
ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್, ಸೂಪರ್ಸ್ಟಾರ್ ರಜನಿಕಾಂತ್ ಅವರ ದೊಡ್ಡ ಅಭಿಮಾನಿ. ಈ ಹಿಂದೆಯೂ ಅವರು ರಜನಿಕಾಂತ್ ಮೇಲಿನ ಅಭಿಮಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ಇದೀಗ ರಜನಿಕಾಂತ್ ಅವರ ಬಹುನಿರೀಕ್ಷಿತ ಜೈಲರ್ 2 ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಹೀಗಾಗಿ ತನ್ನ ನೆಚ್ಚಿನ ಹೀರೋ ಸಿನಿಮಾವನ್ನು ವೀಕ್ಷಿಸಲು ಸಂಜು ಇಡೀ ಚಿತ್ರಮಂದಿರವನ್ನೇ ಬುಕ್ ಮಾಡಿದ್ದಾರೆ. ತಮ್ಮ ಪತ್ನಿ ಮತ್ತು ಸ್ನೇಹಿತರ ಜೊತೆ ಕುಳಿತು ಸಿನಿಮಾ ನೋಡಲು ಅವರು ವಿಶೇಷ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ರಜನಿಕಾಂತ್ ಅವರ ಸಿನಿಮಾಗಳನ್ನು ಇಷ್ಟಪಡುವ ಸಂಜು ಸ್ಯಾಮ್ಸನ್, ಅವರ ಹೊಸ ಸಿನಿಮಾ ಬಿಡುಗಡೆಯಾದ ದಿನವೇ ನೋಡಬೇಕು ಎಂದುಕೊಂಡಿದ್ದರಂತೆ. ಆದರೆ ದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಬೇಕಿದ್ದ ಕಾರಣ ಸಿನಿಮಾ ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಇದೀಗ ತಮ್ಮ ಸಿನಿಮಾ ನೋಡಲು ಸಂಜು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಂಜು, ‘ನನಗೆ ರಜನಿಕಾಂತ್ ಸರ್ ಅವರ ಸಿನಿಮಾಗಳೆಂದರೆ ತುಂಬಾ ಇಷ್ಟ. ಅವರ ಮುಂದಿನ ಸಿನಿಮಾ ಯಾವಾಗ ಬರುತ್ತದೆ ಎಂದು ಕಾಯುತ್ತಿರುತ್ತೇನೆ. ಸಾಧ್ಯವಾದಷ್ಟು ಅವರ ಸಿನಿಮಾಗಳನ್ನು ನೋಡಲು ಪ್ರಯತ್ನಿಸುತ್ತೇನೆ. ನಿನ್ನೆ ದೆಹಲಿಯಲ್ಲಿ ಕಾರ್ಯಕ್ರಮವಿದ್ದ ಕಾರಣ ಸಿನಿಮಾ ನೋಡಲು ಆಗಲಿಲ್ಲ. ಹೀಗಾಗಿ ಇಂದು ಸಿನಿಮಾ ನೋಡುತ್ತಿದ್ದೇನೆ’ಎಂದು ಹೇಳಿದ್ದಾರೆ.
ಸಿನಿಮಾ ವೀಕ್ಷಣೆಯನ್ನು ವಿಶೇಷವಾಗಿಸಿಕೊಳ್ಳಲು ಸಂಜು ಸ್ಯಾಮ್ಸನ್ ಇಡೀ ಚಿತ್ರಮಂದಿರವನ್ನೇ ಬುಕ್ ಮಾಡಿದ್ದಾರೆ. ತಮ್ಮ ಸ್ನೇಹಿತರನ್ನು ಆಹ್ವಾನಿಸಿದ್ದು, ಪತ್ನಿಯೂ ಅವರ ಜೊತೆ ಸಿನಿಮಾ ವೀಕ್ಷಿಸಲಿದ್ದಾರೆ. ಈ ಬಗ್ಗೆಯೂ ಮಾತನಾಡಿರುವ ಸಂಜು, ‘ಇಂದು ಇಡೀ ಚಿತ್ರಮಂದಿರವನ್ನು ಬುಕ್ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ನನ್ನ ಸ್ನೇಹಿತರನ್ನೆಲ್ಲ ಆಹ್ವಾನಿಸಿದ್ದೇನೆ. ನನ್ನ ಪತ್ನಿಯೂ ಇಲ್ಲಿದ್ದಾರೆ. ದೊಡ್ಡ ಪರದೆಯ ಮೇಲೆ ರಜನಿಕಾಂತ್ ಸರ್ ಅವರನ್ನು ನೋಡಲು ತುಂಬಾ ಉತ್ಸುಕನಾಗಿದ್ದೇನೆ’ ಎಂದು ಸಂಜು ಹೇಳಿದ್ದಾರೆ.
