- Kannada News Photo gallery Cricket photos IPL 2025: RCB would have won 3 IPL trophies if Dhoni was Skipper
IPL 2025: ಧೋನಿ RCB ತಂಡದ ನಾಯಕರಾಗಿದ್ದರೆ 3 ಟ್ರೋಫಿ ಗೆದ್ದಿರುತ್ತಿತ್ತು: ವಾಸಿಂ ಅಕ್ರಮ್
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮೂರನೇ ಬಾರಿ ಫೈನಲ್ ಆಡಿದೆ. 2009 ರಲ್ಲಿ ನಡೆದ ಫೈನಲ್ನಲ್ಲಿ 6 ರನ್ಗಳಿಂದ ಸೋತಿದ್ದ ಆರ್ಸಿಬಿ 2011 ರಲ್ಲಿ ಹೀನಾಯ ಸೋಲನುಭವಿಸಿತ್ತು. ಇದಾದ ಬಳಿಕ 2016 ರಲ್ಲಿ ಮತ್ತೆ ಫೈನಲ್ ಆಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ರನ್ಗಳಿಂದ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿಕೊಂಡಿದ್ದರು.
Updated on: Aug 21, 2024 | 7:30 AM

IPL 2025: ಐಪಿಎಲ್ನಲ್ಲಿ ಟ್ರೋಫಿ ಗೆಲ್ಲುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕನಸು ಮುಂದುವರೆದಿದೆ. ಕಳೆದ 17 ವರ್ಷಗಳಲ್ಲಿ 3 ಬಾರಿ ಫೈನಲ್ ಪ್ರವೇಶಿಸಿದ್ದ RCB ಅಂತಿಮ ಹಂತದಲ್ಲಿ ಎಡವಿತ್ತು. ಇದಾಗ್ಯೂ ಐಪಿಎಲ್ 2025 ರಲ್ಲಿ ಆರ್ಸಿಬಿ ಕಪ್ ಗೆಲ್ಲುವ ವಿಶ್ವಾಸದಲ್ಲಿದ್ದಾರೆ ರಾಯಲ್ ಅಭಿಮಾನಿಗಳು.

ಒಂದು ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನಡೆಸಿದ್ದರೆ ಕನಿಷ್ಠ 3 ಕಪ್ಗಳನ್ನಾದರೂ ಗೆಲ್ಲುತ್ತಿತ್ತು. ಹೀಗಂದಿದ್ದು ಮಾತ್ಯಾರೂ ಅಲ್ಲ, ಪಾಕಿಸ್ತಾನ ತಂಡದ ಮಾಜಿ ಆಟಗಾರ ವಾಸಿಂ ಅಕ್ರಮ್.

ವೆಬ್ಸೈಟ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವಾಸಿಂ ಅಕ್ರಮ್, ಆರ್ಸಿಬಿ ಪ್ರತಿ ಸೀಸನ್ನಲ್ಲೂ ಉತ್ತಮ ತಂಡವನ್ನೇ ರೂಪಿಸಿದೆ. ಆದರೆ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಅದರಲ್ಲೂ ವಿರಾಟ್ ಕೊಹ್ಲಿಯ ನಾಯಕತ್ವದಲ್ಲಿ ತಂಡವು ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳುವಲ್ಲಿ ವಿಫಲವಾಗಿತ್ತು.

ಒಂದು ವೇಳೆ ಆರ್ಸಿಬಿ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಏನಾದರೂ ಮುನ್ನಡೆಸಿದ್ದರೆ, ಈಗಾಗಲೇ 3 ಕಪ್ಗಳನ್ನಾದರೂ ಗೆದ್ದಿರುತ್ತಿತ್ತು. ಏಕೆಂದರೆ ಧೋನಿ ಅತ್ಯುತ್ತಮ ನಾಯಕ. ಅವರಿಗೆ ತಂಡವನ್ನು ಯಾವ ಪರಿಸ್ಥಿತಿಯಲ್ಲಿ ಹೇಗೆ ಮುನ್ನಡೆಸಬೇಕೆಂದು ಚೆನ್ನಾಗಿ ತಿಳಿದಿದೆ ಎಂದು ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ.

ನನ್ನ ಪ್ರಕಾರ, ಮಹೇಂದ್ರ ಸಿಂಗ್ ಧೋನಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಾರಥ್ಯವಹಿಸಿದ್ದರೆ ಖಂಡಿತವಾಗಿಯೂ ಕನಿಷ್ಠ ಮೂರು ಕಪ್ಗಳನ್ನಾದರೂ ಗೆಲ್ಲುತ್ತಿದ್ದರು ಎಂದು ವಾಸಿಂ ಅಕ್ರಮ್ ಹೇಳಿದ್ದಾರೆ.

ಅಂದಹಾಗೆ 2009 ರಲ್ಲಿ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ 6 ರನ್ಗಳಿಂದ ಸೋಲುವ ಮೂಲಕ ಆರ್ಸಿಬಿ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಕ್ಕುವ ಅವಕಾಶ ಕಳೆದುಕೊಂಡಿತು.

ಇದಾದ ಬಳಿಕ 2011 ರಲ್ಲಿ ಡೇನಿಯಲ್ ವೆಟ್ಟೋರಿ ನಾಯಕತ್ವದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಆರ್ಸಿಬಿ ಮತ್ತೆ ಫೈನಲ್ಗೆ ಪ್ರವೇಶಿಸಿತ್ತು. ಅಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 58 ರನ್ಗಳಿಂದ ಸೋತು ಚಾಂಪಿಯನ್ ಪಟ್ಟಕ್ಕೇರುವ ಅವಕಾಶವನ್ನು ರಾಯಲ್ ಚಾಲೆಂಜರ್ಸ್ ಹುಡುಗರು ಕೈಚೆಲ್ಲಿಕೊಂಡಿದ್ದರು.

ಇನ್ನು 2016 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್ಸಿಬಿ ಮೂರನೇ ಬಾರಿಗೆ ಫೈನಲ್ಗೆ ಎಂಟ್ರಿ ಕೊಟ್ಟಿತ್ತು. ಆದರೆ ಅಂತಿಮ ಹಣಾಹಣಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 8 ರನ್ಗಳಿಂದ ಪರಾಜಯಗೊಳ್ಳುವ ಮೂಲಕ ಮೂರನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಳ್ಳುವ ಅವಕಾಶವನ್ನು ಕೈಚೆಲ್ಲಿಕೊಂಡಿದ್ದರು.
