‘ಸಾಕಷ್ಟು ಹಣವಿದೆ’: ಐಪಿಎಲ್ ಆಡುವ ಬಯಕೆ ವ್ಯಕ್ತಪಡಿಸಿದ ಮತ್ತೊಬ್ಬ ಪಾಕ್ ಆಟಗಾರ
IPL 2024: ವಾಸ್ತವವಾಗಿ, ಪಾಕಿಸ್ತಾನಿ ಆಟಗಾರರು ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಭಾಗವಹಿಸಿದ್ದರು. ಅಂದರೆ 2008 ರ ಐಪಿಎಲ್‌ನಲ್ಲಿ ಪಾಕಿಸ್ತಾನದ ಶೋಯೆಬ್ ಮಲಿಕ್, ಶೋಯೆಬ್ ಅಖ್ತರ್, ಕಮ್ರಾನ್ ಅಕ್ಮಲ್, ಸೊಹೈಲ್ ತನ್ವಿರ್ ಮತ್ತು ಶಾಹಿದ್ ಅಫ್ರಿದಿ ಅವರಂತಹ ದೊಡ್ಡ ಆಟಗಾರರು ಭಾಗವಹಿಸಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ (IPL).. ಪ್ರಪಂಚದಾದ್ಯಂತದ ಅಗ್ರ ಕ್ರಿಕೆಟಿಗರು ಈ ಲೀಗ್‌ನಲ್ಲಿ ಆಡುತ್ತಾರೆ. ಅಲ್ಲದೆ ಪ್ರತಿಯೊಬ್ಬ ಕ್ರಿಕೆಟಿಗನೂ ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಆಡುವ ಹೆಬ್ಬಯಕೆಯನ್ನು ಹೊಂದಿರುತ್ತಾನೆ. ಅದರಲ್ಲಿ ಕೆಲವು ಕ್ರಿಕೆಟಿಗರು ಯಶಸ್ವಿಯಾದರೆ, ಇನ್ನು ಕೆಲವು ಕ್ರಿಕೆಟಿಗರಿಗೆ ಈ ಕನಸು ನನಸಾಗುವುದಿಲ್ಲ. ಅಂತಹವರಲ್ಲಿ ಪಾಕ್ ಕ್ರಿಕೆಟಿಗರು (Pakistan Cricketers) ಸೇರಿದ್ದಾರೆ. ಸಾಕಷ್ಟು ಪ್ರತಿಭೆ ಇದ್ದರೂ ಪಾಕ್ ಕ್ರಿಕೆಟಿಗರು ಈ ಲೀಗ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಇದೆಲ್ಲದರ ಹೊರತಾಗಿಯೂ ಪಾಕಿಸ್ತಾನದ ಹಲವು ಆಟಗಾರರು ಈಗಾಗಲೇ ಈ ಲೀಗ್‌ನಲ್ಲಿ ಆಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪಾಕಿಸ್ತಾನದ ವೇಗದ ಬೌಲರ್ ಹಸನ್ ಅಲಿ (Hassan Ali) ಹೊಸ ಸೇರ್ಪಡೆಯಾಗಿದ್ದಾರೆ.
ಅವಕಾಶ ಸಿಕ್ಕರೆ ಖಂಡಿತಾ ಆಡುವೆ
ಪಾಕಿಸ್ತಾನದ ಟಿವಿ ಕಾರ್ಯಕ್ರಮವೊಂದರಲ್ಲಿ ಹಸನ್ ಅಲಿ ಅವರ ಬಳಿ ನಿಮಗೆ ಐಪಿಎಲ್‌ನಿಂದ ಆಫರ್ ಬಂದರೆ ಏನು ಮಾಡುತ್ತೀರಿ? ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಹಸನ್, ‘ಐಪಿಎಲ್ ಬಹಳ ದೊಡ್ಡ ಲೀಗ್. ಅದರಲ್ಲಿ ಗ್ಲಾಮರ್ ಇದೆ, ದುಡ್ಡು ಇದೆ. ಪ್ರತಿಯೊಬ್ಬ ಆಟಗಾರನೂ ಐಪಿಎಲ್‌ನ ಭಾಗವಾಗಲು ಬಯಸುತ್ತಾನೆ. ನನಗೆ ಐಪಿಎಲ್ ಆಡುವ ಆಸೆಯಿದೆ. ಭವಿಷ್ಯದಲ್ಲಿ ಅವಕಾಶ ಸಿಕ್ಕರೆ ಖಂಡಿತಾ ಅಲ್ಲಿ ಆಡುತ್ತೇನೆ’ ಎಂದಿದ್ದಾರೆ.