ಸಂಜು ಸ್ಯಾಮ್ಸನ್ ಅವರ ಈ ವಿಶೇಷ ಸಿನಿಮಾ ವೀಕ್ಷಣೆಗೆ ಭಾರತೀಯ ಕ್ರಿಕೆಟ್ ತಂಡದ ಸಹಾಯಕ ಸಿಬ್ಬಂದಿಯೂ ಕೈಜೋಡಿಸಲಿದ್ದಾರೆ. ತಮಿಳು ಭಾಷೆ ಅರ್ಥಮಾಡಿಕೊಳ್ಳುವ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಕೂಡ ಸಿನಿಮಾ ವೀಕ್ಷಿಸಲು ಬರಲಿದ್ದಾರೆ ಎಂದಿರುವ ಸಂಜು, ‘ತಮಿಳು ಭಾಷೆ ಗೊತ್ತಿರುವ ತಂಡದವರು ಮತ್ತು ಸಹಾಯಕ ಸಿಬ್ಬಂದಿ ಎಲ್ಲರೂ ಸಿನಿಮಾ ನೋಡಲು ಬರುತ್ತಿದ್ದಾರೆ’ ಎಂದಿದ್ದಾರೆ.
ತಮ್ಮ ವೃತ್ತಿಜೀವನದ ಅತ್ಯಂತ ವೇಗದ ಅರ್ಧಶತಕ ಅಬ್ಬರಿಸಿದ ಸಂಜು ಸ್ಯಾಮ್ಸನ್..!
ರಜನಿಕಾಂತ್ ಅವರ ಸಿನಿಮಾಗಳಿಗೆ ದೇಶಾದ್ಯಂತ ದೊಡ್ಡ ಅಭಿಮಾನಿ ಬಳಗವಿದೆ. ಅವರ ವಿಶಿಷ್ಟ ಸ್ಟೈಲ್, ವಿಭಿನ್ನ ಮ್ಯಾನರಿಸಂ ಮತ್ತು ತೆರೆಯ ಮೇಲಿನ ಅದ್ಧೂರಿ ನಟನೆಗೆ ಹಲವು ತಲೆಮಾರುಗಳ ಅಭಿಮಾನಿಗಳು ಮನಸೋತಿದ್ದಾರೆ. ಇದೀಗ ಸಂಜು ಸ್ಯಾಮ್ಸನ್ ಕೂಡ ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಸ್ನೇಹಿತರು ಮತ್ತು ಕುಟುಂಬದವರ ಜೊತೆ ಕುಳಿತು ವೀಕ್ಷಿಸಲು ಇಡೀ ಚಿತ್ರಮಂದಿರವನ್ನೇ ಬುಕ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಬ್ಯಾಟ್ ಮೂಲಕ ಅಭಿಮಾನಿಗಳನ್ನು ರಂಜಿಸುವ ಸಂಜು, ಸಿನಿಮಾ ವಿಚಾರದಲ್ಲೂ ತಾನು ರಜನಿಕಾಂತ್ ಅವರ ಅಪ್ಪಟ ಅಭಿಮಾನಿ ಎಂಬುದನ್ನು ಸಾಬೀತುಪಡಿಸಿದ್ದಾರೆ.