Asia Cup 2022: ಏಷ್ಯಾಕಪ್ನ ಸೂಪರ್- 4 ಹಂತದ ಪಂದ್ಯಗಳು ಇಂದಿನಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾದರೆ, ಭಾನುವಾರ ನಡೆಯಲಿರುವ 2ನೇ ಪಂದ್ಯದಲ್ಲಿ ಭಾರತ-ಪಾಕಿಸ್ತಾನ್ (India vs Pakistan) ತಂಡಗಳು ಸೆಣಸಲಿದೆ. ಆದರೆ ಈ ಪಂದ್ಯಕ್ಕೆ ದಿನ ಮಾತ್ರ ಉಳಿದಿರುವಾಗ ಪಾಕಿಸ್ತಾನ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ವೇಗಿ ಶಹನವಾಜ್ ದಹಾನಿ ಗಾಯಗೊಂಡಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ವಿರುದ್ದದ ಪಂದ್ಯದಲ್ಲಿ ದಹಾನಿ ಕಣಕ್ಕಿಳಿಯುವುದಿಲ್ಲ.
ಇದಕ್ಕೂ ಮುನ್ನ ಪಾಕ್ ತಂಡದಿಂದ ಗಾಯಗೊಂಡು ಇಬ್ಬರು ವೇಗಿಗಳು ಹೊರಬಿದ್ದಿದ್ದರು. ಟೂರ್ನಿ ಆರಂಭಕ್ಕೂ ಮುನ್ನವೇ ಶಾಹೀನ್ ಅಫ್ರಿದಿ ಹೊರಗುಳಿದರೆ, ಏಷ್ಯಾಕಪ್ ಅಭ್ಯಾಸದ ವೇಳೆ ವಾಸಿಂ ಜೂನಿಯರ್ ಗಾಯಗೊಂಡ ಪರಿಣಾಮ ಅರ್ಧದಲ್ಲೇ ಟೂರ್ನಿಯನ್ನು ತೊರೆದಿದ್ದರು. ಇದೀಗ ಟೀಮ್ ಇಂಡಿಯಾ ವಿರುದ್ದದ ಮಹತ್ವದ ಪಂದ್ಯಕ್ಕೂ ಮುನ್ನ ಶಹನವಾಜ್ ದಹಾನಿ ಗಾಯಗೊಂಡಿರುವುದು ಪಾಕ್ ತಂಡದ ಚಿಂತೆಯನ್ನು ಹೆಚ್ಚಿಸಿದೆ.
ಏಕೆಂದರೆ ಟೀಮ್ ಇಂಡಿಯಾ ವಿರುದ್ದ ಮೊದಲ ಪಂದ್ಯದಲ್ಲಿ ದಹಾನಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು. ಭಾರತದ ಬಲಿಷ್ಠ ಬ್ಯಾಟಿಂಗ್ ಲೈನಪ್ ಮುಂದೆ 4 ಓವರ್ ಎಸೆದಿದ್ದ ದಹಾನಿ ನೀಡಿದ್ದು ಕೇವಲ 29 ರನ್ ಮಾತ್ರ. ಹೀಗಾಗಿ ಸೂಪರ್-4 ನಲ್ಲೂ ಶಹನವಾಜ್ ಪಾಕ್ ತಂಡದ ಟ್ರಂಪ್ ಕಾರ್ಡ್ ಆಗಿದ್ದರು.
ಇದೀಗ ಪಂದ್ಯ ಆರಂಭಕ್ಕೆ ದಿನ ಮಾತ್ರ ಉಳಿದಿರುವಾಗ ಪ್ರಮುಖ ವೇಗಿ ಗಾಯಗೊಂಡು ಹೊರಗುಳಿದಿರುವ ಬಾಬರ್ ಪಡೆಯ ಚಿಂತೆಯನ್ನು ಹೆಚ್ಚಿಸಿದೆ. ಅದರಲ್ಲೂ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಬೌಲರ್ ಹೊರುಗಳಿಯುತ್ತಿರುವುದು ಪಾಕ್ ತಂಡಕ್ಕೆ ಹಿನ್ನಡೆಯನ್ನುಂಟು ಮಾಡುವುದರಲ್ಲಿ ಅನುಮಾನವೇ ಇಲ್ಲ.
ಪಾಕಿಸ್ತಾನ್ ತಂಡ ಹೀಗಿದೆ:
ಬಾಬರ್ ಆಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್, ನಸೀಮ್ ಶಾ, ಹಸನ್ ಅಲಿ, ಮತ್ತು ಉಸ್ಮಾನ್ ಖಾದಿರ್.
ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್.
ಮೀಸಲು ಆಟಗಾರರು: ದೀಪಕ್ ಚಹರ್ ಮತ್ತು ಶ್ರೇಯಸ್ ಅಯ್ಯರ್.