Harmanpreet Kaur: ಸ್ಮೃತಿ ಮಂಧಾನ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಹರ್ಮನ್ಪ್ರೀತ್ ಕೌರ್
Asia Cup 2024: ಯುಎಇ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಯುಎಇ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 123 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 78 ರನ್ಗಳ ಭರ್ಜರಿ ಜಯ ಸಾಧಿಸಿದೆ.
Updated on: Jul 22, 2024 | 8:55 AM

ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟಿ20 ಟೂರ್ನಿಯ 5ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಯುಎಇ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತದ ಪರ ನಾಯಕಿ ಹರ್ಮನ್ಪ್ರೀತ್ ಕೌರ್ (66) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ (64) ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಕದೊಂದಿಗೆ ಹರ್ಮನ್ಪ್ರೀತ್ ಕೌರ್ ಟಿ20 ಕ್ರಿಕೆಟ್ನಲ್ಲಿ ಹೊಸ ಮೈಲುಗಲ್ಲು ದಾಟಿದ್ದಾರೆ.

ಅಂದರೆ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಹರ್ಮನ್ಪ್ರೀತ್ ಕೌರ್ ಅಗ್ರಸ್ಥಾನಕ್ಕೇರಿದ್ದಾರೆ. ಅದು ಸಹ ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.

ಸ್ಮೃತಿ ಮಂಧಾನ ಟಿ20 ಕ್ರಿಕೆಟ್ನಲ್ಲಿ ಭಾರತದ ಪರ ಈವರೆಗೆ 138 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 2765 ಎಸೆತಗಳನ್ನು ಎದುರಿಸಿರುವ ಸ್ಮೃತಿ 24 ಅರ್ಧಶತಕಗಳೊಂದಿಗೆ ಒಟ್ಟು 3378 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಭಾರತದ ಪರ ಅತ್ಯಧಿಕ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದರು.

ಆದರೀಗ ಸ್ಮೃತಿ ಮಂಧಾನ ಅವರನ್ನು ಹಿಂದಿಕ್ಕಿ ಹರ್ಮನ್ಪ್ರೀತ್ ಕೌರ್ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಟೀಮ್ ಇಂಡಿಯಾ ಪರ 171 ಟಿ20 ಪಂದ್ಯಗಳನ್ನಾಡಿರುವ ಹರ್ಮನ್ 1 ಶತಕ ಹಾಗೂ 12 ಅರ್ಧಶತಕಗಳೊಂದಿಗೆ ಒಟ್ಟು 3415 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಭಾರತೀಯ ಮಹಿಳಾ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವುದು ಭಾರತ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್. ಟೀಮ್ ಇಂಡಿಯಾ ಪರ 89 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಮಿಥಾಲಿ 17 ಅರ್ಧಶತಕಗಳೊಂದಿಗೆ ಒಟ್ಟು 2364 ರನ್ ಕಲೆಹಾಕಿ ಈ ಸಾಧನೆ ಮಾಡಿದ್ದಾರೆ.



















