ಟೀಂ ಇಂಡಿಯಾದ 15 ಆಟಗಾರರ ಬಳಗ ಶ್ರೀಲಂಕಾ ಪ್ರವಾಸಕ್ಕೆ ತೆರಳಿದೆ. ಭಾರತ ತಂಡ ಮುಂಬೈನಿಂದ ಕೊಲಂಬೊಗೆ ವಿಮಾನ ಪ್ರಯಾಣ ಬೆಳೆಸಿತು. ಭಾರತ ಮತ್ತು ಶ್ರೀಲಂಕಾ ನಡುವಿನ ಸರಣಿ ಜುಲೈ 27 ರಿಂದ ಆರಂಭವಾಗಲಿದೆ. ಟಿ20 ಸರಣಿಯೊಂದಿಗೆ ಪ್ರವಾಸ ಆರಂಭವಾಗಲಿದ್ದು, ಇದರಲ್ಲಿ ಟೀಂ ಇಂಡಿಯಾದ 7 ಆಟಗಾರರು ಮೊದಲ ಬಾರಿಗೆ ಶ್ರೀಲಂಕಾ ನೆಲದಲ್ಲಿ ಟಿ20 ಆಡಲಿದ್ದಾರೆ.
ಅಚ್ಚರಿಯ ಸಂಗತಿ ಎಂದರೆ ಆ 7 ಆಟಗಾರರ ಪೈಕಿ 6 ವರ್ಷಗಳಿಂದ ಭಾರತ ಪರ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿರುವವ ಆಟಗಾರರೂ ಇದ್ದಾರೆ. ಈ 7 ಆಟಗಾರರಲ್ಲಿ 3 ಬೌಲರ್‌ಗಳು, ಇಬ್ಬರು ಆಲ್‌ರೌಂಡರ್‌ಗಳು ಮತ್ತು ಇಬ್ಬರು ಬ್ಯಾಟ್ಸ್‌ಮನ್‌ಗಳು ಸೇರಿದ್ದಾರೆ. ಈಗ ಶ್ರೀಲಂಕಾ ನೆಲದಲ್ಲಿ ಮೊದಲ ಬಾರಿಗೆ ಸರಣಿ ಆಡಲಿರುವ 7 ಆಟಗಾರರು ಯಾರು ಎಂಬುದನ್ನು ನೋಡೋಣ..
ವೈಟ್ ಬಾಲ್ ಕ್ರಿಕೆಟ್ನಲ್ಲಿ ಟೀಂ ಇಂಡಿಯಾದ ಪ್ರಮುಖ ಬೌಲಿಂಗ್ ಅಸ್ತ್ರವಾಗಿರುವ ಅರ್ಷದೀಪ್ ಸಿಂಗ್, ಭಾರತ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಅಪಾರ ಕೊಡುಗೆ ನೀಡಿದ್ದರು. ಆದರೆ ಇಷ್ಟು ಸಾಧನೆಗಳ ಹೊರತಾಗಿಯೂ ಅರ್ಷದೀಪ್ ಗೆ ಶ್ರೀಲಂಕಾದಲ್ಲಿ ಆಡುವ ಮೊದಲ ಅವಕಾಶ ಇದಾಗಿದೆ.
ಎಡಗೈ ವೇಗಿ ಖಲೀಲ್ ಅಹ್ಮದ್ ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಿ 6 ವರ್ಷಗಳಾಗಿವೆ. ಅವರು 2018 ರಲ್ಲಿ ತಮ್ಮ ಮೊದಲ ಟಿ20 ಪಂದ್ಯವನ್ನು ಆಡಿದ್ದರು. ಅದರ ಹೊರತಾಗಿಯೂ, ಶ್ರೀಲಂಕಾದಲ್ಲಿ ಅವರು ಮೊದಲ ಟಿ20 ಪಂದ್ಯವನ್ನು ಆಡಲಿದ್ದಾರೆ.
ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಶ್ರೀಲಂಕಾದಲ್ಲಿ ಮೊದಲ ಬಾರಿಗೆ ಟಿ20 ಪಂದ್ಯವನ್ನು ಆಡಲಿದ್ದಾರೆ. 2019ರಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಈ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್‌ಗೆ ಶ್ರೀಲಂಕಾದಲ್ಲಿ ಟಿ20 ಆಡಲು ಇದು ಮೊದಲ ಅವಕಾಶವಾಗಿದೆ.
2023ರಲ್ಲಿ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ನಂತರ ರಿಂಕು ಸಿಂಗ್ ಭಾರತ ಪರ 20 ಪಂದ್ಯಗಳನ್ನು ಆಡಿದ್ದಾರೆ. ಆದರೆ, ಆ 20 ಪಂದ್ಯಗಳಲ್ಲಿ ಶ್ರೀಲಂಕಾ ನೆಲದಲ್ಲಿ ಒಂದೂ ಪಂದ್ಯವನ್ನು ಆಡಿಲ್ಲ. ಶ್ರೀಲಂಕಾದಲ್ಲಿ ಇದೇ ಮೊದಲ ಬಾರಿಗೆ ಟಿ20ಯಲ್ಲಿ ರಿಂಕು ಸಿಂಗ್ ಕಣಕ್ಕಿಳಿಯಲಿದ್ದಾರೆ.
ರವಿ ಬಿಷ್ಣೋಯ್ ಟೀಂ ಇಂಡಿಯಾ ಪರ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನಾಡಿ 5 ವರ್ಷಗಳಾಗಿವೆ. ಆದರೆ, ಅವರು ಮೊದಲ ಬಾರಿಗೆ ಶ್ರೀಲಂಕಾದಲ್ಲಿ ಟಿ20 ಪಂದ್ಯವನ್ನು ಆಡಲಿದ್ದಾರೆ.
ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ ಶಿವಂ ದುಬೆ ಕೂಡ ಶ್ರೀಲಂಕಾದಲ್ಲಿ ಮೊದಲ ಬಾರಿಗೆ ಆಡಲಿದ್ದಾರೆ.
ಶುಭ್ಮನ್ ಗಿಲ್ ನಾಯಕತ್ವದಲ್ಲಿ ಜಿಂಬಾಬ್ವೆ ಪ್ರವಾಸದಲ್ಲಿ ಟಿ20 ಮಾದರಿಗೆ ಪಾದಾರ್ಪಣೆ ಮಾಡಿದ್ದ ರಿಯಾನ್ ಪರಾಗ್ ಕೂಡ ಶ್ರೀಲಂಕಾದಲ್ಲಿ ಮೊದಲ ಬಾರಿಗೆ ಆಡಲಿದ್ದಾರೆ.
Published On - 4:01 pm, Mon, 22 July 24