ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾದ ಟೀಮ್ ಇಂಡಿಯಾದಲ್ಲಿ ಯುವ ದಾಂಡಿಗ ಸರ್ಫರಾಝ್ ಖಾನ್ ಕೂಡ ಸ್ಥಾನ ಪಡೆದಿದ್ದಾರೆ. ಇದಾಗ್ಯೂ ಅವರು ಮೊದಲ ಪಂದ್ಯಕ್ಕಾಗಿ ಚೆನ್ನೈಗೆ ಪ್ರಯಾಣಿಸುತ್ತಿಲ್ಲ. ಬದಲಾಗಿ ದುಲೀಪ್ ಟ್ರೋಫಿಯಲ್ಲೇ ಮುಂದುವರೆಯಲಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಭಾರತ ಬಿ ತಂಡದ ಭಾಗವಾಗಿರುವ ಸರ್ಫರಾಝ್ ಖಾನ್ ನಾಳೆಯಿಂದ (ಸೆ.12) ಶುರುವಾಗಲಿರುವ ಭಾರತ ಸಿ ತಂಡದ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಅಂದರೆ ಇಲ್ಲಿ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾದರೂ ದೇಶೀಯ ಟೂರ್ನಿಯಲ್ಲಿ ಮುಂದುವರೆಯುವಂತೆ ಸರ್ಫರಾಝ್ ಖಾನ್ಗೆ ಬಿಸಿಸಿಐ ಆಯ್ಕೆ ಸಮಿತಿ ತಿಳಿಸಿದೆ.
ಏಕೆಂದರೆ ಭಾರತ ಟೆಸ್ಟ್ ತಂಡದಲ್ಲಿ ಒಟ್ಟು 16 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಇಲ್ಲಿ ಕಣಕ್ಕಿಳಿಯುವುದು ಕೇವಲ 11 ಮಂದಿ ಮಾತ್ರ. ಉಳಿದ ಐವರು ಆಟಗಾರರು ಬೆಂಚ್ ಕಾಯಲಿದ್ದಾರೆ. ಹಾಗೆಯೇ ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಟೆಸ್ಟ್ ಸರಣಿ ಶುರುವಾಗುವುದು ಸೆಪ್ಟೆಂಬರ್ 19 ರಿಂದ. ಅದೇ ದುಲೀಪ್ ಟ್ರೋಫಿಯ 2ನೇ ಸುತ್ತಿನ ಪಂದ್ಯಗಳು ಸೆಪ್ಟೆಂಬರ್ 12 ರಿಂದ ಆರಂಭವಾಗಲಿದೆ. ಹೀಗಾಗಿ ಸರ್ಫರಾಝ್ ಖಾನ್ಗೆ ದುಲೀಪ್ ಟ್ರೋಫಿ ಆಡುವಂತೆ ಸೂಚಿಸಲಾಗಿದೆ. ಇನ್ನು ಭಾರತ ಟೆಸ್ಟ್ ತಂಡದ ಯಾವುದಾದರೂ ಬ್ಯಾಟರ್ ಗಾಯಗೊಂಡು ಹೊರಗುಳಿದರೆ ಸರ್ಫರಾಝ್ ಖಾನ್ಗೆ ಬುಲಾವ್ ನೀಡಬಹುದು. ಅದುವರೆಗೆ ಅವರು ದುಲೀಪ್ ಟ್ರೋಫಿಯಲ್ಲೇ ಮುಂದುವರೆಯುವ ಸಾಧ್ಯತೆಯಿದೆ.
ಸರ್ಫರಾಝ್ ಖಾನ್ ದುಲೀಪ್ ಟ್ರೋಫಿಯಲ್ಲಿ ಮುಂದುವರೆಯುತ್ತಿರುವುದರಿಂದ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಕಣಕ್ಕಿಳಿಯುವುದು ಖಚಿತವಾಗಿದೆ. ಇದಕ್ಕೂ ಮುನ್ನ ಸರ್ಫರಾಝ್ ಹಾಗೂ ಕೆಎಲ್ ರಾಹುಲ್ ನಡುವೆ ಮಧ್ಯಮ ಕ್ರಮಾಂಕದ ಸ್ಥಾನಕ್ಕಾಗಿ ಪೈಪೋಟಿಯಿತ್ತು. ಆದರೀಗ ಯುವ ದಾಂಡಿಗ ದುಲೀಪ್ ಟ್ರೋಫಿಯಲ್ಲಿ ಮುಂದುವರೆಯುತ್ತಿರುವುದರಿಂದ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಕನ್ಫರ್ಮ್ ಆಗಿದೆ.
Published On - 10:26 am, Wed, 11 September 24