IPL 2025: ‘ಮುಂದಿನ ಪಂದ್ಯ ಆಡುವುದೇ ನಿರ್ಧಾರವಾಗಿಲ್ಲ’; ಎಲ್ಲರನ್ನೂ ಅಚ್ಚರಿಗೊಳಿಸಿದ ಧೋನಿ
MS Dhoni's IPL Future: ಕಳೆದ ಕೆಲವು ಸೀಸನ್ಗಳಿಂದ, ಎಂಎಸ್ ಧೋನಿ ಅವರ ಐಪಿಎಲ್ ಭವಿಷ್ಯದ ಬಗ್ಗೆ ನಿರಂತರ ಊಹಾಪೋಹಗಳು ಕೇಳಿಬರುತ್ತಿವೆ. ಈ ಸೀಸನ್ನ ಆರಂಭದಲ್ಲಿ ಧೋನಿಯ ಪೋಷಕರು ಪಂದ್ಯ ವೀಕ್ಷಿಸಲು ಚೆನ್ನೈ ಕ್ರೀಡಾಂಗಣಕ್ಕೆ ಬಂದಿದ್ದಾಗಲೂ ಇದೇ ರೀತಿಯ ವದಂತಿಗಳು ಕೇಳಿಬಂದಿದ್ದವು. ಇದೀಗ ಟಾಸ್ ಸಮಯದಲ್ಲಿ ಧೋನಿ ನೀಡಿದ ಹೇಳಿಕೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕ ಎಂಎಸ್ ಧೋನಿ (MS Dhoni) ಮುಂದಿನ ಆವೃತ್ತಿಯ ಐಪಿಎಲ್ ಆಡುತ್ತಾರೋ ಇಲ್ಲವೋ?. ಪ್ರತಿ ಸೀಸನ್ನಂತೆ, ಈ ಆವೃತ್ತಿಯಲ್ಲೂ ಧೋನಿಗೆ ಈ ಪ್ರಶ್ನೆಯನ್ನು ಕೇಳಲಾಗುತ್ತಿದೆ. ಆ ಪ್ರಕಾರ, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೇಳಲಾದ ಈ ಪ್ರಶ್ನೆಗೆ ಧೋನಿ ತಮ್ಮ ಉತ್ತರದಿಂದ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ವಾಸ್ತವವಾಗಿ 2025 ರ ಐಪಿಎಲ್ನ 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿವೆ. ಈ ಪಂದ್ಯದ ಟಾಸ್ ಸಮಯದಲ್ಲಿ ಧೋನಿ ಬಳಿ, ಅವರ ಭವಿಷ್ಯದ ಬಗ್ಗೆ ಮತ್ತು ವಿಶೇಷವಾಗಿ ಮುಂದಿನ ಐಪಿಎಲ್ (IPL) ಸೀಸನ್ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ತಕ್ಷಣವೇ ಉತ್ತರಿಸಿದ ಕ್ಯಾಪ್ಟನ್ ಕೂಲ್ ನಾನು ಮುಂದಿನ ಪಂದ್ಯವನ್ನು ಆಡುತ್ತೇನೋ, ಇಲ್ಲವೋ ಎಂಬುದು ನನಗೆ ಇನ್ನು ತಿಳಿದಿಲ್ಲ ಎಂದು ಹೇಳುವ ಮೂಲಕ ಎಲ್ಲರಿಗೂ ಮಾರ್ಮಿಕ ಉತ್ತರ ನೀಡಿದ್ದಾರೆ.
