
17ನೇ ಆವೃತ್ತಿಯ ಐಪಿಎಲ್ನಲ್ಲಿ (IPL 2024) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರದರ್ಶನ ಅಷ್ಟೇನೂ ಹೇಳಿಕೊಳ್ಳುವಂತಿಲ್ಲ. ತಂಡ ಇದುವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಆರರಲ್ಲಿ ಸೋತಿದ್ದು, ಏಕೈಕ ಗೆಲುವಿನೊಂದಿಗೆ 2 ಅಂಕಗಳೊಂದಿಗೆ ಪ್ರಸ್ತುತ 10 ತಂಡಗಳ ಪೈಕಿ ಕೊನೆಯ ಸ್ಥಾನದಲ್ಲಿದೆ. ಮುಂಬರುವ 1 ಅಥವಾ 2 ಪಂದ್ಯಗಳಲ್ಲಿ ಆರ್ಸಿಬಿಯ ಪ್ರದರ್ಶನ ಇದೇ ರೀತಿ ಮುಂದುವರಿದರೆ ಐಪಿಎಲ್ ಪ್ರಶಸ್ತಿ ಗೆಲ್ಲುವ ತಂಡದ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಲಿದೆ. ಅದಾಗ್ಯೂ ಆರ್‌ಸಿಬಿ ಕ್ರಿಕೆಟ್ ಮೈದಾನದಿಂದ ಹೊರಗೆ ಮಾಡುತ್ತಿರುವ ತನ್ನ ಉದ್ಧಾತ ಕಾರ್ಯಗಳಿಂದಾಗಿ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದೆ. ಇದೀಗ ಅಂತಹದ್ದೇ ಕೆಲಸದಿಂದಾಗಿ ಆರ್‌ಸಿಬಿ ಮತ್ತೊಮ್ಮೆ ಎಲ್ಲರ ಮನ್ನಣೆಗೆ ಪಾತ್ರವಾಗಿದೆ.
ವಾಸ್ತವವಾಗಿ ಇದೇ ಭಾನುವಾರದಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್‌ಸಿಬಿ ತನ್ನ 8ನೇ ಪಂದ್ಯವನ್ನಾಡಲಿದೆ. ಈ ಪಂದ್ಯ ಆರ್ಸಿಬಿಗೆ ತುಂಬಾ ವಿಶೇಷವಾಗಿದೆ. ಏಕೆಂದರೆ ಈ ಪಂದ್ಯದಲ್ಲಿ ಆರ್‌ಸಿಬಿ ಹಸಿರು ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಆರ್‌ಸಿಬಿ ಪ್ರತಿ ಸೀಸನ್ನ ಒಂದು ಪಂದ್ಯದಲ್ಲಿ ಹಸಿರು ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತದೆ. ಅದರಂತೆ ಈ ಬಾರಿಯೂ ಆರ್‌ಸಿಬಿ ತಮ್ಮ ಪದ್ಧತಿಯನ್ನು ಮುಂದುವರೆಸುತ್ತಿದೆ.
RCB: ಗೋ ಗ್ರೀನ್ ಅಭಿಯಾನ; ಆರ್ಸಿಬಿಯಿಂದ ಬೆಂಗಳೂರಿನ 3 ಕೆರೆಗಳಿಗೆ ಮರುಜೀವ..! ವಿಡಿಯೋ ನೋಡಿ
ಆರ್‌ಸಿಬಿ ತನ್ನ ಅಭಿಮಾನಿಗಳಲ್ಲಿ ಸ್ವಚ್ಛತೆ ಮತ್ತು ಹಸಿರು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಹಸಿರು ಜೆರ್ಸಿಯನ್ನು ಧರಿಸಿ ಒಂದು ಪಂದ್ಯವನ್ನು ಆಡುತ್ತದೆ. ಅದರಂತೆ ಕಳೆದ ಬಾರಿ ಆರ್‌ಸಿಬಿ ತನ್ನ ಈ ಅಭಿಯಾನದಡಿಯಲ್ಲಿ ಬೆಂಗಳೂರಿನ ಮೂರು ಕೆರೆಗಳನ್ನು ಪುನರುಜ್ಜೀವನಗೊಳಿಸುವುದಕ್ಕೆ ಮುಂದಾಗಿತ್ತು. ಇದೀಗ ಆರ್‌ಸಿಬಿ ತಾನು ಕೈಗೆತ್ತಿಕೊಂಡಿದ್ದ ಕೆಲಸವನ್ನು ವರ್ಷದೊಳಗೆ ಪೂರೈಸಿದ್ದು, ತನ್ನ ಸತ್ಕಾರ್ಯದ ವಿಡಿಯೋವನ್ನು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದೆ.
