ಸ್ಕಾಟ್ಲೆಂಡ್ನ ಫೋರ್ಥಿಲ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಒಮಾನ್ ಹಾಗೂ ಸ್ಕಾಟ್ಲೆಂಡ್ ನಡುವಿನ ಏಕದಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ಪರ ಚೊಚ್ಚಲ ಪಂದ್ಯವನ್ನಾಡುತ್ತಿರುವ ಯುವ ವೇಗಿ ಚಾರ್ಲಿ ಕ್ಯಾಸಲ್ ತಮ್ಮ ಮಾರಕ ಬೌಲಿಂಗ್ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಯಾವೊಬ್ಬ ಬೌಲರ್ಗೂ ಸಾಧ್ಯವಾಗದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಪದಾರ್ಪಣೆ ಪಂದ್ಯದಲ್ಲಿ ಕೇವಲ 5.4 ಓವರ್ಗಳನ್ನು ಬೌಲ್ ಮಾಡಿದ ಚಾರ್ಲಿ, ಒಂದು ಮೇಡನ್ ಓವರ್ ಸೇರಿದಂತೆ ಕೇವಲ 21 ರನ್ ನೀಡಿ ಬರೋಬ್ಬರಿ 7 ವಿಕೆಟ್ ಕಬಳಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಚಾರ್ಲಿ ಕ್ಯಾಸಲ್ಗೂ ಮುನ್ನ ವಿಶ್ವದ ಯಾವೊಬ್ಬ ಬೌಲರ್ಗೂ ತಮ್ಮ ಚೊಚ್ಚಲ ಪಂದ್ಯದಲ್ಲಿ ಇಷ್ಟು ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ.
ಚಾರ್ಲಿಗೂ ಮುನ್ನ ಈ ದಾಖಲೆ ದಕ್ಷಿಣ ಆಫ್ರಿಕಾದ ವೇಗಿ ಕಗಿಸೋ ರಬಾಡ ಅವರ ಹೆಸರಿನಲ್ಲಿತ್ತು. ರಬಾಡ ತಮ್ಮ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯದಲ್ಲಿ 2015 ರಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಕೇವಲ 16 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಇದೀಗ ಆ ದಾಖಲೆಯನ್ನು ಸ್ಕಾಟ್ಲೆಂಡ್ನ ಚಾರ್ಲಿ ಕ್ಯಾಸಲ್ ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದರ ಜೊತೆಗೆ ಚಾರ್ಲಿ ಕ್ಯಾಸಲ್ ತೆಗೆದ 7 ವಿಕೆಟ್ಗಳಲ್ಲಿ ಮೊದಲ ಎರಡು ವಿಕೆಟ್ಗಳು ಅವರು ಬೌಲ್ ಮಾಡಿದ ಮೊದಲ ಓವರ್ನ ಮೊದಲ ಎರಡು ಎಸೆತಗಳಲ್ಲೇ ಬಂದವು. ಇದರೊಂದಿಗೆ ತಾನು ಬೌಲ್ ಮಾಡಿದ ಚೊಚ್ಚಲ ಪಂದ್ಯದ ಚೊಚ್ಚಲ ಓವರ್ನ ಮೊದಲ ಎರಡು ಎಸೆತಗಳಲ್ಲಿ ಸತತ ಎರಡು ವಿಕೆಟ್ಗಳನ್ನು ಉರುಳಿಸಿದ ವಿಶ್ವದ ಮೊದಲ ಬೌಲರ್ ಎಂಬ ದಾಖಲೆಯನ್ನು ಚಾರ್ಲಿ ತನ್ನ ಖಾತೆಗೆ ಹಾಕಿಕೊಂಡಿದ್ದಾರೆ. ಹಾಗೆಯೇ ಚೊಚ್ಚಲ ಪಂದ್ಯದ ಮೊದಲ ಓವರ್ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದ 32ನೇ ಬೌಲರ್ ಎನಿಸಿಕೊಂಡಿದ್ದಾರೆ. ಚಾರ್ಲಿ ಕ್ಯಾಸಲ್ಗೂ ಮುನ್ನ ಈ ಸಾಧನೆಯನ್ನು ವಿಶ್ವದ 31 ಬೌಲರ್ಗಳು ಮಾಡಿದ್ದರು.
