ನವೆಂಬರ್ 19 ರಂದು ನಡೆದಿದ್ದ ಏಕದಿನ ವಿಶ್ವಕಪ್ನ (ODI World Cup 2023) ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತದ (India vs Australia) ಸೋಲನ್ನು ಸಂಭ್ರಮಿಸಿದ್ದ ಹಾಗೂ ಇದೇ ವೇಳೆ ಪಾಕಿಸ್ತಾನದ (Pakistan) ಪರ ಘೋಷಣೆ ಕೂಗಿದ ಆರೋಪದಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕೃಷಿ ವಿಶ್ವವಿದ್ಯಾಲಯದ ಏಳು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಈ ವಿದ್ಯಾರ್ಥಿಗಳನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ಸುದ್ದಿ ಪ್ರಕಾರ, ಶೇರ್-ಎ-ಕಾಶ್ಮೀರ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ದೂರುದಾರರ ಪ್ರಕಾರ, ಆರೋಪಿ ವಿದ್ಯಾರ್ಥಿಗಳು, ಟೀಂ ಇಂಡಿಯಾವನ್ನು ಬೆಂಬಲಿಸಿದಕ್ಕಾಗಿ ನಮ್ಮನ್ನು ನಿಂದಿಸಿ, ಕಿರುಕುಳ ನೀಡಿದ್ದಾರೆ. ಅಲ್ಲದೆ ಆರೋಪಿ ವಿದ್ಯಾರ್ಥಿಗಳು ನಮ್ಮ ಮೇಲೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಜಮ್ಮು ಮತ್ತು ಕಾಶ್ಮೀರದ ಹೊರಗಿನ ವಿದ್ಯಾರ್ಥಿಗಳಲ್ಲಿ ಭಯ ಸೃಷ್ಟಿಯಾಗಿದೆ ಎಂದೂ ದೂರುದಾರರು ಆರೋಪಿಸಿದ್ದಾರೆ.
ಭಾರತದ ವಿರುದ್ಧ ಸತತ 2 ಸೋಲು; ಟಿ20 ಸರಣಿಯಿಂದಲೇ ಹೊರಬಿದ್ದ ಆಸ್ಟ್ರೇಲಿಯಾದ 6 ಆಟಗಾರರು..!
ವರದಿಯ ಪ್ರಕಾರ, ದೂರಿನನ್ವಯ ಪೊಲೀಸರು ಈ ಬಗ್ಗೆ ಈಗಾಗಲೇ ತನಿಖೆ ಪ್ರಾರಂಭಿಸಿದ್ದು, ಶ್ರೀನಗರದ ಗಂದರ್‌ಬಾಲ್ ಪೊಲೀಸ್ ಠಾಣೆಯಲ್ಲಿ ಯುಎಪಿಎ ಸೆಕ್ಷನ್ 13 ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 505 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಪಶುವೈದ್ಯಕೀಯ ವಿಜ್ಞಾನದ ಬ್ಯಾಚುಲರ್ ಅಧಿಕಾರಿಯೊಬ್ಬರು ಮಾತನಾಡಿದ್ದು, ಹಾಸ್ಟೆಲ್‌ನಲ್ಲಿ ಸುಮಾರು 300 ವಿದ್ಯಾರ್ಥಿಗಳು ವಾಸಿಸುತ್ತಿದ್ದಾರೆ. ಅವರಲ್ಲಿ 30 ರಿಂದ 40 ವಿದ್ಯಾರ್ಥಿಗಳು ಪಂಜಾಬ್, ರಾಜಸ್ಥಾನ ಮತ್ತು ಇತರ ರಾಜ್ಯಗಳಿಂದ ಬಂದವರಾಗಿದ್ದಾರೆ. ನವೆಂಬರ್ 19 ರಂದು ರಾತ್ರಿ ವಿದ್ಯಾರ್ಥಿಗಳ ನಡುವೆ ಜಗಳವಾಗಿತ್ತು. ಬಳಿಕ ಕಾಶ್ಮೀರದ ಹೊರಗಿನ ವಿದ್ಯಾರ್ಥಿಗಳು, ಸ್ಥಳೀಯ ವಿದ್ಯಾರ್ಥಿಗಳು ಭಾರತದ ಸೋಲನ್ನು ಸಂಭ್ರಮಿಸಿದ್ದಲ್ಲದೆ ನಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೆ ವಿದ್ಯಾರ್ಥಿಗಳೇ ನೇರವಾಗಿ ಪೊಲೀಸರ ಮೊರೆ ಹೋಗಿದ್ದು, ಘಟನೆಗೆ ಸಂಬಂಧಿಸಿದಂತೆ ಅವರು ಯಾವುದಾದರೂ ಸಾಕ್ಷ್ಯವನ್ನು ನೀಡಿದ್ದಾರೋ ಇಲ್ಲವೋ ಎಂಬುದು ಪೊಲೀಸರಿಗೆ ಮಾತ್ರ ತಿಳಿದಿದೆ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:31 pm, Tue, 28 November 23