
ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಸ್. ಮೇಘನಾ ತಮ್ಮ 30ನೇ ವಯಸ್ಸಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಟಾಪ್ ಆರ್ಡರ್ ಬ್ಯಾಟರ್ ಆಗಿದ್ದ ಮೇಘನಾ, 2022ರ ಅಕ್ಟೋಬರ್‌ನಲ್ಲಿ ಭಾರತ ತಂಡದ ಪರ ಕೊನೆಯ ಪಂದ್ಯವನ್ನಾಡಿದ್ದರು. ಬಳಿಕ 2025ರ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಆಡಿದ್ದ ಅವರು, ಇದೀಗ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಆಟಗಾರ್ತಿಯಾಗಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿರುವ ಈ ಸಂದರ್ಭದಲ್ಲಿ ನನ್ನ ಮನಸ್ಸು ಕೃತಜ್ಞತೆಯಿಂದ ತುಂಬಿದೆ. ಕ್ರಿಕೆಟ್ ಮೈದಾನ ನನಗೆ ಎರಡನೇ ಮನೆಯಂತಿತ್ತು. ಅದು ನನಗೆ ಕಷ್ಟಗಳನ್ನು ಎದುರಿಸುವ ಶಕ್ತಿ, ವಿನಯವನ್ನು ಕಲಿಸಿತು. ಜೀವನಪೂರ್ತಿ ನೆನಪಿನಲ್ಲಿ ಉಳಿಯುವ ಅನೇಕ ಕ್ಷಣಗಳು ಮತ್ತು ಸ್ನೇಹಗಳನ್ನು ಕೊಟ್ಟಿದೆ ಎಂದು ಮೇಘನಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಆಂಧ್ರ ಪ್ರದೇಶದ ಆಟಗಾರ್ತಿಯಾಗಿರುವ ಮೇಘನಾ, 2016ರ ನವೆಂಬರ್‌ನಲ್ಲಿ ವಿಜಯವಾಡದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ತಮ್ಮ ಮೊದಲ ಪಂದ್ಯದಲ್ಲಿ 16 ಎಸೆತಗಳಲ್ಲಿ 17 ರನ್ ಗಳಿಸಿದ್ದರು. ಆದರೆ, ಆ ಪಂದ್ಯದಲ್ಲಿ ಭಾರತ 31 ರನ್‌ಗಳಿಂದ ಸೋಲು ಕಂಡಿತ್ತು.
ಏಕದಿನ ಕ್ರಿಕೆಟ್‌ಗೆ ಅವರು ಪಾದಾರ್ಪಣೆ ಮಾಡಿದ್ದು 2022ರ ಫೆಬ್ರವರಿಯಲ್ಲಿ. ನ್ಯೂಜಿಲೆಂಡ್‌ನ ಕ್ವೀನ್ಸ್‌ಟೌನ್‌ನಲ್ಲಿ ನಡೆದ ಪಂದ್ಯದಲ್ಲಿ 14 ಎಸೆತಗಳನ್ನು ಎದುರಿಸಿ ಕೇವಲ 4 ರನ್ ಗಳಿಸಿದ್ದರು. ಆದರೆ, ಅದೇ ಸರಣಿಯ ಮುಂದಿನ ಎರಡು ಪಂದ್ಯಗಳಲ್ಲಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಎರಡನೇ ಪಂದ್ಯದಲ್ಲಿ 50 ಎಸೆತಗಳಲ್ಲಿ 49 ರನ್ ಗಳಿಸಿದರೆ, ಮೂರನೇ ಪಂದ್ಯದಲ್ಲಿ 41 ಎಸೆತಗಳಲ್ಲಿ 61 ರನ್ ಸಿಡಿಸಿ ಮಿಂಚಿದ್ದರು. ಆದರೆ, ನ್ಯೂಜಿಲೆಂಡ್ ಪ್ರವಾಸದಲ್ಲಿ ಆಡಿದ ಆ ಮೂರು ಪಂದ್ಯಗಳೇ ಅವರ ಏಕದಿನ ವೃತ್ತಿಜೀವನದ ಏಕೈಕ ಪಂದ್ಯಗಳಾದವು. ಏಕದಿನ ಕ್ರಿಕೆಟ್‌ನಲ್ಲಿ ಅವರು ಒಟ್ಟು 114 ರನ್ ಗಳಿಸಿದ್ದಾರೆ. ಭಾರತದ ಪರ 17 ಟಿ20 ಪಂದ್ಯಗಳನ್ನಾಡಿರುವ ಮೇಘನಾ, 102.78ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 258 ರನ್ ಗಳಿಸಿದ್ದಾರೆ. ಈ ಪೈಕಿ ಒಂದು ಅರ್ಧಶತಕವೂ ಸೇರಿದೆ.
ನನ್ನ ಕ್ರಿಕೆಟ್ ಆಟದ ದಿನಗಳು ಮುಗಿದರೂ ಕ್ರಿಕೆಟ್‌ನೊಂದಿಗಿನ ನನ್ನ ಸಂಬಂಧ ಎಂದಿಗೂ ಕೊನೆಗೊಳ್ಳುವುದಿಲ್ಲ. ನಾನು ಸದಾ ಈ ಆಟದೊಂದಿಗೆ ನಿಕಟ ಸಂಬಂಧ ಹೊಂದಿರುತ್ತೇನೆ. ಮುಂದಿನ ಪೀಳಿಗೆಯ ಆಟಗಾರರಿಗೆ ಮಾರ್ಗದರ್ಶನ ನೀಡುವುದು, ಕ್ರಿಕೆಟ್‌ಗೆ ನನ್ನಿಂದ ಸಾಧ್ಯವಾದ ಕೊಡುಗೆ ನೀಡುವುದು ಮತ್ತು ನನಗೆ ಎಲ್ಲವನ್ನೂ ಕೊಟ್ಟ ಈ ಕ್ರೀಡೆಗಾಗಿ ಕೆಲಸ ಮಾಡುವುದು ನನ್ನ ಉದ್ದೇಶವಾಗಿದೆ ಎಂದು ಮೇಘನಾ ತಮ್ಮ ನಿವೃತ್ತಿ ಸಂದೇಶದಲ್ಲಿ ತಿಳಿಸಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲೂ ಮೇಘನಾ ಮೂರು ಆವೃತ್ತಿಗಳಲ್ಲಿ ಆಡಿದ್ದಾರೆ. ಆರಂಭದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದ ಅವರು, ನಂತರ ಎರಡು ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದರು. 2024ರಲ್ಲಿ ಆರ್‌ಸಿಬಿ ಚೊಚ್ಚಲ ಬಾರಿಗೆ ಡಬ್ಲ್ಯುಪಿಎಲ್ ಪ್ರಶಸ್ತಿ ಗೆದ್ದಾಗ, ಆ ತಂಡದ ಭಾಗವಾಗಿದ್ದರು. ಇದೀಗ ಅಂತರರಾಷ್ಟ್ರೀಯ ಹಾಗೂ ಲೀಗ್ ಕ್ರಿಕೆಟ್‌ನಲ್ಲಿ ಆಡಿದ ಅನುಭವದೊಂದಿಗೆ ಮೇಘನಾ ತಮ್ಮ ಆಟಗಾರ್ತಿಯ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.