Last year as part of our Go Green Initiative, we had promised to rejuvenate lakes in Bengaluru and help people in the surrounding land lead a better life. With the help of our partners and the authorities, we have lived the dream. 🐟🏞️🌳
Here’s more on @bigbasket_com presents… pic.twitter.com/yZONZ8V3db
— Royal Challengers Bengaluru (@RCBTweets) April 19, 2024
ಮೇಲೆ ಹೇಳಿದಂತೆ ಆರ್‌ಸಿಬಿ ತನ್ನ ‘ಗೋ ಗ್ರೀನ್’ ಅಭಿಯಾನದಡಿಯಲ್ಲಿ ಮೂರು ಕೆರೆಗಳನ್ನು ಪುನರುಜ್ಜೀವನಗೊಳಿಸಿದೆ. ಇಂಡಿಯಾ ಕೇರ್ಸ್ ಫೌಂಡೇಶನ್ ವರದಿಯ ಪ್ರಕಾರ, ಆರ್‌ಸಿಬಿ ಕಣ್ಣೂರು ಕೆರೆಗೆ ನಾಗರಿಕ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಇಟ್ಟಗಲ್ಪುರ ಕೆರೆ ಮತ್ತು ಸಾದೇನಹಳ್ಳಿ ಕೆರೆಗಳ ಪುನಶ್ಚೇತನ ಕಾರ್ಯವನ್ನು ಪೂರ್ಣಗೊಳಿಸಿದೆ. ಆರ್‌ಸಿಬಿ ತನ್ನ ಬದ್ಧತೆಯ ಭಾಗವಾಗಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೆರೆ ಸುಧಾರಣೆ ಕಾಮಗಾರಿಯನ್ನು ಆರಂಭಿಸಿತ್ತು. ಅದರಂತೆ ಕೇವಲ ಅಂತರ್ಜಲ ಮತ್ತು ಮೇಲ್ಮೈ ನೀರಿನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದ್ದ ಈ ಮೂರು ಕೆರೆಗಳನ್ನು ಅಭಿವೃದ್ಧಿಪಡಿಸಿದೆ.
ವರದಿ ಪ್ರಕಾರ ಇಟ್ಟಗಲ್ಪುರ ಕೆರೆ ಮತ್ತು ಸಾದೇನಹಳ್ಳಿ ಕೆರೆಯಲ್ಲಿ 1.20 ಲಕ್ಷ ಟನ್‌ಗೂ ಹೆಚ್ಚು ಹೂಳು ಮತ್ತು ಮರಳನ್ನು ತೆಗೆಯಲಾಗಿದೆ. ಈ ಮಣ್ಣನ್ನು ಕೆರೆಗಳ ಸುತ್ತ ದಾರಿ ನಿರ್ಮಿಸಲು ಬಳಸಲಾಗಿದ್ದು, 52 ರೈತರು ತಮ್ಮ ಹೊಲಗಳಿಗೂ ಈ ಮಣ್ಣನ್ನು ಬಳಸಿಕೊಂಡಿದ್ದಾರೆ. ಇದರಿಂದಾಗಿ ಈ ಕೆರೆಗಳ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ 17 ಎಕರೆಗಳಷ್ಟು ಹೆಚ್ಚಾಗಿದೆ. ಜೀವವೈವಿಧ್ಯವನ್ನು ಸುಧಾರಿಸುವ ಉದ್ದೇಶದಿಂದ ಕಣ್ಣೂರು ಕೆರೆಯ ಸುತ್ತಲೂ ಔಷಧೀಯ ಸಸ್ಯಗಳ ಉದ್ಯಾನವನ, ಬಿದಿರಿನ ಉದ್ಯಾನವನ ಮತ್ತು ಚಿಟ್ಟೆ ಪಾರ್ಕ್‌ಗಳನ್ನು ನಿರ್ಮಿಸಲಾಗಿದೆ. ಆರ್ಸಿಬಿಯ ಈ ಕೆಲಸಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಒಮ್ಮೆಯೂ ಐಪಿಎಲ್ ಪ್ರಶಸ್ತಿ ಗೆಲ್ಲದಿದ್ದರೂ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾಧಿಸಿರುವ ಆರ್‌ಸಿಬಿ, ಈ ರೀತಿಯ ಸತ್ಕಾರ್ಯಗಳಿಂದಲೇ ಅಭಿಮಾನಿಗಳ ಮನದಲ್ಲಿ ಭದ್ರವಾಗಿ ನೆಲೆಯೂರಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:34 pm, Fri, 19 April 24