ಮುಂಬೈ ಬೀದಿಯಲ್ಲಿ ಸಚಿನ್ ಜೊತೆ ಗಲ್ಲಿ ಕ್ರಿಕೆಟ್ ಆಡಿದ ಬ್ರಿಟನ್ ರಾಜಕುಮಾರ ವಿಲಿಯಂ, ಕೇಟ್; ವಿಡಿಯೋ

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಬ್ರಿಟನ್ ರಾಜಕುಮಾರ ವಿಲಿಯಂ ಮತ್ತು ರಾಜಕುಮಾರಿ ಕೇಟ್ ಮಿಡಲ್ಟನ್ ಮುಂಬೈನ ಗಲ್ಲಿಗಳಲ್ಲಿ ಕ್ರಿಕೆಟ್ ಆಡಿದ್ದಾರೆ. ಭಾರತ ಪ್ರವಾಸದಲ್ಲಿರುವ ರಾಜಮನೆತನದ ಈ ಜೋಡಿಯು ಸಚಿನ್ ಜೊತೆ ಸ್ಥಳೀಯ ಸಂಸ್ಕೃತಿ ಅನುಭವಿಸಿ ಗಮನ ಸೆಳೆದಿದೆ. ವಿಲಿಯಂ ಕ್ಲೀನ್ ಬೌಲ್ಡ್ ಆಗಿದ್ದು, ಕೇಟ್ ಬ್ಯಾಟಿಂಗ್ ಮಾಡಿದ್ದು ವಿಶೇಷವಾಗಿತ್ತು. ಅವರ ಭಾರತ ಪ್ರವಾಸದ ಪ್ರಮುಖ ಘಟನೆಗಳಲ್ಲಿ ಇದೂ ಒಂದು.

ಮುಂಬೈ ಬೀದಿಯಲ್ಲಿ ಸಚಿನ್ ಜೊತೆ ಗಲ್ಲಿ ಕ್ರಿಕೆಟ್ ಆಡಿದ ಬ್ರಿಟನ್ ರಾಜಕುಮಾರ ವಿಲಿಯಂ, ಕೇಟ್; ವಿಡಿಯೋ
ಸಚಿನ್, ಬ್ರಿಟನ್ ರಾಜಕುಮಾರ ವಿಲಿಯಂ, ಕೇಟ್

Updated on: Nov 16, 2026 | 4:30 PM

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಸಿಡಿಸಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಇದೀಗ ಮುಂಬೈನ ಬೀದಿಗಳಲ್ಲಿ ಗಲ್ಲಿ ಕ್ರಿಕೆಟ್ ಆಡುತ್ತಿರುವ ದೃಶ್ಯಗಳು ಗಮನ ಸೆಳೆದಿವೆ. ಅಚ್ಚರಿಯಾಗಬೇಡಿ, ಇದು ಸಾಮಾನ್ಯ ಕ್ರಿಕೆಟ್ ಪಂದ್ಯವಲ್ಲ. ಬ್ರಿಟನ್ ರಾಜಕುಮಾರ ವಿಲಿಯಂ ಮತ್ತು ರಾಜಕುಮಾರಿ ಕೇಟ್ ಮಿಡಲ್ಟನ್ ಕೂಡ ಸಚಿನ್ ಜೊತೆ ಈ ಗಲ್ಲಿ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದ್ದರು. ಈ ವೇಳೆ ಸಚಿನ್ ತಮ್ಮ ಎಂದಿನ ಶೈಲಿಯಲ್ಲಿ ಅದ್ಭುತ ಹೊಡೆತಗಳನ್ನು ಬಾರಿಸಿ ಗಮನ ಸೆಳೆದರು. ಮತ್ತೊಂದೆಡೆ, ಸ್ಥಳೀಯ ಬಾಲಕಿಯೊಬ್ಬಳು ಎಸೆದ ಚೆಂಡಿಗೆ ರಾಜಕುಮಾರ ವಿಲಿಯಂ ಕ್ಲೀನ್ ಬೌಲ್ಡ್ ಆದರು. ರಾಜಕುಮಾರಿ ಕೇಟ್ ಕೂಡ ಬ್ಯಾಟಿಂಗ್ ಮಾಡಿ ಕ್ರಿಕೆಟ್ ಆಟದ ಸಂಭ್ರಮದಲ್ಲಿ ಪಾಲ್ಗೊಂಡರು.

