ಹೆಲ್ಮೆಟ್‌ ಮೇಲೆ ತ್ರಿವರ್ಣ; ನಾನಾಡುವುದು ದೇಶಕ್ಕಾಗಿ, ಮಂಡಳಿಗಾಗಿ ಅಲ್ಲ ಎಂದಿದ್ದ ಕ್ರಿಕೆಟ್ ದೇವರು

Sachin Tendulkar: ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ಜೀವನವು ಅನೇಕ ಮೊದಲುಗಳಿಗೆ ಸಾಕ್ಷಿಯಾಗಿದೆ. ತಮ್ಮ ಹೆಲ್ಮೆಟ್ ಮೇಲೆ ತ್ರಿವರ್ಣ ಧ್ವಜ ಹಚ್ಚಿಕೊಂಡು ದೇಶಭಕ್ತಿಯನ್ನು ಪ್ರದರ್ಶಿಸಿದ್ದು, ಬ್ರಾಂಡ್‌ಗಳ ಜಾಹೀರಾತಿಗೆ ನಿರಾಕರಿಸಿದ್ದು, ಮತ್ತು ಅವರ ಆಟದ ಮೂಲಕ ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆ ಅವರನ್ನು ಅಜರಾಮರವಾಗಿಸಿದೆ. ಇಂದಿಗೂ ಅವರ ಸಾಧನೆಗಳು ಸ್ಫೂರ್ತಿಯಾಗಿದೆ.

ಹೆಲ್ಮೆಟ್‌ ಮೇಲೆ ತ್ರಿವರ್ಣ; ನಾನಾಡುವುದು ದೇಶಕ್ಕಾಗಿ, ಮಂಡಳಿಗಾಗಿ ಅಲ್ಲ ಎಂದಿದ್ದ ಕ್ರಿಕೆಟ್ ದೇವರು
Sachin Tendulkar

Updated on: Aug 15, 2025 | 6:02 PM

ವಿಶ್ವ ಕ್ರಿಕೆಟ್​ನಲ್ಲಿ ಹಲವು ಮೊದಲುಗಳಿಗೆ ಮುನ್ನುಡಿ ಬರೆದಿದ್ದ ಸವ್ಯಸಾಚಿ ಸಚಿನ್ ತೆಂಡೂಲ್ಕರ್ (Sachin Tendulkar) ಬರೆಯದ ದಾಖಲೆಯಗಳಿಲ್ಲ, ಮುರಿಯದ ದಾಖಲೆಯಗಳಿಲ್ಲ. ತನ್ನ ಆಟದ ಮೂಲಕವೇ ಭಾರತದ ಕ್ರಿಕೆಟ್​ ಅನ್ನು ಉತ್ತುಂಗಕ್ಕೇರಿಸಿದ ಕ್ರಿಕೆಟ್ ದೇವರು ಈ ಆಟಕ್ಕೆ ವಿದಾಯ ಹೇಳಿ ಹಲವು ವರ್ಷಗಳೇ ಕಳೆದಿವೆ. ಆದಾಗ್ಯೂ ಸಚಿನ್ ತಮ್ಮ ಆಟದಿಂದ ಈಗಲೂ ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿದ್ದಾರೆ. ಮೇಲೆ ಹೇಳಿದಂತೆ ಕ್ರಿಕೆಟ್​ನಲ್ಲಿ ಹಲವು ಮೊದಲುಗಳಿಗೆ ಸಾಕ್ಷಿಯಾಗಿದ್ದ ಸಚಿನ್, ಇಂದಿಗೆ 33 ವರ್ಷಗಳ ಹಿಂದೆ ಆರಂಭಿಸಿದ ಸಂಪ್ರದಾಯವೊಂದು ಇಂದಿಗೂ ಟೀಂ ಇಂಡಿಯಾದಲ್ಲಿ ಈಗಲೂ ಮುಂದುವರೆದಿದೆ.

ಹೆಲ್ಮೆಟ್ ಮೇಲೆ ತ್ರಿವರ್ಣ ಧ್ವಜ

ವಾಸ್ತವವಾಗಿ 1992 ರಲ್ಲಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತ್ರಿವರ್ಣ ಧ್ವಜವಿರುವ ಹೆಲ್ಮೆಟ್ ಧರಿಸಿ ಆಡಲು ಪ್ರಾರಂಭಿಸಿದರು. ಈ ಬಗ್ಗೆ ಅವರನ್ನು ಕೇಳಿದಾಗ, ನಾನು ಯಾವುದೇ ಬೋರ್ಡ್‌ಗಾಗಿ ಆಡುವುದಿಲ್ಲ, ಬದಲಿಗೆ ದೇಶಕ್ಕಾಗಿ ಆಡುತ್ತಿದ್ದೇನೆ. ಅದಕ್ಕಾಗಿಯೇ ನಾನು ನನ್ನ ಹೆಲ್ಮೆಟ್ ಮೇಲೆ ತ್ರಿವರ್ಣ ಧ್ವಜವನ್ನು ಇರಿಸಿದ್ದೇನೆ ಎಂದಿದ್ದರು. ಸಚಿನ್ ತೆಂಡೂಲ್ಕರ್ ಮೊದಲಿಗೆ ಪ್ರಾರಂಭಿಸಿದ ಈ ಸಂಪ್ರದಾಯ ಇಂದಿಗೂ ಮುಂದುವರೆದಿದೆ.