5️⃣.4️⃣ overs
1️⃣ maiden
2️⃣1️⃣ runs
7️⃣ wicketsCharlie Cassell with the 𝘽𝙀𝙎𝙏 𝙀𝙑𝙀𝙍 figures on ODI debut 🤯🤩🔥#FollowScotland pic.twitter.com/EXSw7ixucZ
— Cricket Scotland (@CricketScotland) July 22, 2024
ಇದಲ್ಲದೆ ಮೊದಲ ಓವರ್ನಲ್ಲಿ ಚಾರ್ಲಿ ಸತತ ಎರಡು ಎಸೆತಗಳಲ್ಲಿ 2 ವಿಕೆಟ್ಗಳನ್ನು ಪಡೆದಿದಲ್ಲದೆ ಅದೇ ಓವರ್ನಲ್ಲಿ ಮತ್ತೊಂದು ವಿಕೆಟ್ ಕೂಡ ಕಬಳಿಸಿದರು. ಜೊತೆಗೆ ಈ ಓವರ್ ಮೇಡನ್ ಕೂಡ ಆಗಿತ್ತು. ಈ ಮೂಲಕ ಚಾರ್ಲಿ ಮೊದಲ ಓವರ್ನಲ್ಲಿ 3 ವಿಕೆಟ್ ಕಬಳಿಸುವುದರೊಂದಿಗೆ ಯಾವುದೇ ರನ್ ನೀಡಿದ ಮೊದಲ ಬೌಲರ್ ಎನಿಸಿಕೊಂಡರು. ವಾಸ್ತವವಾಗಿ ಒಮಾನ್ ವಿರುದ್ಧದ ಪಂದ್ಯಕ್ಕೆ ಚಾರ್ಲಿ ಕ್ಯಾಸಲ್ ಮೊದಲು ತಂಡದಲ್ಲಿ ಆಯ್ಕೆಯಾಗಿರಲಿಲ್ಲ. ಆದರೆ ತಂಡದಲ್ಲಿ ಆಯ್ಕೆಯಾಗಿದ್ದ ಮತ್ತೊಬ್ಬ ವೇಗಿ ಕ್ರಿಸ್ ಸೋಲ್ ಇಂಜುರಿಗೊಂಡಿದ್ದರಿಂದ ಚಾರ್ಲಿ ಕ್ಯಾಸಲ್ಗೆ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಇದೀಗ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿರುವ ಚಾರ್ಲಿ, ವಿಶ್ವದಾಖಲೆ ನಿರ್ಮಿಸಿದ್ದಾರೆ.
ಇನ್ನು ಈ ಪಂದ್ಯದ ಬಗ್ಗೆ ಹೇಳುವುದಾದರೆ.. ಮೊದಲು ಬ್ಯಾಟ್ ಮಾಡಿದ ಒಮಾನ್ ತಂಡ ಚಾರ್ಲಿ ಕ್ಯಾಸಲ್ ದಾಳಿಗೆ ನಲುಗಿ ಪೂರ್ಣ 50 ಓವರ್ಗಳನ್ನು ಆಡಲು ಸಾಧ್ಯವಾಗದೆ ಕೇವಲ 21.3 ಓವರ್ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು ಕೇವಲ 90 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿರುವ ಸ್ಕಾಟ್ಲೆಂಡ್ ಕೂಡ ಆರಂಭಿಕ ಆಘಾತ ಎದುರಿಸಿದ್ದು, ಈ ಸುದ್ದಿ ಬರೆಯುವ ಹೊತ್ತಿಗೆ 2 ವಿಕೆಟ್ ಕಳೆದುಕೊಂಡು 73 ರನ್ ಕಲೆಹಾಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:03 pm, Mon, 22 July 24