6,6,6,6,6,6,6,6,6.. ಅಭಿನವ್ ಸಿಡಿಲಬ್ಬರ! ಕೊನೆಗೂ ಗೆಲುವಿನ ಖಾತೆ ತೆರೆದ ಶಿವಮೊಗ್ಗ

Maharaja Trophy 2024: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟ್ರೋಫಿ 20 ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್​ ತಂಡವನ್ನು ಮಣಿಸಿದ ಶಿವಮೊಗ್ಗ ಲಯನ್ಸ್ ತಂಡ ಈ ಪಂದ್ಯಾವಳಿಯಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಸರಣಿಯಲ್ಲಿ ಇದುವರೆಗೆ ಆಡಿದ್ದ ಆರಕ್ಕೆ ಆರೂ ಪಂದ್ಯಗಳಲ್ಲಿ ಸೋತಿದ್ದ ಮಂಗಳೂರು ತಂಡಕ್ಕೆ ಕೊನೆಗೂ ಗೆಲುವಿನ ಸಿಂಚನ ಸಿಕ್ಕಿದೆ.

6,6,6,6,6,6,6,6,6.. ಅಭಿನವ್ ಸಿಡಿಲಬ್ಬರ! ಕೊನೆಗೂ ಗೆಲುವಿನ ಖಾತೆ ತೆರೆದ ಶಿವಮೊಗ್ಗ
ಅಭಿನವ್ ಮನೋಹರ್
Follow us
|

Updated on:Aug 24, 2024 | 10:18 PM

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟ್ರೋಫಿ 20 ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್​ ತಂಡವನ್ನು ಮಣಿಸಿದ ಶಿವಮೊಗ್ಗ ಲಯನ್ಸ್ ತಂಡ ಈ ಪಂದ್ಯಾವಳಿಯಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಸರಣಿಯಲ್ಲಿ ಇದುವರೆಗೆ ಆಡಿದ್ದ ಆರಕ್ಕೆ ಆರೂ ಪಂದ್ಯಗಳಲ್ಲಿ ಸೋತಿದ್ದ ಮಂಗಳೂರು ತಂಡಕ್ಕೆ ಕೊನೆಗೂ ಗೆಲುವಿನ ಸಿಂಚನ ಸಿಕ್ಕಿದೆ. ಮಂಗಳೂರು ತಂಡದ ಈ ಗೆಲುವಿನ ಶ್ರೇಯ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಅಭಿನವ್ ಮನೋಹರ್​ಗೆ ಸಲ್ಲಬೇಕು. ಏಕಾಂಗಿಯಾಗಿ ಹುಬ್ಬಳ್ಳಿ ಬೌಲರ್​ಗಳ ಬೆವರಿಳಿಸಿದ ಅಭಿನವ್ ಕೇವಲ 27 ಎಸೆತಗಳಲ್ಲಿ ಬರೋಬ್ಬರಿ 70 ರನ್ ಸಿಡಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಅಂತಿಮವಾಗಿ 141 ರನ್​ಗಳ ಗುರಿ ಬೆನ್ನಟ್ಟಿದ ಮಂಗಳೂರು ತಂಡ 4 ವಿಕೆಟ್ ಕಳೆದುಕೊಂಡು ಇನ್ನು 29 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು.