ಭಾರತ ಪ್ರವಾಸದಲ್ಲಿರುವ ವಿಲಿಯಂ ಮತ್ತು ಕೇಟ್

ಬ್ರಿಟನ್ ರಾಜಕುಮಾರ ವಿಲಿಯಂ ಮತ್ತು ರಾಜಕುಮಾರಿ ಕೇಟ್ ಸದ್ಯ ಮೂರು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಸೋಮವಾರ ಮುಂಬೈಗೆ ಆಗಮಿಸಿದ ಈ ರಾಜಮನೆತನದ ಜೋಡಿ, ನಗರದ ಬೀದಿಗಳಲ್ಲಿ ಸುತ್ತಾಡಿ ಸ್ಥಳೀಯ ಸಂಸ್ಕೃತಿ, ಆಹಾರ ಮತ್ತು ಜನಜೀವನದ ಅನುಭವ ಪಡೆದುಕೊಂಡಿತು. ಈ ಸಂದರ್ಭದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ಅವರ ಜೊತೆಗಿದ್ದರು. ಮೂವರೂ ಮುಂಬೈನ ಬೀದಿಗಳಲ್ಲಿ ಸುತ್ತಾಡುತ್ತಾ ಸ್ಥಳೀಯ ಆಹಾರವನ್ನು ಸವಿದರು. ಭಾರತದ ಅತ್ಯಂತ ಹಳೆಯ ಛಾಯಾಗ್ರಹಣ ಸ್ಟುಡಿಯೋಗಳಲ್ಲಿ ಒಂದಾದ ಹ್ಯಾಮಿಲ್ಟನ್ ಸ್ಟುಡಿಯೋ ಹೊರಭಾಗದಲ್ಲೂ ಕಾಣಿಸಿಕೊಂಡರು. ಬ್ರಿಟನ್‌ನ ಭವಿಷ್ಯದ ರಾಜ ಮತ್ತು ರಾಣಿಯಾಗಲಿರುವ ವಿಲಿಯಂ ಹಾಗೂ ಕೇಟ್ ಅವರಿಗೆ ಭಾರತದ ಕ್ರೀಡಾ ಲೋಕದ ಹೆಮ್ಮೆಯ ತಾರೆ ಸಚಿನ್ ಸಾಥ್ ನೀಡಿದ್ದು ವಿಶೇಷವಾಗಿತ್ತು.

Loading...

ಕ್ರಿಕೆಟ್ ಜೊತೆ ರಾಜಮನೆತನದ ಹಳೆಯ ನಂಟು

ಮುಂಬೈನ ಬಲ್ಲಾರ್ಡ್ ಎಸ್ಟೇಟ್ ಪ್ರದೇಶದಲ್ಲಿ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಈ ವಿಶೇಷ ಭೇಟಿಯ ಕಾರ್ಯಕ್ರಮ ನಡೆಯಿತು. ಸಾಮಾನ್ಯವಾಗಿ ಪ್ರವಾಸಿಗರ ಗಮನಕ್ಕೆ ಬಾರದ ಮುಂಬೈನ ಹಲವು ವಿಶೇಷ ಸ್ಥಳಗಳನ್ನು ಸಚಿನ್ ಅವರಿಗೆ ಪರಿಚಯಿಸಿದರು. ರಾಜಮನೆತನದ ಈ ಜೋಡಿಗೆ ಮುಂಬೈ ಮತ್ತು ಕ್ರಿಕೆಟ್ ನಡುವಿನ ನಂಟು ಹೊಸದೇನಲ್ಲ. 2016ರ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ಭಾರತಕ್ಕೆ ಅಧಿಕೃತ ಪ್ರವಾಸ ಕೈಗೊಂಡಿದ್ದ ವಿಲಿಯಂ ಮತ್ತು ಕೇಟ್, ಸ್ಥಳೀಯ ಮಕ್ಕಳೊಂದಿಗೆ ಬೀದಿ ಕ್ರಿಕೆಟ್ ಆಡಿದ್ದರು. ಇದೀಗ ಸುಮಾರು ಒಂದು ದಶಕದ ಬಳಿಕ ಮತ್ತೊಮ್ಮೆ ಮುಂಬೈನಲ್ಲಿ ಕ್ರಿಕೆಟ್ ಆಟದ ಮೂಲಕ ಗಮನ ಸೆಳೆದಿದ್ದಾರೆ. ಈ ಬಾರಿ ಅವರ ಜೊತೆ ಸ್ವತಃ ಸಚಿನ್ ತೆಂಡೂಲ್ಕರ್ ಕೂಡ ಇದ್ದರು.

ಹಲವು ಕಾರ್ಯಕ್ರಮಗಳಲ್ಲಿ ಭಾಗಿ

ವಿಲಿಯಂ ಮತ್ತು ಕೇಟ್ ಅವರ ಮುಂಬೈ ಪ್ರವಾಸ ಕೇವಲ ಕ್ರಿಕೆಟ್‌ಗೆ ಸೀಮಿತವಾಗಿಲ್ಲ. ಈ ರಾಜಮನೆತನದ ಜೋಡಿ ಮುಂಬೈ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವುದರ ಜೊತೆಗೆ ಬಾಲಿವುಡ್ ತಾರೆಯರನ್ನೂ ಭೇಟಿಯಾಗಲಿದ್ದಾರೆ. ಮಂಗಳವಾರ ನಡೆಯಲಿರುವ ಅರ್ಥ್‌ಶಾಟ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ಭಾಗವಹಿಸಲಿದ್ದಾರೆ. ಪರಿಸರ ಸಂರಕ್ಷಣೆ ಮತ್ತು ಭೂಮಿಯ ಮುಂದಿರುವ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ರಾಜಕುಮಾರ ವಿಲಿಯಂ 2020ರಲ್ಲಿ ಈ ಯೋಜನೆಯನ್ನು ಆರಂಭಿಸಿದ್ದರು.

ಈ ವರ್ಷದ ಸಮಾರಂಭ ಈವರೆಗಿನ ಅತಿದೊಡ್ಡ ಕಾರ್ಯಕ್ರಮವಾಗಿದ್ದು, ಐದು ವಿಜೇತರಿಗೆ ತಮ್ಮ ಪರಿಸರ ಸ್ನೇಹಿ ಯೋಜನೆಗಳನ್ನು ಮತ್ತಷ್ಟು ವಿಸ್ತರಿಸಲು ತಲಾ 10 ಲಕ್ಷ ಪೌಂಡ್ ಬಹುಮಾನ ನೀಡಲಾಗುತ್ತದೆ. ಬಾಲಿವುಡ್ ನಟಿ ಆಲಿಯಾ ಭಟ್ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ವಿಶ್ವ ದಾಖಲೆ ಮುರಿದ ರೋಹಿತ್ ಶರ್ಮಾ..!

ಮೋದಿ ಅವರನ್ನು ಭೇಟಿಯಾಗಲಿರುವ ವಿಲಿಯಂ-ಕೇಟ್

ಈ ಭಾರತ ಪ್ರವಾಸ ರಾಜಕುಮಾರಿ ಕೇಟ್ ಅವರಿಗೂ ವಿಶೇಷವಾಗಿದೆ. 2024ರಲ್ಲಿ ಕೀಮೋಥೆರಪಿ ಚಿಕಿತ್ಸೆ ಪಡೆದ ಬಳಿಕ ಅವರು ಕೈಗೊಂಡಿರುವ ಪ್ರಮುಖ ವಿದೇಶಿ ಪ್ರವಾಸಗಳಲ್ಲಿ ಇದೂ ಒಂದಾಗಿದೆ. ಮುಂಬೈ ಪ್ರವಾಸ ಮುಗಿಸಿದ ಬಳಿಕ ವಿಲಿಯಂ ಮತ್ತು ಕೇಟ್ ದೆಹಲಿಗೆ ತೆರಳಲಿದ್ದಾರೆ. ಅಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಈ ಭೇಟಿಯೊಂದಿಗೆ ಅವರ ಮೂರು ದಿನಗಳ ಭಾರತ ಪ್ರವಾಸ ಅಂತ್ಯಗೊಳ್ಳಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:30 pm, Mon, 16 November 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us