ಫುಲ್ ಜೋಶ್… 20 ವರ್ಷದ ಯುವ ಎಡಗೈ ವೇಗಿಯನ್ನು ಪರಿಚಯಿಸಿದ ಇಂಗ್ಲೆಂಡ್
England vs Sri Lanka: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ತಂಡ 5 ವಿಕೆಟ್ಗಳಿಂದ ಗೆದ್ದುಕೊಂಡಿದೆ. ಇದೀಗ 2ನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದ್ದ ಆಂಗ್ಲರ ಪಡೆಗೆ ಆಘಾತ ಎದುರಾಗಿದ್ದು, ತಂಡದ ಪ್ರಮುಖ ವೇಗಿ ಮಾರ್ಕ್ ವುಡ್ ಈ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಯುವ ವೇಗಿಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಹೊರಬಿದ್ದಿದ್ದಾರೆ. ತೊಡೆ ನೋವಿನ ಕಾರಣ ಲಂಕಾ ವಿರುದ್ಧದ ಕೊನೆಯ ಎರಡು ಪಂದ್ಯಗಳಿಗೆ ವುಡ್ ಅಲಭ್ಯರಾಗಿದ್ದಾರೆ. ಇದೀಗ ಅವರ ಬದಲಿಗೆ 20 ವರ್ಷದ ಯುವ ಎಡಗೈ ವೇಗಿ ಜೋಶ್ ಹಲ್ ಅನ್ನು ಇಂಗ್ಲೆಂಡ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಈಗಾಗಲೇ ಕೌಂಟಿ ಕ್ರಿಕೆಟ್ನಲ್ಲಿ ತನ್ನ ನಿಖರ ದಾಳಿಯಿಂದ ಸಂಚಲನ ಸೃಷ್ಟಿಸಿರುವ ಜೋಶ್ ಹಲ್ ಇದೀಗ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡುವ ವಿಶ್ವಾಸದಲ್ಲಿದ್ದಾರೆ.
6 ಅಡಿ ಎತ್ತರದ ಯುವ ವೇಗಿ ಈಗಾಗಲೇ ಲಿಸ್ಟ್ ಎ ಕ್ರಿಕೆಟ್ನಲ್ಲಿ 9 ಪಂದ್ಯಗಳಿಂದ 17 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಜೇಮ್ಸ್ ಅ್ಯಂಡರ್ಸನ್ ನಿವೃತ್ತಿಯ ಬಳಿಕ ಗಸ್ ಅಟ್ಕಿನ್ಸನ್ ಅವರನ್ನು ಪರಿಚಯಿಸಿ ಯಶಸ್ವಿಯಾಗಿರುವ ಇಂಗ್ಲೆಂಡ್ ಇದೀಗ 20 ವರ್ಷದ ಜೋಶ್ ಹಲ್ಗೂ ತಂಡದಲ್ಲಿ ಸ್ಥಾನ ನೀಡಿದ್ದು, ಈ ಮೂಲಕ ಬೌಲಿಂಗ್ ಲೈನಪ್ ಅನ್ನು ಮತ್ತಷ್ಟು ಬಲಿಷ್ಠಗೊಳಿಸುವತ್ತ ಮಹತ್ವದ ಹೆಜ್ಜೆಯನ್ನಿಟ್ಟಿದೆ.
ವಿಶೇಷ ಎಂದರೆ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್ ಎನಿಸಿಕೊಂಡಿರುವ ಜೇಮ್ಸ್ ಅ್ಯಂಡರ್ಸನ್ ಪ್ರಸ್ತುತ ಇಂಗ್ಲೆಂಡ್ ಟೆಸ್ಟ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಜೋಶ್ ಹಲ್ನಂತಹ ಯುವ ತರುಣರಿಗೆ ಜಿಮ್ಮಿ ಗರಡಿಯಲ್ಲಿ ಪಳಗಲು ಉತ್ತಮ ಅವಕಾಶ ದೊರೆತಂತಾಗಲಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಎಡಗೈ ವೇಗಿ ಜೋಶ್ ಹಲ್ ಸಂಚಲನ ಸೃಷ್ಟಿಸಿದರೂ ಅಚ್ಚರಿಪಡಬೇಕಿಲ್ಲ. ಏಕೆಂದರೆ ಹಲ್ ಅವರ ಹಲ್ಚಲ್ ಎಬ್ಬಿಸುವ ಬೌಲಿಂಗ್ ಶೈಲಿ ಹಾಗಿದೆ…ಅದರ ವಿಡಿಯೋ ಝಲಕ್ ಈ ಮೇಲೆ ನೀಡಲಾಗಿದ್ದು, ವೀಕ್ಷಿಸಬಹುದು.