T20 World Cup 2024: ಟಿ20 ವಿಶ್ವಕಪ್ನಲ್ಲಿನ ಇಂಗ್ಲೆಂಡ್ ತಂಡದ ಗೆಲುವಿನ ಓಟಕ್ಕೆ ಸೌತ್ ಆಫ್ರಿಕಾ ಬ್ರೇಕ್ ಹಾಕಿದೆ. ಸೇಂಟ್ ಲೂಸಿಯಾದಲ್ಲಿ ನಡೆದ ಸೂಪರ್-8 ಸುತ್ತಿನ ತನ್ನ 2ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಪರ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ 38 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 65 ರನ್ ಬಾರಿಸಿದ್ದರು. ಈ ಅರ್ಧಶತಕದ ನೆರವಿನಿಂದ ಸೌತ್ ಆಫ್ರಿಕಾ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 163 ರನ್ ಕಲೆಹಾಕಿತು.
ಈ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು 61 ರನ್ ಕಲೆಹಾಕುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಹ್ಯಾರಿ ಬ್ರೂಕ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಅರ್ಧಶತಕದ ಜೊತೆಯಾಟವಾಡಿದರು.
ಪರಿಣಾಮ ಕೊನೆಯ ಓವರ್ನಲ್ಲಿ ಇಂಗ್ಲೆಂಡ್ ತಂಡದ ಗೆಲುವಿಗೆ ಕೇವಲ 14 ರನ್ಗಳ ಅವಶ್ಯಕತೆಯಿತ್ತು. ಆದರೆ ಈ ವೇಳೆ ಐಡೆನ್ ಮಾರ್ಕ್ರಾಮ್ ಹಿಡಿದ ಅಧ್ಭುತ ಕ್ಯಾಚ್ ಇಡೀ ಪಂದ್ಯದ ಚಿತ್ರಣ ಬದಲಾಯಿತು.
ಅನ್ರಿಕ್ ನೋಕಿಯಾ ಎಸೆದ 20 ಓವರ್ನ ಮೊದಲ ಎಸೆತದಲ್ಲಿ ಹ್ಯಾರಿ ಬ್ರೂಕ್ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಲು ಯತ್ನಿಸಿದ್ದರು. ಚೆಂಡು ಗಾಳಿಯಲ್ಲಿರುವುದನ್ನು ಗಮನಿಸಿದ ಐಡೆನ್ ಮಾರ್ಕ್ರಾಮ್ ಮಿಡ್ ಆಫ್ನಿಂದ ಹಿಮ್ಮುಖವಾಗಿ ಓಡಿ ಹೋಗಿ ಅದ್ಭುತವಾಗಿ ಡೈವಿಂಗ್ ಕ್ಯಾಚ್ ಹಿಡಿದರು.
ಈ ಅತ್ಯುತ್ತಮ ಕ್ಯಾಚ್ನಿಂದಾಗಿ 37 ಎಸೆತಗಳಲ್ಲಿ 53 ರನ್ ಬಾರಿಸಿದ ಹ್ಯಾರಿ ಬ್ರೂಕ್ ಔಟಾದರು. ಅದರಲ್ಲೂ ಕೊನೆಯ ಓವರ್ನಲ್ಲಿ ಸಿಕ್ಕ ಈ ಅಮೂಲ್ಯ ಯಶಸ್ಸಿನಿಂದಾಗಿ ಸೌತ್ ಆಫ್ರಿಕಾ ತಂಡವು ಇಂಗ್ಲೆಂಡ್ ಬ್ಯಾಟರ್ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.
ಪರಿಣಾಮ ಕೊನೆಯ ಓವರ್ನಲ್ಲಿ ಇಂಗ್ಲೆಂಡ್ ತಂಡವು ಕೇವಲ 6 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಸೌತ್ ಆಫ್ರಿಕಾ ತಂಡವು 7 ರನ್ಗಳ ರೋಚಕ ಜಯ ಸಾಧಿಸಿದೆ.
ಇದನ್ನೂ ಓದಿ: Lockie Ferguson: ಟಿ20 ವಿಶ್ವಕಪ್ನಲ್ಲಿ ವಿಶ್ವ ದಾಖಲೆ ಬರೆದ ಲಾಕಿ ಫರ್ಗುಸನ್
ಈ ಗೆಲುವಿನೊಂದಿಗೆ ಸೌತ್ ಆಫ್ರಿಕಾ ತಂಡವು ಗ್ರೂಪ್-2 ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಈ ಮೂಲಕ ಸೆಮಿಫೈನಲ್ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿದೆ.