Maharaja Trophy 2024: ಚೊಚ್ಚಲ ಪಂದ್ಯದಲ್ಲಿ ಕಮಾಲ್ ಮಾಡದ ದ್ರಾವಿಡ್ ಪುತ್ರ..! ಆದರೂ ಗೆದ್ದ ಮೈಸೂರು

|

Updated on: Aug 16, 2024 | 3:39 PM

Maharaja Trophy 2024: ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಮೈಸೂರು ವಾರಿಯರ್ಸ್ ತಂಡದ ಪರ ನಾಯಕ ನಾಯರ್, ಸಮಿತ್‌ಗೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ನೀಡಿದರು. ಆದರೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದ ಸಮಿತ್ 9 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ಔಟಾದರು.

Maharaja Trophy 2024: ಚೊಚ್ಚಲ ಪಂದ್ಯದಲ್ಲಿ ಕಮಾಲ್ ಮಾಡದ ದ್ರಾವಿಡ್ ಪುತ್ರ..! ಆದರೂ ಗೆದ್ದ ಮೈಸೂರು
ಸಮಿತ್ ದ್ರಾವಿಡ್
Follow us on

ನಿನ್ನೆಯಿಂದ ಬೆಂಗಳೂರಿನಲ್ಲಿ ಮಹಾರಾಜ ಟ್ರೋಫಿ ಅಂದರೆ ಕರ್ನಾಟಕ ಪ್ರೀಮಿಯರ್ ಲೀಗ್ ಆರಂಭವಾಗಿದೆ. ಈ ಲೀಗ್​ನಲ್ಲಿ 6 ತಂಡಗಳು ಭಾಗವಹಿಸುತ್ತಿವೆ. ಇದರಲ್ಲಿ ಮೊದಲ ದಿನವೇ ಎರಡು ಪಂದ್ಯಗಳು ನಡೆದವು. ದಿನದ ಮೊದಲ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಗುಲ್ಬರ್ಗ ಮಿಸ್ಟಿಕ್ಸ್ ತಂಡಗಳು ಮುಖಾಮುಖಿಯಾಗಿದ್ದರೆ, ಎರಡನೇ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ಹಾಗೂ ಮೈಸೂರು ವಾರಿಯರ್ಸ್ ತಂಡಗಳು ಗೆಲುವಿಗಾಗಿ ಸೆಣಸಾಡಿದ್ದವು. ಮೊದಲ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಏಕಪಕ್ಷೀಯ ಗೆಲುವು ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ 7 ರನ್ ಗಳಿಂದ ಪಂದ್ಯ ಗೆದ್ದುಕೊಂಡಿತು. ಇನ್ನು ಇದೇ ಪಂದ್ಯದಲ್ಲಿ ಭಾರತ ಕ್ರಿಕೆಟ್​ನ ದಿ ವಾಲ್ ಎನಿಸಿಕೊಂಡಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಕೂಡ ಮೈಸೂರು ವಾರಿಯರ್ಸ್ ತಂಡದ ಪರ ಕಣಕ್ಕಿಳಿದಿದ್ದರು. ಆದರೆ ತಮ್ಮ ಚೊಚ್ಚಲ ಪಂದ್ಯದಲ್ಲೇ ಕಮಾಲ್ ಮಾಡುವಲ್ಲಿ ವಿಫಲರಾದ ಸಮಿತ್ ಒಂದಂಕಿಗೆ ಪೆವಿಲಿಯನ್ ಸೇರಿಕೊಂಡರು.