141 ರನ್​ಗಳಿಗೆ ಹುಬ್ಬಳ್ಳಿ ಆಲೌಟ್

ನಿನ್ನೆಯಷ್ಟೇ ನಡೆದ ಮೂರು ಮೂರು ಸೂಪರ್ ಓವರ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್​ ತಂಡವನ್ನು ಮಣಿಸಿದ್ದ ಹುಬ್ಬಳ್ಳಿ ತಂಡಕ್ಕೆ ಸತತ ಸೋಲುಗಳಿಂದ ಕಂಗೆಟ್ಟಿದ್ದ ಶಿವಮೊಗ್ಗ ತಂಡ ಸುಲಭ ತುತ್ತಾಗಲಿದೆ ಎಂದು ಭಾವಿಸಿದ್ದರು. ಆದರೆ ಅಭಿನವ್ ಆಟದ ಮುಂದೆ ಬಲಿಷ್ಠ ಹುಬ್ಬಳ್ಳಿ ಕೂಡ ಸೋಲಿಗೆ ಶರಣಾಗಬೇಕಾಯಿತು. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಹುಬ್ಬಳ್ಳಿ ತಂಡ 19.3 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 141 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ತಂಡದ ಪರ ನಾಯಕ ಮನೀಶ್ ಪಾಂಡೆ ಅತ್ಯಧಿಕ 44 ರನ್​ಗಳ ಇನ್ನಿಂಗ್ಸ್ ಆಡಿದರೆ, ಶ್ರೀಜಿತ್ 25 ರನ್ ಹಾಗೂ ಮನ್ವಂತ್ 28 ರನ್​ಗಳ ಕಾಣಿಕೆ ನೀಡಿದರು. ಈ ಮೂವರು ಆಟದಿಂದಾಗಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.

ಆಮೆಗತಿಯ ಆರಂಭ

ಈ ಗುರಿ ಬೆನ್ನಟ್ಟಿದ ಶಿವಮೊಗ್ಗ ತಂಡಕ್ಕೆ ಆಮೆಗತಿಯ ಆರಂಭ ಸಿಕ್ಕರೂ, ಮೊದಲ ವಿಕೆಟ್​ಗೆ 32 ರನ್​ಗಳ ಜೊತೆಯಾಟ ಸಿಕ್ಕಿತು. ಧೀರಜ್ ಮೋಹನ್ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಅಂತ್ಯವಾಯಿತು. ನಂತರ ಬಂದ ಭರತ್​ 1 ರನ್ ಬಾರಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ತಂಡ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಇಲ್ಲಿಂದ ತಂಡದ ಇನ್ನಿಂಗ್ಸ್ ಜವಬ್ದಾರಿ ಹೊತ್ತ ಅಭಿನವ್ ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್​ ನಡೆಸಿದರು.

27 ಎಸೆತಗಳಲ್ಲಿ 70 ರನ್ ಚಚ್ಚಿದ ಅಭಿನವ್

ನಾಯಕ ನಿಹಾಲ್ ಉಲ್ಲಾಳ್ ಜೊತೆ ಇನ್ನಿಂಗ್ಸ್ ಕಟ್ಟಿದ ಅಭಿನವ್ ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗರೆದರು. ಇದರ ಫಲವಾಗಿ ಕೇವಲ 21 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ ಅಭಿನವ್ ಆ ಬಳಿಕವೂ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿ 27 ಎಸೆತಗಳಲ್ಲಿ 70 ರನ್ ಬಾರಿಸಿ ಎಲ್​ಬಿ ಬಲೆಗೆ ಬಿದ್ದರು. ಅಭಿನವ್ ಅವರ ಈ ಸ್ಫೋಟಕ ಇನ್ನಿಂಗ್ಸ್​ನಲ್ಲಿ 2 ಬೌಂಡರಿ ಹಾಗೂ 9 ಭರ್ಜರಿ ಸಿಕ್ಸರ್​ಗಳು ಸೇರಿದ್ದವು. ಅಂತಿಮವಾಗಿ ಶಿವಮೊಗ್ಗ ತಂಡ 15.1 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು. ಈ ಪಂದ್ಯದಲ್ಲಿ ಅಭಿನವ್ ಹೊರತಾಗಿ ನಾಯಕ ನಿಹಾಲ್ ಕೂಡ ಅಜೇಯ 37 ರನ್​ಗಳ ಇನ್ನಿಂಗ್ಸ್ ಆಡಿದರು.

Published On - 10:05 pm, Sat, 24 August 24