
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ (Shahid Afridi) ವಿರುದ್ಧ ಮೋದಿ ಸರ್ಕಾರ ಕೊನೆಗೂ ಕ್ರಮ ಕೈಗೊಂಡಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam Terror Attack) ನಂತರ ಭಾರತದ ವಿರುದ್ಧ ವಿಷ ಕಾರುತ್ತಿದ್ದ ಅಫ್ರಿದಿ ಭಾರತೀಯ ಸೇನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದರು. ಆದರೆ ಈಗ ಭಾರತ ಸರ್ಕಾರ ಶಾಹಿದ್ ಅಫ್ರಿದಿ ವಿರುದ್ಧ ಕ್ರಮ ಕೈಗೊಂಡಿದ್ದು, ಅಫ್ರಿದಿ ಅವರ ಯೂಟ್ಯೂಬ್ ಚಾನೆಲ್ ಅನ್ನು ಸಹ ನಿಷೇಧಿಸಿದೆ. ಇದರರ್ಥ ಇನ್ನು ಮುಂದೆ ಶಾಹಿದ್ ಅಫ್ರಿದಿ ಅವರ ಯೂಟ್ಯೂಬ್ ಚಾನೆಲ್ ಭಾರತದಲ್ಲಿ ಕಾಣಸಿಗುಸುವುದಿಲ್ಲ. ಶಾಹಿದ್ ಅಫ್ರಿದಿ ಅವರಿಗೂ ಮುನ್ನ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ ಶೊಯೇಬ್ ಅಖ್ತರ್ ಅವರ ಯೂಟ್ಯೂಬ್ ಚಾನೆಲ್ ಅನ್ನು ಸಹ ಭಾರತದಲ್ಲಿ ನಿಷೇಧಿಸಲಾಗಿತ್ತು. ಲಕ್ಷಾಂತರ ಚಂದಾದಾರರನ್ನು ಹೊಂದಿರುವ ಅಫ್ರಿದಿ ಭಾರತದಿಂದ ಸಾಕಷ್ಟು ವೀಕ್ಷಣೆಗಳನ್ನು ಪಡೆಯುತ್ತಿದ್ದರು. ಆದರೀಗ ಭಾರತ ಸರ್ಕಾರದ ಕ್ರಮ ಕೈಗೊಂಡಿರುವ ಕಾರಣ ಅಫ್ರಿದಿಗೆ ನಷ್ಟವಾಗುವುದಂತು ಖಚಿತ.
ಭಾರತದ ವಿರುದ್ಧ ಹಲವು ಹೇಳಿಕೆಗಳನ್ನು ನೀಡಿದ್ದ ಶಾಹಿದ್ ಅಫ್ರಿದಿ, ‘ಪಹಲ್ಗಾಮ್ ಭಯೋತ್ಪಾದಕ ದಾಳಿಯು ಭಾರತೀಯ ಸೇನೆಯ ವೈಫಲ್ಯ. ಈ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಯಾವುದೇ ಪಾತ್ರವಿಲ್ಲ. ಭಾರತದಲ್ಲಿ ಪಟಾಕಿ ಸಿಡಿದರೆ ಜನರು ಪಾಕಿಸ್ತಾನವನ್ನು ದೂಷಿಸುತ್ತಾರೆ. ಕಾಶ್ಮೀರದಲ್ಲಿ 8 ಲಕ್ಷ ಭಾರತೀಯ ಸೈನಿಕರಿದ್ದಾರೆ, ಇದರ ಹೊರತಾಗಿಯೂ ಪಹಲ್ಗಾಮ್‌ನಲ್ಲಿ ಇದು ಸಂಭವಿಸಿದಲ್ಲಿ ಅದು ಭಾರತೀಯ ಸೇನೆಯ ವೈಫಲ್ಯ ಎಂದು ಅಫ್ರಿದಿ ಹೇಳಿದ್ದರು.
ಪಹಲ್ಗಾಮ್ ದಾಳಿ ಕುರಿತು ಅಪಹಾಸ್ಯ, ಭಾರತದಲ್ಲಿ ನೂರಾರು ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್ಗಳಿಗೆ ನಿಷೇಧ
ಮೇಲೆ ಹೇಳಿದಂತೆ ಶಾಹಿದ್ ಅಫ್ರಿದಿಗೂ ಮೊದಲು, ಭಾರತ ಸರ್ಕಾರವು ಅನೇಕ ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಕ್ರಮ ಕೈಗೊಂಡಿದೆ. ಶಾಹಿದ್ ಅಫ್ರಿದಿಗೂ ಮೊದಲು, ಸೋಮವಾರವೇ, ಭಾರತ ಸರ್ಕಾರ ಪಾಕಿಸ್ತಾನದ 16 ಜನಪ್ರಿಯ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿತ್ತು. ಇದರಲ್ಲಿ ಶೋಯೆಬ್ ಅಖ್ತರ್ ಮತ್ತು ಬಸಿತ್ ಅಲಿ ಅವರ ಯೂಟ್ಯೂಬ್ ಚಾನೆಲ್‌ಗಳು ಸಹ ಸೇರಿವೆ. ಇವುಗಳಲ್ಲದೆ, ಡಾನ್ ನ್ಯೂಸ್, ಸಮಾ ಟಿವಿ, ಎಆರ್‌ವೈ ನ್ಯೂಸ್, ಬೋಲ್ ನ್ಯೂಸ್, ಜಿಯೋ ನ್ಯೂಸ್, ಸಮಾ ಸ್ಪೋರ್ಟ್ಸ್‌ನಂತಹ ದೊಡ್ಡ ಚಾನೆಲ್‌ಗಳ ಯೂಟ್ಯೂಬ್ ಚಾನೆಲ್‌ಗಳನ್ನು ಸಹ ಭಾರತದಲ್ಲಿ ನಿಷೇಧಿಸಲಾಗಿದೆ. ಈ ಎಲ್ಲಾ ಚಾನೆಲ್‌ಗಳು ಭಾರತದಿಂದ ಸಾಕಷ್ಟು ವೀಕ್ಷಣೆಗಳನ್ನು ಪಡೆಯುತ್ತಿದ್ದವು ಆದರೆ ಈಗ ಇಲ್ಲಿ ವಿಧಿಸಲಾದ ನಿಷೇಧದಿಂದಾಗಿ, ಅವುಗಳ ಚಾನೆಲ್‌ನ ಬೆಳವಣಿಗೆ ಮತ್ತು ಅದರಿಂದ ಬರುವ ಆದಾಯದ ಮೇಲೆ ಪರಿಣಾಮ ಬೀರುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:55 pm, Wed, 30 April 25