VIDEO: ಸಿಟ್ಟಿನಿಂದ ರಿಝ್ವಾನ್​ನತ್ತ ಚೆಂಡೆಸೆದ ಶಕೀಬ್ ಅಲ್ ಹಸನ್

|

Updated on: Aug 26, 2024 | 10:39 AM

Pakistan vs Bangladesh: ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವು 10 ವಿಕೆಟ್​ಗಳ ಗೆಲುವು ಸಾಧಿಸಿದೆ. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಪಾಕ್ ತಂಡವು 448 ರನ್ ಕಲೆಹಾಕಿದರೆ, ಬಾಂಗ್ಲಾದೇಶ್ 565 ರನ್​ಗಳಿಸಿತು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಪಾಕಿಸ್ತಾನ್ ತಂಡ 146 ರನ್​ಗಳಿಗೆ ಆಲೌಟ್ ಆಗಿದೆ. ಅತ್ತ ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 30 ರನ್​ಗಳ ಗುರಿ ಪಡೆದ ಬಾಂಗ್ಲಾದೇಶ್ ತಂಡ 10 ವಿಕೆಟ್​ಗಳಿಂದ ಪಂದ್ಯವನ್ನು ಗೆದ್ದುಕೊಂಡಿದ್ದಾರೆ.

ರಾವಲ್ಪಿಂಡಿಯಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡ ಜಯ ಸಾಧಿಸಿದೆ. ಈ ಐತಿಹಾಸಿಕ ಗೆಲುವಿನ ಹೊರತಾಗಿಯೂ ಈ ಮ್ಯಾಚ್ ಈಗ ಸುದ್ದಿಯಲ್ಲಿರುವುದು ಬಾಂಗ್ಲಾ ಆಟಗಾರ ಶಕೀಬ್ ಅಲ್ ಹಸನ್ ಅವರ ನಡೆಯಿಂದ. ಮೈದಾನದಲ್ಲಿ ಕೋಪವನ್ನು ನೆತ್ತಿಗೇರಿಸಿಕೊಳ್ಳುವ ಅಪಖ್ಯಾತಿ ಹೊಂದಿರುವ ಶಕೀಬ್ ಈ ಬಾರಿ ಮೊಹಮ್ಮದ್ ರಿಝ್ವಾನ್ ಅವರನ್ನು ಗುರಿಯಾಗಿಸಿ ಚೆಂಡೆಸೆದಿದ್ದಾರೆ. ಆದರೆ ಚೆಂಡು ರಿಝ್ವಾನ್​​ಗೆ ತಾಗದಿದ್ದರಿಂದ ಅಪಾಯ ತಪ್ಪಿತು ಎನ್ನಬಹುದು.

ಈ ಪಂದ್ಯದ 2ನೇ ಇನಿಂಗ್ಸ್​ನಲ್ಲಿ ಮೊಹಮ್ಮದ್ ರಿಝ್ವಾನ್ ಬ್ಯಾಟಿಂಗ್ ಮಾಡುತ್ತಿದ್ದರು. ಇತ್ತ 4 ವಿಕೆಟ್ ಕಬಳಿಸಿ ಬಾಂಗ್ಲಾದೇಶ್ ತಂಡವು ಗೆಲುವಿನತ್ತ ಮುಖ ಮಾಡಿತ್ತು. ಆದರೆ ತಂಡವನ್ನು ಸೋಲಿನಿಂದ ಪಾರು ಮಾಡಲು ರಿಝ್ವಾನ್ ಇನ್ನಿಲ್ಲದ ಕಸರತ್ತು ಆರಂಭಿಸಿದ್ದರು. ಅದರಲ್ಲೂ ಸಮಯ ವ್ಯರ್ಥ ಮಾಡುವ ಕಾಯಕಕ್ಕೆ ಕೈ ಹಾಕಿದ್ದರು.

ಇದರ ನಡುವೆ ಶಕೀಬ್ ಅಲ್ ಹಸನ್ 33ನೇ ಓವರ್ ಎಸೆಯಲು ಬಂದಿದ್ದಾರೆ. ಮೊದಲ ಎಸೆತದ ಬಳಿಕ ರಿಝ್ವಾನ್ ಸಮಯ ವ್ಯರ್ಥ ಮಾಡಲು ಮುಂದಾಗಿದ್ದರು. ಆದರೆ ಅದಾಗಲೇ ಸ್ಲೋ ರನ್ನಿಂಗ್​ನೊಂದಿಗೆ ಶಕೀಬ್ ಅಲ್ ಹಸನ್ 2ನೇ ಎಸೆತ ಎಸೆಯಲು ಆಗಮಿಸಿದ್ದರು. ಇನ್ನೇನು ಚೆಂಡನ್ನು ಬಿಡುಗಡೆ ಮಾಡಬೇಕು ಅನ್ನುವಷ್ಟರಲ್ಲಿ ರಿಝ್ವಾನ್ ಕ್ರೀಸ್​ನಿಂದ ಹಿಂದೆ ಸರಿದಿದ್ದಾರೆ. ಇದರಿಂದ ಕುಪಿತಗೊಂಡ ಶಕೀಬ್ ಅಲ್ ಹಸನ್ ಸಿಟ್ಟಿನಿಂದಲೇ ಚೆಂಡನ್ನು ಬ್ಯಾಟರ್​ನತ್ತ ಎಸೆದರು. ಆದರೆ ಚೆಂಡು ಮೇಲಿಂದ ಹೋಗಿ ವಿಕೆಟ್ ಕೀಪರ್ ಲಿಟ್ಟನ್ ದಾಸ್ ಕೈ ಸೇರಿದೆ.

ಶಕೀಬ್ ಅಲ್ ಹಸನ್ ಅವರ ಈ ನಡೆಯನ್ನು ಅಂಪೈರ್ ಪ್ರಶ್ನಿಸಿದ್ದಾರೆ. ಇದೇ ವೇಳೆ ಮಧ್ಯ ಪ್ರವೇಶಿಸಿದ ಬಾಂಗ್ಲಾದೇಶ್ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂತೊ ಅಂಪೈರ್ ಜೊತೆ ರಿಝ್ವಾನ್ ಅವರ ವರ್ತನೆ ಬಗ್ಗೆ ದೂರಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮತ್ತೊಮ್ಮೆ ಅನುಚಿತ ವರ್ತನೆಯಿಂದ ಶಕೀಬ್ ಅಲ್ ಹಸನ್ ಸುದ್ದಿಯಾಗಿದ್ದಾರೆ.

 

Published on: Aug 26, 2024 10:38 AM