ಇದಲ್ಲದೆ, 1996 ರ ವಿಶ್ವಕಪ್‌ನಲ್ಲಿ, ಸಚಿನ್ ತೆಂಡೂಲ್ಕರ್ ತಮ್ಮ ಬ್ಯಾಟ್‌ನ ಮೇಲೆ ಯಾವುದೇ ಕಂಪನಿಯ ಸ್ಟಿಕ್ಕರ್ ಅನ್ನು ಹಾಕಿಕೊಳ್ಳದೆ ಇಡೀ ಟೂರ್ನಿಯನ್ನು ಆಡಿದ್ದರು. ಏಕೆಂದರೆ ಮೊದಲ ಎರಡು ಪಂದ್ಯಗಳಲ್ಲಿ ಅವರು ಸ್ಟಿಕ್ಕರ್‌ ಇಲ್ಲದ ಬ್ಯಾಟ್‌ನೊಂದಿಗೆ ಆಡುವ ಮೂಲಕ ಬಹಳಷ್ಟು ರನ್‌ ಗಳಿಸಿದ್ದರು. ಹೀಗಾಗಿ ಸಚಿನ್​ಗೆ, ವಿವಿಧ ಕಂಪನಿಗಳು ಅವರ ಬ್ಯಾಟ್ ಮೇಲೆ ಆ ಕಂಪನಿಯ ಲೋಗೋ ಹಾಕಿಕೊಂಡರೆ ಸಾಕಷ್ಟು ಹಣ ನೀಡಲು ಮುಂದಾದವು. ಆದರೆ ಸಚಿನ್ ಮಾತ್ರ ಅದೆಲ್ಲವನ್ನು ನಿರಾಕರಿಸಿ ಇಡೀ ವಿಶ್ವಕಪ್‌ ಅನ್ನು ಅವರ ಲಕ್ಕಿ ಬ್ಯಾಟ್‌ನೊಂದಿಗೆ ಆಡಿದ್ದರು. ಅಲ್ಲದೆ ಆ ವಿಶ್ವಕಪ್‌ನಲ್ಲಿ ಸಚಿನ್ ಅತಿ ಹೆಚ್ಚು ರನ್ ಕೂಡ ಕಲೆಹಾಕಿದ್ದರು.

ಮದ್ಯದ ಜಾಹೀರಾತು ನಿರಾಕರಣೆ

ಇದು ಮಾತ್ರವಲ್ಲದೆ 2010 ರಲ್ಲಿ, ಸಚಿನ್ ತೆಂಡೂಲ್ಕರ್ ವಿಜಯ್ ಮಲ್ಯ ಅವರ ಕಂಪನಿಗೆ ಜಾಹೀರಾತು ನೀಡಲು ನಿರಾಕರಿಸಿದ್ದರು. ವಿಜಯ್ ಮಲ್ಯ ಅವರ ಕಂಪನಿಯು ಜಾಹೀರಾತಿನಲ್ಲಿ ನಟಿಸಲು ಸಚಿನ್ ಅವರಿಗೆ 20 ಕೋಟಿ ರೂ. ಆಫರ್ ನೀಡಿತ್ತು. ಆದರೆ ಸಚಿನ್ ಮದ್ಯ ಮತ್ತು ತಂಬಾಕಿನ ಜಾಹೀರಾತುಗಳನ್ನು ನಾನು ಮಾಡುವುದಿಲ್ಲ ಎಂದುಬಿಟ್ಟರು. ಅಲ್ಲದೆ ನಾನು ಎಂದಿಗೂ ಸಮಾಜಕ್ಕೆ ಕೆಟ್ಟ ಉದಾಹರಣೆಯಾಗುವುದಿಲ್ಲ ಎಂದಿದ್ದರು. ಹಾಗೆಯೇ ಸಚಿನ್ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ವೃತ್ತಿಜೀವನದ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದಾಗ ಅವರ ಬ್ಯಾಟ್ ಹಿಡಿ ತ್ರಿವರ್ಣ ಧ್ವಜದ ಬಣ್ಣದಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:58 pm, Fri, 15 August 25