7 ರನ್​ಗಳಿಗೆ ಸಮಿತ್ ಇನ್ನಿಂಗ್ಸ್‌ ಅಂತ್ಯ

ಮಹಾರಾಜ ಟ್ರೋಫಿಯಲ್ಲಿ ಇದೇ ಮೊದಲ ಬಾರಿಗೆ ಕಣಕ್ಕಿಳಿದಿರುವ ಸಮಿತ್ ಅವರನ್ನು 50 ಸಾವಿರ ನೀಡಿ ಮೈಸೂರು ವಾರಿಯರ್ಸ್ ತಂಡ ಹರಾಜಿನಲ್ಲಿ ಕೊಂಡುಕೊಂಡಿತ್ತು. ಐಪಿಎಲ್ ಜೊತೆಗೆ ಟೀಂ ಇಂಡಿಯಾ ಪರ ಆಡಿದ ಕರುಣ್ ನಾಯರ್, ಕೃಷ್ಣಪ್ಪ ಗೌತಮ್ ಅವರಂತಹ ದೊಡ್ಡ ಆಟಗಾರರು ಈ ತಂಡದಲ್ಲಿದ್ದಾರೆ. ಇನ್ನು ಚೊಚ್ಚಲ ಪಂದ್ಯವನ್ನಾಡುತ್ತಿದ್ದ ಸಮಿತ್ ಬಗ್ಗೆ ಅಭಿಮಾನಿಗಳು ರಾಹುಲ್ ದ್ರಾವಿಡ್ ಅವರಂತೆಯೇ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಸ್ವತಃ ತಂಡದ ನಾಯಕ ಕರುಣ್ ನಾಯರ್ ಕೂಡ ಸಮಿತ್ ಅವರ ಆಟ ನೋಡಲು ಉತ್ಸುಕರಾಗಿದ್ದರು. ಆದರೆ, ಲೀಗ್​ನ ಮೊದಲ ಪಂದ್ಯದಲ್ಲಿ ಸಮಿತ್​ಗೆ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ.

ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಮೈಸೂರು ವಾರಿಯರ್ಸ್ ತಂಡದ ಪರ ನಾಯಕ ನಾಯರ್, ಸಮಿತ್‌ಗೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಅವಕಾಶ ನೀಡಿದರು. ಆದರೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದ ಸಮಿತ್ 9 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ಔಟಾದರು. ಇದರಲ್ಲಿ ಒಂದು ಬೌಂಡರಿ ಕೂಡ ಸೇರಿತ್ತು. ಅಂತಿಮವಾಗಿ ಹಾರ್ದಿಕ್ ರಾಜ್ ಎಸೆತದಲ್ಲಿ ದೊಡ್ಡಮನಿ ಆನಂದ್ ಅವರಿಗೆ ಕ್ಯಾಚ್ ನೀಡಿ ಸಮಿತ್ ಪೆವಿಲಿಯನ್ ಸೇರಿಕೊಂಡರು. ಇನ್ನು ಇದೇ ಮೊದಲ ಬಾರಿಗೆ ಈ ಟೂರ್ನಿಯಲ್ಲಿ ಆಡುತ್ತಿರುವ ಸಮಿತ್ ಬ್ಯಾಟಿಂಗ್ ಜೊತೆಗೆ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡುತ್ತಾರೆ.

ಕೊನೆಗೂ ಗೆದ್ದ ಮೈಸೂರು ತಂಡ

ರಾಹುಲ್ ದ್ರಾವಿಡ್ ಪುತ್ರ ಸಮಿತ್​ಗೆ ಈ ಪಂದ್ಯದಲ್ಲಿ ಯಾವುದೇ ಕೊಡುಗೆ ನೀಡಲು ಸಾಧ್ಯವಾಗದಿದ್ದರೂ, ಅವರ ತಂಡ ಗೆಲುವು ಸಾಧಿಸುವುಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಶಿವಮೊಗ್ಗ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಮೈಸೂರು ತಂಡಕ್ಕೆ ಕೊನೆಯಲ್ಲಿ ಆಸರೆಯಾದ ಮನೋಜ್ ಭಾಂಡಗೆ 16 ಎಸೆತಗಳಲ್ಲಿ 42 ರನ್‌ ಸಿಡಿಸಿ ತಂಡವನ್ನು 159 ರನ್​ಗಳಿಗೆ ಕೊಂಡೊಯ್ದರು. ಈ ಗುರಿ ಬೆನ್ನತ್ತಿ ಬಂದ ಶಿವಮೊಗ್ಗದ ಆರಂಭ ಕೂಡ ಉತ್ತಮವಾಗಿರಲಿಲ್ಲ. ಪವರ್‌ಪ್ಲೇಯಲ್ಲಿ ತಂಡ 3 ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ವೇಗವಾಗಿ ರನ್ ಗಳಿಸಿದ ಶಿವಮೊಗ್ಗ ತಂಡ 9 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಾದ ಬಳಿಕ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು, ಮೈಸೂರು ತಂಡ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ 7 ರನ್​ಗಳಿಂದ ಪಂದ್ಯ ಗೆದ್ದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:35 pm, Fri, 16 August 24