ವಿಶ್ವಕಪ್‌ನಲ್ಲಿ ಭಾರತದ ಸೋಲನ್ನು ಸಂಭ್ರಮಿಸಿ, ಪಾಕ್ ಪರ ಘೋಷಣೆ ಕೂಗಿದ್ದ 7 ಕಾಶ್ಮೀರಿ ವಿದ್ಯಾರ್ಥಿಗಳ ಬಂಧನ
ಐಪಿಎಲ್‌ನಲ್ಲಿ ಪಾಕ್ ಕ್ರಿಕೆಟಿಗರು
ವಾಸ್ತವವಾಗಿ, ಪಾಕಿಸ್ತಾನಿ ಆಟಗಾರರು ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಭಾಗವಹಿಸಿದ್ದರು. ಅಂದರೆ 2008 ರ ಐಪಿಎಲ್‌ನಲ್ಲಿ ಪಾಕಿಸ್ತಾನದ ಶೋಯೆಬ್ ಮಲಿಕ್, ಶೋಯೆಬ್ ಅಖ್ತರ್, ಕಮ್ರಾನ್ ಅಕ್ಮಲ್, ಸೊಹೈಲ್ ತನ್ವಿರ್ ಮತ್ತು ಶಾಹಿದ್ ಅಫ್ರಿದಿ ಅವರಂತಹ ದೊಡ್ಡ ಆಟಗಾರರು ಭಾಗವಹಿಸಿದ್ದರು. ಅಲ್ಲದೆ ಆ ಸೀಸನ್ನಲ್ಲಿ ಪಾಕಿಸ್ತಾನದ ಆಟಗಾರರೂ ಉತ್ತಮ ಪ್ರದರ್ಶನ ನೀಡಿದ್ದರು. ಸೋಹೈಲ್ ತನ್ವೀರ್ ಐಪಿಎಲ್ 2008ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಆದರೆ, 2008ರಲ್ಲಿ ಮುಂಬೈ ದಾಳಿಯ ನಂತರ ಪಾಕಿಸ್ತಾನಿ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸದಂತೆ ನಿಷೇಧ ಹೇರಲಾಯಿತು. ಅಂದಿನಿಂದ ಇಲ್ಲಿಯವರೆಗೆ ಯಾವುದೇ ಪಾಕಿಸ್ತಾನಿ ಆಟಗಾರನಿಗೆ ಐಪಿಎಲ್‌ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿಲ್ಲ.
ವಿಶ್ವಕಪ್ ತಂಡದಲ್ಲಿದ ಹಸನ್ ಅಲಿ
ಇನ್ನು ಹಸನ್ ಅಲಿ ಬಗ್ಗೆ ಹೇಳುವುದಾದರೆ, ಅವರು 2023 ರ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನಿ ತಂಡದ ಭಾಗವಾಗಿದ್ದರು. ಗಾಯಗೊಂಡಿದ್ದ ನಸೀಮ್ ಶಾ ಬದಲಿಗೆ ಹಸನ್ ಅಲಿ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿದ್ದ ಹಸನ್ ಅಲಿ 9 ವಿಕೆಟ್ ಕಬಳಿಸಿದ್ದರು. ಇದರಲ್ಲಿ ಒಂದು ಪಂದ್ಯದಲ್ಲಿ 4 ವಿಕೆಟ್ ಪಡೆದಿದ್ದು, ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.