ENG vs SL: ಶ್ರೀಲಂಕಾ ತಂಡವನ್ನು ಸದೆಬಡಿದ ಇಂಗ್ಲೆಂಡ್
England vs Sri Lanka, 1st Test: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ನಲ್ಲಿ ಇಂಗ್ಲೆಂಡ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಸರಣಿಯ ದ್ವಿತೀಯ ಟೆಸ್ಟ್ ಪಂದ್ಯವು ಆಗಸ್ಟ್ 29 ರಂದು ನಡೆಯಲಿದ್ದು, ಮೂರನೇ ಪಂದ್ಯವು ಸೆಪ್ಟೆಂಬರ್ 6 ರಂದು ಶುರುವಾಗಲಿದೆ.
ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಜಯಭೇರಿ ಬಾರಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ತಂಡದ ನಾಯಕ ಧನಂಜಯ ಡಿಸಿಲ್ವಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಪ್ರಥಮ ಇನಿಂಗ್ಸ್ ಶುರು ಮಾಡಿದ ಶ್ರೀಲಂಕಾ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲವಾಯಿತು.
ಕೇವಲ 113 ರನ್ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಲಂಕಾ ತಂಡಕ್ಕೆ ನಾಯಕ ಧನಂಜಯ ಡಿಸಿಲ್ವಾ ಆಸರೆಯಾಗಿ ನಿಂತರು. ಮಿಲನ್ ರತ್ನಾಯಕೆ ಜೊತೆಗೂಡಿ ಇನಿಂಗ್ಸ್ ಕಟ್ಟಿದ ಡಿಸಿಲ್ವಾ 74 ರನ್ ಬಾರಿಸಿ ಔಟಾದರು. ಮತ್ತೊಂದಡೆ ಮಿಲನ್ 72 ರನ್ಗಳ ಅಮೂಲ್ಯ ಕೊಡುಗೆ ನೀಡಿದರು. ಈ ಮೂಲಕ ಪ್ರಥಮ ಇನಿಂಗ್ಸ್ನಲ್ಲಿ ಶ್ರೀಲಂಕಾ ತಂಡವು 236 ರನ್ ಬಾರಿಸಿ ಆಲೌಟ್ ಆಯಿತು.
ಇದರ ಬೆನ್ನಲ್ಲೇ ಪ್ರಥಮ ಇನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ ಪರ ಜೋ ರೂಟ್ 42 ರನ್ ಬಾರಿಸಿದರೆ, ಹ್ಯಾರಿ ಬ್ರೂಕ್ 56 ರನ್ ಸಿಡಿಸಿದರು. ಇನ್ನು ಯುವ ವಿಕೆಟ್ ಕೀಪರ್ ಬ್ಯಾಟರ್ ಜೇಮಿ ಸ್ಮಿತ್ 111 ರನ್ಗಳನ್ನು ಸಿಡಿಸಿ ಅಬ್ಬರಿಸಿದರು. ಈ ಮೂಲಕ ಇಂಗ್ಲೆಂಡ್ ತಂಡವು 358 ರನ್ಗಳಿಸಿತು.
122 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ಪರ ಹಿರಿಯ ಆಟಗಾರ ಏಂಜೆಲೊ ಮ್ಯಾಥ್ಯೂಸ್ 65 ರನ್ ಬಾರಿಸಿದರು. ಇನ್ನು ದಿನೇಶ್ ಚಂಡಿಮಲ್ 79 ರನ್ಗಳ ಕೊಡುಗೆ ನೀಡಿದರೆ, ಕಮಿಂದು ಮೆಂಡಿಸ್ 113 ರನ್ಗಳ ಭರ್ಜರಿ ಶತಕ ಸಿಡಿಸಿದರು. ಈ ಶತಕದ ನೆರವಿನಿಂದ ಶ್ರೀಲಂಕಾ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 326 ರನ್ ಪೇರಿಸಿತು.
ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 205 ರನ್ಗಳ ಗುರಿ ಪಡೆದ ಇಂಗ್ಲೆಂಡ್ ತಂಡ ಪರ ಆರಂಭಿಕ ಆಟಗಾರ ಡೇನಿಯಲ್ ಲಾರೆನ್ಸ್ 34 ರನ್ ಕಲೆಹಾಕಿದರೆ, ಜೋ ರೂಟ್ 62 ರನ್ಗಳ ಅಜೇಯ ಅರ್ಧಶತಕ ಬಾರಿಸಿದರು. ಇನ್ನು ಜೇಮಿ ಸ್ಮಿತ್ 39 ರನ್ ಹಾಗೂ ಹ್ಯಾರಿ ಬ್ರೂಕ್ 32 ರನ್ ಗಳಿಸಿದರು. ಈ ಮೂಲಕ ಇಂಗ್ಲೆಂಡ್ ತಂಡವು 5 ವಿಕೆಟ್ ಕಳೆದುಕೊಂಡು 205 ರನ್ ಬಾರಿಸಿ ಭರ್ಜರಿ ಜಯ ಸಾಧಿಸಿದೆ.
ಇಂಗ್ಲೆಂಡ್ ಪ್ಲೇಯಿಂಗ್ 11: ಡೇನಿಯಲ್ ಲಾರೆನ್ಸ್ , ಬೆನ್ ಡಕೆಟ್ , ಒಲೀ ಪೋಪ್ (ನಾಯಕ) , ಜೋ ರೂಟ್ , ಹ್ಯಾರಿ ಬ್ರೂಕ್ , ಜೇಮೀ ಸ್ಮಿತ್ (ವಿಕೆಟ್ ಕೀಪರ್) , ಕ್ರಿಸ್ ವೋಕ್ಸ್ , ಗಸ್ ಅಟ್ಕಿನ್ಸನ್ , ಮ್ಯಾಥ್ಯೂ ಪಾಟ್ಸ್ , ಮಾರ್ಕ್ ವುಡ್ , ಶೋಯೆಬ್ ಬಶೀರ್.
ಇದನ್ನೂ ಓದಿ: IPL 2025: ಧೋನಿ RCB ತಂಡದ ನಾಯಕರಾಗಿದ್ದರೆ 3 ಟ್ರೋಫಿ ಗೆದ್ದಿರುತ್ತಿತ್ತು..!
ಶ್ರೀಲಂಕಾ ಪ್ಲೇಯಿಂಗ್ 11: ದಿಮುತ್ ಕರುಣಾರತ್ನೆ , ನಿಶಾನ್ ಮದುಷ್ಕ , ಕುಸಲ್ ಮೆಂಡಿಸ್ , ಏಂಜೆಲೊ ಮ್ಯಾಥ್ಯೂಸ್ , ದಿನೇಶ್ ಚಂಡಿಮಲ್ (ವಿಕೆಟ್ ಕೀಪರ್) , ಧನಂಜಯ ಡಿ ಸಿಲ್ವಾ (ನಾಯಕ) , ಕಮಿಂದು ಮೆಂಡಿಸ್ , ಪ್ರಭಾತ್ ಜಯಸೂರ್ಯ , ಅಸಿತ ಫೆರ್ನಾಂಡೋ , ವಿಶ್ವ ಫೆರ್ನಾಂಡೋ , ಮಿಲನ್ ರತ್ನಾಯಕೆ.