ಮುಂದಿನ ಪಂದ್ಯ ಆಡುವುದೇ ನಿರ್ಧಾರವಾಗಿಲ್ಲ
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತ ಬಳಿಕ ಮಾತನಾಡಿದ ಎಂಎಸ್ ಧೋನಿ ಬಳಿ ನಿರೂಪಕ ಡ್ಯಾನಿ ‘ನೀವು ಮುಂದಿನ ಆವೃತ್ತಿಯಲ್ಲೂ ಅಡುತ್ತಿರಾ?’ ಎಂದು ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ಧೋನಿ ಯಾವುದೇ ವಿಳಂಬವಿಲ್ಲದೆ, ‘ಮುಂದಿನ ಪಂದ್ಯದಲ್ಲಿ ನಾನು ಆಡುತ್ತೇನೋ ಇಲ್ಲವೋ ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ’ ಎಂದು ಹೇಳಿದರು. ಇದನ್ನು ಹೇಳಿದ ಕೂಡಲೇ ಧೋನಿ ನಗಲು ಪ್ರಾರಂಭಿಸಿದರೆ, ಇತ್ತ ಮಾರಿಸನ್ಗೂ ಕೂಡ ತನ್ನ ನಗುವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ಧೋನಿ ಇದನ್ನು ತಮಾಷೆಯ ರೀತಿಯಲ್ಲಿ ಹೇಳಿದ್ದರೂ, ಪ್ರತಿ ಬಾರಿಯಂತೆ, ಅವರ ಹೇಳಿಕೆ ಅಭಿಮಾನಿಗಳಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ. ಧೋನಿ ಐಪಿಎಲ್ ಮಧ್ಯದಲ್ಲಿ ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಬಹುದು ಎಂಬ ಭಯ ಅಭಿಮಾನಿಗಳ ಮನಸ್ಸಿನಲ್ಲಿ ಮೂಡಿದೆ. ಆದರೆ, ಈ ಸೀಸನ್ನಲ್ಲಿ ಚೆನ್ನೈ ತಂಡದ ಪರಿಸ್ಥಿತಿ ಮತ್ತು ನಾಯಕ ರುತುರಾಜ್ ಗಾಯಕ್ವಾಡ್ ಈಗಾಗಲೇ ಟೂರ್ನಿಯಿಂದ ಹೊರಗುಳಿದಿರುವುದನ್ನು ನೋಡಿದರೆ, ಧೋನಿ ಇಡೀ ಸೀಸನ್ ಆಡುವುದು ಖಚಿತ.
ಭಾರತದ ವಿರುದ್ಧ ವಿಷ ಕಾರಿದ್ದ ಶಾಹಿದ್ ಅಫ್ರಿದಿಗೆ ಬ್ಯಾನ್ ಶಾಕ್ ನೀಡಿದ ಭಾರತ ಸರ್ಕಾರ
ನಿವೃತ್ತಿಯ ಬಗ್ಗೆ ವದಂತಿ
ಆದಾಗ್ಯೂ, ಈ ಆವೃತ್ತಿಯ ನಡುವೆ ಧೋನಿ ನಿವೃತ್ತಿಯ ಸುದ್ದಿ ಹರಿದಾಡಲಾರಂಭಿಸಿದೆ. ಧೋನಿ ತಂಡದ ಸಾರಥ್ಯ ವಹಿಸಿಕೊಳ್ಳುವ ಮೊದಲು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಸಮಯದಲ್ಲಿ ಅವರ ನಿವೃತ್ತಿಯ ಬಗ್ಗೆ ಊಹಾಪೋಹಗಳು ಕೇಳಿಬಂದಿದ್ದವು. ಇದಕ್ಕೆ ಕಾರಣ ಧೋನಿಯ ಅಪ್ಪ ಅಮ್ಮ ಮೊದಲ ಬಾರಿಗೆ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದರು. ಧೋನಿಯ ಇಡೀ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಅವರ ಪೋಷಕರು ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಇದು ಧೋನಿಯ ಕೊನೆಯ ಐಪಿಎಲ್ ಪಂದ್ಯವಾಗಲಿದೆ ಎಂಬ ವದಂತಿಗಳು ಹರಡಿತು, ಆದರೆ ಅದು ಆಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
