ಹೇಳಿಕೊಂಡಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಆರಂಭವಾದ ವರ್ಷದಿಂದಲೂ ಐಪಿಎಲ್ನಲ್ಲಿ ಪ್ರಮುಖ ಸ್ಪರ್ಧಿಯಾಗಿ ಕಣಕ್ಕಿಳಿಯುತ್ತಿದೆ. ಅನೇಕ ಲೆಜೆಂಡರಿ ಆಟಗಾರರು ಈ ತಂಡವನ್ನು ಪ್ರತಿನಿಧಿಸಿದ್ದು, ಅಂತಹವರಲ್ಲಿ ರಾಹುಲ್ ದ್ರಾವಿಡ್, ಗೇಲ್, ಎಬಿ ಡಿ ವಿಲಿಯರ್ಸ್, ವಿರಾಟ್ ಕೊಹ್ಲಿಯಂತ ಆಟಗಾರು ಸೇರಿದ್ದಾರೆ. ಹೀಗಾಗಿ ಈ ಫ್ರಾಂಚೈಸಿಗೆ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. 2009, 2011 ಮತ್ತು 2016 ಈ ಮೂರು ಸೀಸನ್‌ಗಳಲ್ಲಿ ಆರ್ಸಿಬಿ ಫೈನಲ್ ಪ್ರವೇಶಿಸಿತ್ತಾದರೂ ಚಾಂಪಿಯನ್ ಪಟ್ಟಕ್ಕೇರಲು ಸಾಧ್ಯವಾಗಲಿಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರ್ಯಾಂಚೈಸಿ ಟ್ವಿಟರ್‌ನಲ್ಲಿ ಸುಮಾರು 4.8 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರೆ, ಇನ್‌ಸ್ಟಾಗ್ರಾಮ್‌ನಲ್ಲಿ 6.9 ಮಿಲಿಯನ್ ಮತ್ತು ಫೇಸ್‌ಬುಕ್‌ನಲ್ಲಿ 9.4 ಮಿಲಿಯನ್ ಅಭಿಮಾನಿಗಳನ್ನು ಹೊಂದಿದೆ. ಈ ಮೂಲಕ ಅತಿಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ಪ್ರಮುಖ 3 ಐಪಿಎಲ್ ತಂಡಗಳಲ್ಲಿ ಆರ್ಸಿಬಿ ಕೂಡ ಸ್ಥಾನ ಪಡೆದಿದೆ.
ಈ ಸೀಸನ್ನಲ್ಲಿ ಆರ್ಸಿಬಿ ಪ್ರದರ್ಶನ ಹೀಗಿತ್ತು
ಐಪಿಎಲ್ 15ನೇ ಸೀಸನ್ನಲ್ಲಿ ಬೆಂಗಳೂರು ತಂಡ ಲೀಗ್ ಹಂತದಲ್ಲಿ 14 ಪಂದ್ಯಗಳನ್ನಾಡಿದ್ದು ಇದಲರಲ್ಇ 8 ರಲ್ಲಿ ಗೆದ್ದು 16 ಅಂಕಗಳೊಂದಿಗೆ ಪ್ಲೇ ಆಫ್‌ಗೆ ಪ್ರವೇಶಿಸಿತ್ತು. ಬೆಂಗಳೂರು ನಾಲ್ಕನೇ ಸ್ಥಾನ ಗಳಿಸಿದ್ದರಿಂದ ಎಲಿಮಿನೇಟರ್ ಪಂದ್ಯವನ್ನು ಆಡಬೇಕಾಗಿತ್ತು. ಆ ಪಂದ್ಯದಲ್ಲಿ ಆರ್ಸಿಬಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿ, ಎರಡನೇ ಕ್ವಾಲಿಫೈಯರ್ ಹಂತಕ್ಕೆ ತಲುಪಿತ್ತು. ಆದರೆ ಇಲ್ಲಿ ಅಂತಿಮವಾಗಿ ರಾಜಸ್ಥಾನದ ವಿರುದ್ಧ ಸೋತು ಚಾಂಪಿಯನ್ ಪಟ್ಟಕ್ಕೇರುವ ಅವಕಾಶವನ್ನು ಕಳೆದುಕೊಂಡಿತ್ತು.
ಐಪಿಎಲ್ನಲ್ಲಿ ಆರ್ಸಿಬಿ ತಂಡ ಹೀಗಿದೆ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡುಪ್ಲೆಸಿಸ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್ ವುಡ್, ಶಹಬಾಜ್ ಅಹ್ಮದ್, ಅನೂಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಆಲೆನ್, ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರೆನ್‌ಡಾರ್ಫ್, ಸುಯಶ್ ಪ್ರಭುದೇಸಾಯ್, ಚಮ ಮಿಲಿಂದ್, ಅನೀಶ್ವರ್ ಗೌತಮ್, ಕರಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಡೇವಿಡ್ ವಿಲ್ಲಿ, ರಜತ್ ಪಾಟಿದಾರ್.
Published On - 9:35 pm, Fri, 12 August 22